ಹುಡುಗರೊಂದಿಗಿನ ಸ್ನೇಹ–ಸಲಿಗೆ ಕೆಟ್ಟದ್ದೇ?

7

ಹುಡುಗರೊಂದಿಗಿನ ಸ್ನೇಹ–ಸಲಿಗೆ ಕೆಟ್ಟದ್ದೇ?

Published:
Updated:
ಹುಡುಗರೊಂದಿಗಿನ ಸ್ನೇಹ–ಸಲಿಗೆ ಕೆಟ್ಟದ್ದೇ?

ನಾನು ಅಪ್ಪ–ಅಮ್ಮನ ಮುದ್ದಿನ ಮಗಳು. ಅಣ್ಣಂದಿರ ಮುದ್ದಿನ ತಂಗಿ, ಅವರ ಜೊತೆಗೆ ಬೆಳೆದ ನಾನು ಹುಡುಗರಂತೆ ಮನೋಭಾವ ಬೆಳೆಸಿಕೊಂಡೆ. ಬಾ‌ಲ್ಯದಿಂದಲೂ ನನಗೆ ಹುಡುಗರ ಜೊತೆ ಇರುವುದು ಇಷ್ಟ. ಶಾಲೆಯಲ್ಲೂ ಹುಡುಗರ ಜೊತೆಗೇ ಇರುತ್ತಿದ್ದೆ, ಅವರ ಜೊತೆಯಲ್ಲೇ ಕೂರುತ್ತಿದ್ದೆ. ಹುಡುಗಿಯರೆಂದರೆ ಆಗುವುದೇ ಇಲ್ಲ ಎಂದು ಇರಲಿಲ್ಲ. ಆದರೂ ಹುಡುಗರ ಜೊತೆ ಇರುವುದೇ ಇಷ್ಟವಾಗುತ್ತಿತ್ತು. ಹೀಗೆ ಹುಡುಗರ ಸ್ನೇಹದಲ್ಲೇ ಸುಂದರವಾಗಿದ್ದ ಜೀವನ ಫ್ರೌಡಾವಸ್ಥಗೆ ಬಂದಾಗ ಅತಂತ್ರವಾಗಿತ್ತು, ಕಾರಣ ಇಲ್ಲಸಲ್ಲದ ಮಾತುಗಳು.

ಅಲ್ಲಿಯವರೆಗೆ ಒಂದು ಮಾತನಾಡದ ಅಮ್ಮ ಕೂಡ ‘ಮಗಾ, ನಿನಗೆ ನಿತಿನ್, ರವಿ, ಆಸೀಫ್‌ಗಿಂತ ರಕ್ಷಾ, ರೇಖಾ ಯಾಕೆ ಇಷ್ಟ ಆಗೋಲ್ಲ? ಅವರ ಜೊತೆಗೆ ಸ್ನೇಹದಿಂದ ಇರಬಹುದಲ್ಲ’ ಎಂದಿದ್ದಳು.

ಕಾಲೇಜಿಗೆ ಬಂದೆ. ಅಲ್ಲೂ ನನ್ನ ಮನಸ್ಥಿತಿ ಬದಲಾಗಲಿಲ್ಲ. ನಾನು ಹುಡುಗರ ಜೊತೆಗೇ ಇರುತ್ತಿದ್ದೆ. ಬಾಲ್ಯದಿಂದಲೂ ಜೊತೆಗೆ ಇದ್ದ ಕೆಲ ಗೆಳತಿಯರು ನನ್ನಿಂದ ದೂರಾದರು. ಬಾಲ್ಯದಲ್ಲಿ, ಶಾಲಾದಿನಗಳಲ್ಲಿ ಹುಡುಗರ ಜೊತೆ ಇದ್ದ ನನ್ನನ್ನು ಗುರುತಿಸದ ಜನ ಕಾಲೇಜಿಗೆ ಬಂದ ಮೇಲೆ ಅದೇ ಕಾರಣಕ್ಕೆ ಗುರುತಿಸುವಂತಾಯಿತು. ಹಾಗಾದರೆ ಒಬ್ಬ ಹುಡುಗಿ ಹುಡುಗರ ಜೊತೆ ಮಾತನಾಡಿಕೊಂಡು, ಸುತ್ತಾಡಿಕೊಂಡು ಇದ್ದ ಮಾತ್ರಕ್ಕೆ ಅವಳ ಗುಣ ಸರಿಯಿಲ್ಲ, ಅವಳು ಫ್ಲರ್ಟ್ ಎಂಬ ಅರ್ಥವೇ?

ಖಂಡಿತ ಅಲ್ಲ. ಅದು ಅವರ ಮನೋಭಾವವಷ್ಟೇ. ಹುಡುಗಿಯರ ಮನಸ್ಥಿತಿಗಿಂತ ಹುಡುಗರ ಮನಸ್ಥಿತಿಯನ್ನೇ ಹೆಚ್ಚು ಮೆಚ್ಚುವ ಹುಡುಗಿಯರು ಹುಡುಗರ ಗೆಳೆತನ ಬಯಸುತ್ತಾರೆ. ಬೇರಾವುದೇ ಉದ್ದೇಶ ಅವರಿಗಿರುವುದಿಲ್ಲ. ಅಂತಹ ಹುಡುಗಿಯರು ಹುಡುಗರಲ್ಲಿ ಪರಿಶುದ್ಧ ಸ್ನೇಹವನ್ನು ಬಯಸುತ್ತಾರೆ ಎಂಬುದು ಅವರ ಮನಸ್ಸಿನಲ್ಲಿ ಇನ್ನಾವುದೇ ಕೆಟ್ಟ ಭಾವನೆ ಇರುವುದಿಲ್ಲ.               

ಇನ್ನೂ ಹೇಳಬೇಕು ಎಂದುಕೊಂಡರೆ ಒಬ್ಬ ಹುಡುಗಿ ಹುಟ್ಟಿದಾಗಿನಿಂದ ಅಣ್ಣ–ತಮ್ಮಂದಿರ ಜೊತೆಗೆ ಬೆಳೆದಿರುತ್ತಾಳೆ. ಅವರನ್ನೇ ನೋಡಿಕೊಂಡು ಬೆಳೆದ ಅವಳಿಗೆ ಅವರ ಅನುಕರಣೆಯೇ ಇಷ್ಟವಾಗುತ್ತದೆ. ಅವರಂತೆ ಬಟ್ಟೆ ಧರಿಸಬೇಕು, ಅವರಂತೆ ಹೊರಗಡೆ ತಿರುಗಾಡಬೇಕು, ಅವರಂತೆ ಯಾವುದಕ್ಕೂ ಭಯ ಪಡದೇ ಬದುಕಬೇಕು ಎಂಬುದು ಮೂಡಿರುತ್ತದೆ. ಮನೆಯಲ್ಲೂ ಹಾಗೇಯೇ ಬೆಳೆಸಿರುತ್ತಾರೆ. ಆ ಕಾರಣಕ್ಕೆ ಅವಳು ಹುಡುಗರಂತೆ ಬದುಕಲು ಇಷ್ಟಪಡುತ್ತಾರೆ.

ಇನ್ನೂ ಕೆಲವೊಮ್ಮೆ ಹುಡುಗಿಯರು ಹುಡುಗರ ಸ್ನೇಹವನ್ನು ಯಾಕೆ ಬಯಸುತ್ತಾರೆಂದರೆ ಸ್ನೇಹಿತ ಎಂದಿಗೂ ನನಗೆ ರಕ್ಷಕ ಎಂಬ ಭಾವನೆ ಅವರಲ್ಲಿ ಮೂಡಿರುತ್ತದೆ. ಆ ಕಾರಣಕ್ಕೆ ಎಲ್ಲಿಗೇ ಹೋಗಬೇಕಾದರೂ ಸದಾ ಸ್ನೇಹಿತ ಜೊತೆಗೆ ಹೋಗಬೇಕು ಎಂದು ಬಯಸುತ್ತಾಳೆ.

ಬಾಲ್ಯದಿಂದಲೂ ಹುಡುಗರ ಜೊತೆಗೆ ಬೆಳೆದ ಹುಡುಗಿಯು ಹುಡುಗ–ಹುಡುಗಿಯ ನಡುವೆ ವ್ಯತ್ಯಾಸ ಗುರುತಿಸುವುದಿಲ್ಲ, ಬದಲಾಗಿ ಅವಳು ಗುರುತಿಸಿವುದು ಕೇವಲ ಸ್ನೇಹವನ್ನು ಮಾತ್ರ. ಹಾಗಾಗಿ ಅವಳಲ್ಲಿ ತನ್ನ ಸ್ನೇಹಿತನಲ್ಲಿ ಯಾವುದೇ ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹಂಚಿಕೊಳ್ಳುತ್ತಿರುತ್ತಾಳೆ. ಅವರ ನಡುವೆ ಒಂದು ಕಂಫರ್ಟ್ ಝೋನ್ ಇರುತ್ತದೆ. ಅದು ಅವಳಲ್ಲಿ ಹುಡುಗರ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿರುತ್ತದೆ.

ಹುಡುಗಿಯರಿಗಿಂತ ಹುಡುಗರಲ್ಲೇ ಧೈರ್ಯ ಜಾಸ್ತಿ ಇರುತ್ತದೆ. ಆ ಧೈರ್ಯವನ್ನು ಆಕೆ ಎಷ್ಟೋ ಬಾರಿ ಗುರುತಿಸಿರುತ್ತಾಳೆ. ಆ ಕಾರಣಕ್ಕೂ ಅವಳು ಹುಡುಗರ ಜೊತೆ ಹೆಚ್ಚು ಬೆರೆಯಲು ಇಷ್ಟಪಡುಬಹುದು.

ಒಟ್ಟಾರೆಯಾಗಿ ಹೇಳಬೇಕೆಂದರೆ  ಈ ಹಲವು ಕಾರಣಗಳಿಂದ ಹುಡುಗಿ ಹುಡುಗರ ಜೊತೆ ಹೆಚ್ಚಿನ ಸಲುಗೆ–ಸ್ನೇಹದಿಂದ ಇರುತ್ತಾಳೆ. ಆದರೆ ಸ್ನೇಹದಿಂದ ಇದ್ದ ಮಾತ್ರಕ್ಕೆ ಆ ಹುಡುಗಿ ಚಾರಿತ್ರ್ಯವಧೆ ಮಾಡುವುದು ಸರಿಯಲ್ಲ. ಸ್ನೇಹ ಎನ್ನುವುದು ಜಾತಿ–ಧರ್ಮ, ಲಿಂಗ ಬೇಧವಿಲ್ಲದ ಒಂದು ಸುಮಧುರ ಸಂಬಂಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry