ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನವೂ ಒಂದು ಅಭಿವ್ಯಕ್ತಿಯಾಗಿದೆ

ಅಕ್ಷರ ಗಾತ್ರ

‘ನೋಟಾ’ ಮತದಾನದ ಸಾಧಕ ಬಾಧಕಗಳ ಕುರಿತು ವ್ಯಾಪಕ ಚರ್ಚೆಗಳಾಗುತ್ತಿವೆ. ಮತದಾನವೇ ಪ್ರಜಾಪ್ರಭುತ್ವದ ಅಡಿಗಲ್ಲಾಗಿದೆಯಾದರೂ ಭಾರತದ ಪ್ರತಿಯೊಬ್ಬ ಮತದಾರನೂ ತನ್ನ ಮತದಾನದ ಹಕ್ಕನ್ನೇನೂ ಚಲಾಯಿಸುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 66.4ರಷ್ಟು ಮತದಾರರು ಮಾತ್ರ ಮತದಾನ ಮಾಡಿದ್ದರು. ಅದಕ್ಕೂ ಹಿಂದಿನ (2009ರ) ಚುನಾವಣೆಯಲ್ಲಿ ಮತದಾನದ ಒಟ್ಟು ಪ್ರಮಾಣ ಕೇವಲ ಶೇ 58.19 ಇತ್ತು. ಹೀಗಿರುವಾಗ ನೋಟಾ ಅಭಿಯಾನ ತೀವ್ರಗೊಂಡರೆ ಅಭ್ಯರ್ಥಿಗಳ ಮತ ಗಳಿಕೆ ಇನ್ನಷ್ಟು ಕ್ಷೀಣಿಸುತ್ತದೆ ಎಂಬುದು ಎಲ್ಲ ರಾಜಕೀಯ ಪಕ್ಷಗಳ ಹಾಗೂ ಅವರ ಬೆಂಬಲಿಗರ ಆತಂಕವಾಗಿದೆ.

ಅದಕ್ಕಿಂತಲೂ ಮಿಗಿಲಾಗಿ ಭಾರತದ ಚುನಾವಣೆಗಳಲ್ಲಿ ನೋಟಾ ಮತಗಳಿಗೆ ಯಾವುದೇ ಸಿಂಧುತ್ವವಿಲ್ಲ. ಗ್ರಾಮೀಣ ಸಮುದಾಯ ನೋಟಾ ಬಗ್ಗೆ ಆಸಕ್ತಿ ಹೊಂದಿಲ್ಲ. ಹಾಗಾಗಿ ಸಮಸ್ಯೆಗಳಿಗೆ ನೋಟಾ ಪರಿಹಾರವಲ್ಲ ಎಂಬ ವಾದವೂ ಇದೆ. ಇಂದು ನೋಟಾಕ್ಕೆ ಸಿಂಧುತ್ವವಿಲ್ಲದಿರಬಹುದು. ಆದರೆ ನೋಟಾ ಅಭಿಯಾನ ಮುಂದುವರಿದರೆ ಕ್ರಮೇಣ ರಾಜಕೀಯ ವ್ಯವಸ್ಥೆಯಲ್ಲೇ ಆಮೂಲಾಗ್ರ ಪರಿವರ್ತನೆಗಳಾಗಬಹುದು. ಒಂದು ಚಲನಶೀಲ ವ್ಯವಸ್ಥೆಯಲ್ಲಿ ಯಾವ ಪರಿಪಾಟವೂ ಚಿರಸ್ಥಾಯಿಯಲ್ಲ. ಯಾವ ಸಮುದಾಯವೂ ಶಾಶ್ವತವಾಗಿ ಜಡವಾಗಿ ಉಳಿಯುವುದಿಲ್ಲ.

ಎಲ್ಲ ಬಗೆಯ ಅಭಿಪ್ರಾಯಗಳಿಗೂ ಆಸ್ಪದವಿದ್ದಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ನೋಟಾ ಮತಗಳಿಗೂ ಮಾನ್ಯತೆ ಸಿಗಬೇಕಾಗುತ್ತದೆ, ಇಂದಲ್ಲ ನಾಳೆ ಸಿಕ್ಕರೂ ಸಿಕ್ಕೀತು. ‘ಎಲ್ಲ ಅಭ್ಯರ್ಥಿಗಳೂ ಅಯೋಗ್ಯರೇ ಆಗಿದ್ದಾರಾದರೂ ಅವರಲ್ಲೇ ಅತಿ ಕಡಿಮೆ ಅಯೋಗ್ಯನನ್ನು ಆರಿಸಲೇಬೇಕು’ ಎಂದು ಒತ್ತಾಯಪಡಿಸುವುದೂ ಒಂದು ಸೂಕ್ಷ್ಮ ರೂಪದ ದಬ್ಬಾಳಿಕೆಯೇ ಆಗಿದೆ. ಎಲ್ಲ ಬಗೆಯ ದಬ್ಬಾಳಿಕೆಗಳನ್ನೂ ನಿವಾರಿಸುವ ಆಶಯವುಳ್ಳ ಚುನಾವಣಾ ಪ್ರಜಾಪ್ರಭುತ್ವವು ತನ್ನ ಉಳಿವಿಗಾಗಿ ತಾನೇ ದಬ್ಬಾಳಿಕೆಯ ತಂತ್ರ ಅನುಸರಿಸುವುದು ಸೂಕ್ತವಲ್ಲ. ಅಲ್ಲದೆ ಯಾವುದೇ ಅಭ್ಯರ್ಥಿಯ ಯೋಗ್ಯತೆ– ಅಯೋಗ್ಯತೆಯ ಬಗ್ಗೆ ಯಾರೊಬ್ಬರೂ ಅಂತಿಮ ಷರಾ ಬರೆಯಲಾರರು.

ಹಾಗೆ ನೋಡಿದರೆ ನೋಟಾಕ್ಕೆ ಮತ ಚಲಾಯಿಸುವ ಮತದಾರ ಸಾಮಾನ್ಯ ಮತದಾರನಿಗಿಂತಲೂ ಮಿಗಿಲಿನ ಸಂದೇಶ ನೀಡುತ್ತಿರುತ್ತಾನೆ. ಅಭ್ಯರ್ಥಿಗೆ ನೀಡಲಾಗುವ ಮತ ಕೇವಲ ಒಂದು ಸಮ್ಮತಿಯಾಗಿದೆ. ಆದರೆ ನೋಟಾ ಸಮ್ಮತಿಯಲ್ಲ, ಅದು ಅಸಮ್ಮತಿಯೂ ಅಲ್ಲ. ಅದೊಂದು ಮೌನ ಪ್ರತಿಭಟನೆಯಾಗಿದೆ. ನೋಟಾಕ್ಕೆ ಮತ ನೀಡುವ ಮೂಲಕ ಒಬ್ಬ ಮತದಾರ ‘ಒಟ್ಟು ವ್ಯವಸ್ಥೆಯ ಮರುಪರಿಶೀಲನೆಯಾಗಬೇಕು’ ಎಂಬ ಸಂದೇಶ ನೀಡುತ್ತಿರುತ್ತಾನೆ. ನೋಟಾ ಮತಗಳು ರಾಜಕೀಯ ಪಕ್ಷಗಳ ಆತ್ಮವಿಮರ್ಶೆಗೂ ದಾರಿ ಮಾಡಿಕೊಡುತ್ತವೆ.

ಇಂದು ವಿದ್ಯಾವಂತರೆನಿಸಿಕೊಂಡ ಎಷ್ಟೋ ಮತದಾರರು ಚುನಾವಣಾ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯದ ಧೋರಣೆ ತೋರಿಸುತ್ತಲೇ ಭಂಡತನದಿಂದ ವ್ಯವಸ್ಥೆಯ ಪ್ರತಿಯೊಂದು ಲಾಭವನ್ನೂ ಪಡೆಯತ್ತಿದ್ದಾರೆ. ಅಂತಹವರ ನಿರ್ಲಕ್ಷ್ಯವನ್ನು, ಭಂಡತನವನ್ನು ಪ್ರಶ್ನಿಸಿದರೆ ‘ಯಾವ ಅಭ್ಯರ್ಥಿಯೂ ಯೋಗ್ಯನಲ್ಲ’ ಎಂಬ ಸಿನಿಕತನದ ಉತ್ತರ ಅವರಲ್ಲಿ ಸದಾ ಸಿದ್ಧವಿರುತ್ತದೆ. ನೋಟಾ ಮತದಾನದ ಪ್ರವರ್ಧನೆಯಿಂದ ಇಂತಹ ಭಂಡತನವನ್ನು, ಸಿನಿಕತನವನ್ನು ಕಾನೂನಾತ್ಮಕವಾಗಿಯೇ ಮಟ್ಟ ಹಾಕುವ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ನೋಟಾ ಮತಗಳಿಗೆ ಸದ್ಯಕ್ಕೆ ಭಾರತದಲ್ಲಿ ಸಿಂಧುತ್ವ ಇಲ್ಲದಿರಬಹುದು, ಆದರೆ ಪ್ರಜಾಪ್ರಭುತ್ವವನ್ನು ಒಪ್ಪಿರುವ ಇತರ ದೇಶಗಳಲ್ಲಿ ನೋಟಾಕ್ಕೆ ತನ್ನದೇ ಆದ ಅಧಿಕೃತತೆ ಉಂಟು. ಉದಾ: ಕೆನಡಾ, ಇಂಡೊನೇಷ್ಯಾದಂತಹ ದೇಶಗಳಲ್ಲಿ ನೋಟಾ ಮತಗಳು ಬಹುಮತ ಗಳಿಸಿದರೆ ಮರು ಚುನಾವಣೆ ಮಾಡಲಾಗುತ್ತದೆ, ಇಂಗ್ಲೆಂಡ್‌ನಲ್ಲಿ ‘ನೋಟಾ ಯುಕೆ’ ಎಂಬ ಸಂಸ್ಥೆ ನೋಟಾ ಮತಗಳಿಗೆ ಅಧಿಕೃತತೆ ನೀಡುವ ನಿಟ್ಟಿನಲ್ಲಿ ಹಲವು ಅಭಿಯಾನ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ನೋಟಾ ಒಂದು ಅಸಮ್ಮತಿಯಾದರೂ ಅದಕ್ಕೆ ‘ಯಾವುದೇ ಅಭ್ಯರ್ಥಿ ಬೇಡ’ ಎಂಬ ಸೀಮಿತ ವ್ಯಾಖ್ಯಾನ ನೀಡುವುದು ತರವಲ್ಲ. ಇಲ್ಲಿ ಪ್ರಶ್ನೆ ಇರುವುದು ಅಭ್ಯರ್ಥಿಯ ಆಯ್ಕೆಯದ್ದಲ್ಲ. ಇಂದು ಎಲ್ಲ ರಾಜಕೀಯ ಪಕ್ಷಗಳೂ ಸಿದ್ಧಾಂತವನ್ನು ಗಾಳಿಗೆ ತೂರಿವೆ. ಅನ್ಯ ಪಕ್ಷಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ. ಸಮ್ಮಿಶ್ರ ಸರ್ಕಾರ ರಚನೆ ಅನಿವಾರ್ಯ ಎಂಬ ಪರಿಸ್ಥಿತಿ ಸೃಷ್ಟಿಸಿವೆ. ಹಾಗಾಗಿ ಸದ್ಯದ ಪಕ್ಷ ರಾಜಕಾರಣದ ಸ್ವರೂಪದಲ್ಲೇ ಕೆಲವು ಗುರುತರವಾದ ದೋಷಗಳಿವೆ ಎಂದು ಯೋಚಿಸುವ ಮತದಾರರುಂಟು. ಎಂ.ಎನ್. ರಾಯ್‍ರಂತಹ ಕಮ್ಯುನಿಸ್ಟ್ ಚಿಂತಕರು ಸೂಚಿಸುವ ‘ಪಕ್ಷರಹಿತ ಚುನಾವಣಾ ಪ್ರಜಾಪ್ರಭುತ್ವ’ವನ್ನು ಅನುಮೋದಿಸುವವರುಂಟು.

ಪ್ರಜೆಗಳಿಗೆ ಪಕ್ಷ ರಾಜಕಾರಣದೊಂದಿಗೆ ಅಥವಾ ಒಂದು ನಿರ್ದಿಷ್ಟ ಚುನಾವಣಾ ಪ್ರಕ್ರಿಯೆಯೊಂದಿಗೆ ತಕರಾರಿದ್ದರೂ ಆ ಪ್ರಕ್ರಿಯೆಗೆ ಅವರು ತಲೆಬಾಗಲೇಬೇಕೆಂದು ಆಗ್ರಹಿಸುವುದು ಪ್ರಜಾಪ್ರಭುತ್ವದ ಮೌಲ್ಯವಲ್ಲ. ಈ ನಿಟ್ಟಿನಲ್ಲಿ ನೋಟಾ ಮತ ಚಲಾವಣೆ ಬರೀ ಸಿನಿಕತನವಲ್ಲ, ಅಭ್ಯರ್ಥಿಗಳ ಬಗೆಗಿನ ಜುಗುಪ್ಸೆಯ ಅಭಿವ್ಯಕ್ತಿಯಲ್ಲ, ಬಹುತೇಕ ಮತದಾರರಿಗೆ ಅದೊಂದು ತಾತ್ವಿಕ ಆಯ್ಕೆಯೂ ಹೌದು.

‘ಮನುಷ್ಯ ಆಂತರ್ಯದಲ್ಲಿ ಒಬ್ಬ ಅರಾಜಕತಾವಾದಿಯಾಗಿದ್ದಾನೆ. ಯಾರ ನಿಯಂತ್ರಣಕ್ಕೂ ಒಳಪಡದ, ಯಾರನ್ನೂ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಬಯಸದ ಸ್ವಾತಂತ್ರ್ಯ ಪ್ರಿಯನಾಗಿದ್ದಾನೆ. ಅಂತಿಮವಾಗಿ ಪ್ರಜಾಪ್ರಭುತ್ವವು ಸಮಾಜವನ್ನು ಇಂತಹ ಅರಾಜಕತಾವಾದದತ್ತ ಕರೆದೊಯ್ಯಬೇಕು’ ಎಂದು ಟಾಲ್‍ಸ್ಟಾಯ್ ಹೇಳುತ್ತಾನೆ. ಇಲ್ಲಿ ಅರಾಜಕತೆ ಎಂದರೆ ಅತಂತ್ರದ ಸ್ಥಿತಿಯೆಂದಲ್ಲ. ಒಂದು ಸಮಾಜವನ್ನು ಪ್ರಭುತ್ವದ ಶಕ್ತಿಗಳು ನಿಯಂತ್ರಿಸದೆ ಪ್ರಜೆಗಳ ನೈತಿಕತೆ, ಮಾನವೀಯತೆಗಳೇ ಆ ಸಮಾಜವನ್ನು ಮುನ್ನಡೆಸುವ ಸರ್ವಸ್ವತಂತ್ರ ಸ್ಥಿತಿಯೆಂದು ಟಾಲ್‍ಸ್ಟಾಯ್ ವ್ಯಾಖ್ಯಾನಿಸುತ್ತಾನೆ.

ನೋಟಾ ಹೊಣೆಗೇಡಿತನವಲ್ಲ, ಅದು ಇಂತಹ ಸರ್ವಸ್ವತಂತ್ರ ಸಮಾಜಕ್ಕಾಗಿ ಹಂಬಲಿಸುವವರ ಧ್ವನಿಯಾಗಿದೆ. ನೋಟಾ ಪಕ್ಷ ರಾಜಕಾರಣದಿಂದ ದೂರ ಓಡುವ ಪಲಾಯನವಾದವಲ್ಲ, ಅದು ವಿಭಿನ್ನ ಪಕ್ಷಗಳ ನಡುವಿನ ಒಂದು ತಟಸ್ಥ ನೆಲೆಯಾಗಿದೆ. ಪರ– ವಿರೋಧದ ನೆಲೆಗಳಿಂದಾಚೆಗೆ ತಾಟಸ್ಥ್ಯದ ನೆಲೆಯೊಂದು ಇದ್ದಾಗಲಷ್ಟೇ ಒಂದು ಸಾಮಾಜಿಕ ವ್ಯವಸ್ಥೆ ಸಹನೀಯವೆನಿಸುತ್ತದೆ ಮತ್ತು ಅದರ ಎಲ್ಲೆಕಟ್ಟುಗಳು ನಿರಂತರವಾಗಿ ವಿಸ್ತಾರಗೊಳ್ಳಲು ಅವಕಾಶವಾಗುತ್ತದೆ. ಅಧಿಕಾರಕ್ಕಾಗಿ ಯಾವುದೇ ಪಕ್ಷದೊಂದಿಗೆ, ಯಾವುದೇ ಜಾತಿಯೊಂದಿಗೆ ಅನೈತಿಕ ಹೊಂದಾಣಿಕೆ ಮಾಡಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುವ ಪಕ್ಷಗಳಿಗೆ ಯಾವುದೇ ಮತದಾರನ ಬೆಂಬಲವಿರುವುದಿಲ್ಲ. ಮತದಾರನ ಈ ಅಸಹನೆಯನ್ನು ಹಾಗೂ ತಾತ್ವಿಕ ಹೊಣೆಗಾರಿಕೆಯನ್ನು ಅಭಿವ್ಯಕ್ತಿಸುವ ಅವಕಾಶವನ್ನು ನೋಟಾ ನೀಡುತ್ತದೆ. ಈ ಹಿನ್ನೆಲೆಯಲ್ಲೇ ಸುಪ್ರೀಂ ಕೋರ್ಟ್ ನೋಟಾ ಜಾರಿಗೊಳಿಸಲು ಚುನಾವಣಾ ಆಯೋಗಕ್ಕೆ 2013ರಲ್ಲಿ ಆದೇಶಿಸಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT