ಸೋಮವಾರ, ಮಾರ್ಚ್ 1, 2021
24 °C

ಕಿರಾಣಿ ಅಂಗಡಿಗಳ ಮೀರಿ ಬೆಳೆದ ವಾಲ್‌ಮಾರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರಾಣಿ ಅಂಗಡಿಗಳ ಮೀರಿ ಬೆಳೆದ ವಾಲ್‌ಮಾರ್ಟ್‌

ಅರ್ಕಾನ್ಸಸ್‍ನ ರೋಜರ್ಸ್‌ನಲ್ಲಿ 1962ರಲ್ಲಿ ವಾಲ್‌ಮಾರ್ಟ್‌ನ ಮೊದಲ ಅಂಗಡಿ ತೆರೆದ ಸ್ಯಾಮ್‍ ವಾಲ್ಟನ್‍ ತಾವೊಬ್ಬ ಸಹಜ ವ್ಯಾಪಾರಿ ಎಂದು ತಮ್ಮನ್ನು ಭಾವಿಸಿಕೊಂಡಿದ್ದರು. ‘ನಾನು ಏನನ್ನಾದರೂ ಮಾರಾಟ ಮಾಡಬಲ್ಲೆ’ ಎಂದು ಅವರೊಮ್ಮೆ ಬರೆದಿದ್ದರು.

ಚಿಲ್ಲರೆ ಮಾರಾಟ ಕ್ಷೇತ್ರದ ಈ ದೈತ್ಯ ಕಂಪನಿ ಈಗ ತಾನು ದೊಡ್ಡ ದೊಡ್ಡ ಬ್ರ್ಯಾಂಡ್‌ಗಳನ್ನು ಖರೀದಿಸುವುದರಲ್ಲಿಯೂ ಯಶಸ್ಸು ಪಡೆಯಬಲ್ಲೆ ಎಂಬುದನ್ನು ಸಾಬೀತುಮಾಡಿದೆ.

ಭಾರತದ ಇ- ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನ ಶೇ 77ರಷ್ಟು ಷೇರುಗಳನ್ನು ವಾಲ್‍ಮಾರ್ಟ್ ಕಂಪನಿಯು 1,600 ಕೋಟಿ ಡಾಲರ್‌ಗೆ (ಸುಮಾರು ₹1.07 ಲಕ್ಷ ಕೋಟಿ) ಕಳೆದ ಬುಧವಾರ ಖರೀದಿ ಮಾಡಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಹೆಚ್ಚು ಮುಂದುವರಿಯುತ್ತಿರುವ ಮಾರುಕಟ್ಟೆಯೊಂದನ್ನು ವಶಕ್ಕೆ ಪಡೆಯುವ ತಂತ್ರದ ಭಾಗವಾಗಿ ವಾಲ್‍ಮಾರ್ಟ್ ಈ ಖರೀದಿ ಮಾಡಿದೆ. ಫ್ಲಿಪ್‍ಕಾರ್ಟ್‌ ಖರೀದಿ ವಾಲ್‌ಮಾರ್ಟ್‌ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮತ್ತು ಅತಿ ಹೆಚ್ಚು ಸವಾಲುಗಳನ್ನು ಹೊಂದಿರುವ ವಹಿವಾಟಾಗಿದೆ. ಕಳೆದ 18 ತಿಂಗಳ ಅವಧಿಯಲ್ಲಿ, ಪುರುಷರ ದಿರಿಸಿನ ಬ್ರ್ಯಾಂಡ್‌ ಮತ್ತು ಪೂರೈಕೆ ಸೇವೆಯ ನವೋದ್ಯಮವೊಂದನ್ನು ವಾಲ್‍ಮಾರ್ಟ್ ಖರೀದಿ ಮಾಡಿದೆ.

ಇನ್ನೊಂದು ದೈತ್ಯ ಕಂಪನಿ ಅಮೆಜಾನ್‍ ಪ್ರಬಲವಾಗಿರುವ ಡಿಜಿಟಲ್‍ ಖರೀದಿ ಯುಗದಲ್ಲಿ ವಾಲ್ಟನ್‍ ಅವರ ಕಾರ್ಯತಂತ್ರವನ್ನು ಮೇಲ್ದರ್ಜೆಗೆ ಏರಿಸಲೇಬೇಕಿದೆ ಎಂಬುದು ವಾಲ್‌ಮಾರ್ಟ್‌ನ ಈಗಿನ ಖರೀದಿಯ ಹಿಂದೆ ಇರುವ ದೊಡ್ಡ ಚಾಲಕಶಕ್ತಿ.

ಕೆಲವು ದಶಕಗಳಿಂದ ವಾಲ್‍ಮಾರ್ಟ್ ಕಂಪನಿಯು ಅಮೆರಿಕದಾದ್ಯಂತ ದೊಡ್ಡ ದೊಡ್ಡ ಅಂಗಡಿಗಳನ್ನು ತೆರೆಯುತ್ತಲೇ ಬಂದಿದೆ. ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ಸ್ಥಳೀಯವಾದ ಸಣ್ಣ ಚಿಲ್ಲರೆ ಕಿರಾಣಿ ಅಂಗಡಿಗಳು ಮತ್ತು ಡಿಪಾರ್ಟ್‌ಮೆಂಟ್‌ ಸ್ಟೋರ್‌ಗಳನ್ನು ಚಚ್ಚಿ ಹಾಕಿದೆ. ಸಣ್ಣ ಪಟ್ಟಣಗಳಲ್ಲಿ ದೊಡ್ಡ ಪ್ರಾಬಲ್ಯವನ್ನು ವಾಲ್‍ಮಾರ್ಟ್ ಪಡೆದುಕೊಂಡಿದೆ. ಈಗ ಅಮೆರಿಕದ ಶೇ 90ರಷ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಕನಿಷ್ಠ ಹತ್ತು ಮೈಲಿಗೊಂದು ವಾಲ್‍ಮಾರ್ಟ್ ಅಂಗಡಿ ಇದ್ದು, ಅಲ್ಲಿ ವಿಸ್ತರಣೆಗೆ ಅವಕಾಶವೇ ಇಲ್ಲ.

ಚಾರಿತ್ರಿಕವಾಗಿ ನೋಡಿದರೆ, ಗಣನೀಯ ಎನಿಸುವಂತಹ ಬೇರೆ ಕಂಪನಿಗಳನ್ನು ವಾಲ್‍ಮಾರ್ಟ್ ಖರೀದಿ ಮಾಡಿಲ್ಲ ಮತ್ತು ಇಷ್ಟೆಲ್ಲ ವರ್ಷಗಳಲ್ಲಿ ಮಿತವಾಗಿಯೇ ಖರ್ಚು ಮಾಡುತ್ತಿದೆ. ಆದರೆ, ಈಗ ವಿದೇಶಿ ಮಾರುಕಟ್ಟೆಗಳನ್ನು ವಶಕ್ಕೆ ಪಡೆಯುವುದಕ್ಕಾಗಿ

ಕೋಟ್ಯಂತರ ಡಾಲರುಗಳನ್ನು ವೆಚ್ಚ ಮಾಡುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ತನ್ನ ಕಿರಾಣಿ ಅಂಗಡಿಗಳನ್ನು ವಿಸ್ತರಿಸಲು ಯತ್ನಿಸುತ್ತಿದೆ.

ಈ ಪ್ರಕ್ರಿಯೆಯಲ್ಲಿ ವಾಲ್‍ಮಾರ್ಟ್ ಕಂಪನಿಯು ಚಿಲ್ಲರೆ ಮಾರಾಟಗಾರರು ಮತ್ತು ಅಮೆಜಾನ್‍ನ ಪ್ರತಿಸ್ಪರ್ಧಿಗಳಾಗಿರುವ ತಂತ್ರಜ್ಞಾನ ಕಂಪನಿಗಳ ಜಾಗತಿಕ ಜಾಲವೊಂದನ್ನು ಕಟ್ಟಿಕೊಳ್ಳಲು ಆರಂಭಿಸಿದೆ. ಆನ್‍ಲೈನ್‍ ವ್ಯಾಪಾರಕ್ಕಾಗಿ ಗೂಗಲ್‍ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಫ್ಲಿಪ್‍ಕಾರ್ಟ್‌ನಲ್ಲಿ ವಾಲ್‍ಮಾರ್ಟ್ ಜತೆಗೆ ಮೈಕ್ರೊಸಾಫ್ಟ್ ಕೂಡ ಪಾಲು ಹೊಂದಿದೆ.

‘ಅಮೆಜಾನ್‍ನ ಪ್ರಾಬಲ್ಯದ ಕ್ಷೇತ್ರದ ಮೇಲೆ ದಾಳಿ ನಡೆಸುವ ಉತ್ಸಾಹವನ್ನು ವಾಲ್‍ಮಾರ್ಟ್ ಯಾಕೆ ಹೊಂದಿದೆ ಎಂಬುದೇ ಅರ್ಥವಾಗುವುದಿಲ್ಲ’ ಎಂದು ಸ್ಕಾಟ್‍ ಮುಷ್ಕಿನ್ ಹೇಳುತ್ತಾರೆ. ಅವರು ವೋಲ್ಫ್ ರಿಸರ್ಚ್ ಸಂಸ್ಥೆಯ ಚಿಲ್ಲರೆ ಮಾರಾಟ ವಿಶ್ಲೇಷಕರಾಗಿದ್ದಾರೆ. ‘ಅಮೆಜಾನ್‍ ಬಗ್ಗೆ ಅವರಿಗೆ ಭಯ ಇರುವಂತೆ ಕಾಣಿಸುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಆಕರ್ಷಣೆ: ಡಿಜಿಟಲ್‍ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಭಾರತವು ಸುವರ್ಣ ಅವಕಾಶ ಒದಗಿಸಲಿದೆ ಎಂದು ವಾಲ್‌ಮಾರ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾವ್‍ ಮೆಕ್‍ಮಿಲನ್‍ ಭಾವಿಸಿದ್ದಾರೆ. ಭಾರತದಲ್ಲಿ 2000ನೇ ಇಸವಿಯ ನಂತರ ಜನಿಸಿದ 43 ಕೋಟಿ ಜನರಿದ್ದಾರೆ. ಇಲ್ಲಿ ಸ್ಮಾರ್ಟ್ ಫೋನ್‍ ಹೊಂದಿರುವವರ ಸಂಖ್ಯೆ ಮುಂದಿನ ಮೂರು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ.

‘ಸ್ವಲ್ಪ ಹಿಂದೆ ನಿಂತು ಜಗತ್ತು ಮತ್ತು ಇತರ ಎಲ್ಲ ದೇಶಗಳತ್ತ ನೋಡಿದರೆ, ಆ ದೇಶಗಳ ಗಾತ್ರ, ಅವುಗಳ ಅಭಿವೃದ್ಧಿ ದರ, ಸಾಮರ್ಥ್ಯಗಳನ್ನು ಗಮನಿಸಿದರೆ ನಾವು ಹುಡುಕುತ್ತಿರುವಂತಹ ಅವಕಾಶ ಎಲ್ಲಿಯೂ ಇಲ್ಲ’ ಎಂದು ಮೆಕ್‍ಮಿಲನ್‍ ಬುಧವಾರ ಹೇಳಿದ್ದಾರೆ. ಭಾರತದಿಂದ ಕಾನ್ಫರೆನ್ಸ್ ಕರೆ ಮೂಲಕ ಅವರು ಮಾತನಾಡಿದರು. ಆದರೆ, ಈ ಉತ್ಸಾಹ ಹೂಡಿಕೆದಾರರಲ್ಲಿ ಕಾಣಿಸುತ್ತಿಲ್ಲ. ಫ್ಲಿಪ್‍ಕಾರ್ಟ್‌ ಖರೀದಿಯ ನಂತರ ವಾಲ್‍ಮಾರ್ಟ್ ಕಂಪನಿಯ ಷೇರು ಬೆಲೆ ಶೇಕಡ ಮೂರರಷ್ಟು ಕುಸಿದಿದೆ. ಅಮೆರಿಕದ ಷೇರುಪೇಟೆ ತಾಳ್ಮೆ ಪ್ರದರ್ಶಿಸಬೇಕು ಎಂದು ವಾಲ್‍ಮಾರ್ಟ್ ಕೋರುತ್ತಿದೆ. ಭಾರಿ ಪ್ರಮಾಣದಲ್ಲಿ ಅಭಿವೃದ‍್ಧಿಯಾಗುತ್ತಿರುವ ಮಾರುಕಟ್ಟೆಗಳೆಡೆಗೆ ಗಮನ ಕೇಂದ್ರೀಕರಿಸಲು ಮತ್ತು ಕುಂಟುತ್ತಿರುವ ಮಾರುಕಟ್ಟೆಗಳಿಂದ ಹಿಂದಕ್ಕೆ ಸರಿಯುವುದಕ್ಕಾಗಿ ವಾಲ್‍ಮಾರ್ಟ್ ತನ್ನಲ್ಲಿರುವ ಹಣ ಮತ್ತು ಸಂಪನ್ಮೂಲಗಳನ್ನು ಬಳಸುತ್ತಿದೆ.

ಬ್ರಿಟನ್‍ನ ಕಿರಾಣಿ ಅಂಗಡಿ ಸರಪಣಿ ಆಸ್ಡಾ ಸ್ಟೋರ್ಸ್‌ ಲಿಮಿಟೆಡ್‌ನಲ್ಲಿ ಹೊಂದಿರುವ ದೊಡ್ಡ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ವಾಲ್‍ಮಾರ್ಟ್ ಕಳೆದ ತಿಂಗಳು ಒಪ್ಪಿಗೆ ಸೂಚಿಸಿದೆ. ಪ್ರತಿಸ್ಪರ್ಧಿ ಜೆ.ಸೈನ್ಸ್‌ಬರಿಗೆ ಈ ಷೇರುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಮಾರಾಟದಿಂದಾಗಿ ವಾಲ್‌ಮಾರ್ಟ್‌ಗೆ 370 ಕೋಟಿ ಡಾಲರ್ (ಸುಮಾರು ₹ 24,790 ಕೋಟಿ) ದೊರೆಯಲಿದೆ. ಬ್ರಿಟನ್‍ನಲ್ಲಿ ಈಗ ವಿವಿಧ ಕಂಪನಿಗಳು ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿವೆ. ಈ ಸ್ಪರ್ಧೆಗೆ ತನ್ನನ್ನು ಒಡ್ಡಿಕೊಳ್ಳುವ ಒತ್ತಡದಿಂದಲೂ ವಾಲ್‍ಮಾರ್ಟ್ ಮುಕ್ತವಾಗಲಿದೆ.

ಜಪಾನ್‍ನಲ್ಲಿ ಹೊಂದಿದ್ದ ಅಂಗಡಿಗಳನ್ನು ವಾಲ್‍ಮಾರ್ಟ್ ಅಲ್ಲಿನ ಇ-ಕಾಮರ್ಸ್ ಕಂಪನಿ ರಕುಟೆನ್‍ಗೆ ಮಾರಾಟ ಮಾಡಿದೆ. ರಕುಟೆನ್‍, ಜಪಾನ್‍ನಲ್ಲಿ ಆನ್‍ಲೈನ್‍ ಕಿರಾಣಿ ಸಾಮಗ್ರಿಗಳ ಮಾರಾಟವನ್ನೂ ಮಾಡುತ್ತಿದೆ.

ಚೀನಾದಲ್ಲಿ ವಾಲ್‍ಮಾರ್ಟ್ ತನ್ನ ವಹಿವಾಟನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಅಲ್ಲಿ, ಜೆಡಿ ಡಾಟ್‍ಕಾಂನ ಸ್ವಲ್ಪ ಷೇರುಗಳನ್ನು ಖರೀದಿಸಿದೆ. ಈ ಕಂಪನಿಯು ಅಮೆಜಾನ್‍ ಮತ್ತು ಚೀನಾದ್ದೇ ಆದ ಇ-ಕಾಮರ್ಸ್ ದೈತ್ಯ ಕಂಪನಿ ಅಲಿಬಾಬಾಗೆ ಸ್ಪರ್ಧೆ ಒಡ್ಡುತ್ತಿದೆ.

ವಾಲ್‌ಮಾರ್ಟ್‌ನ ಈ ನಡೆಗಳು ಜಾಗತಿಕ ಚಿಲ್ಲರೆ ಮಾರಾಟದ ಚದುರಂಗದಾಟದಲ್ಲಿ ಉತ್ತಮ ನಡೆಗಳಂತೆ ತೋರುತ್ತಿವೆ. ಆದರೆ ವಾಲ್‍ಮಾರ್ಟ್ ತನ್ನ ಸಾಧನೆಯ ಮೂಲಕ ಇದನ್ನು ಸಮರ್ಥಿಸಿಕೊಳ್ಳಬೇಕಿದೆ. ಫ್ಲಿಪ್‍ಕಾರ್ಟನ್ನು ಲಾಭದತ್ತ ಕೊಂಡೊಯ್ಯಲು ವಾಲ್‍ಮಾರ್ಟ್ ಕೋಟ್ಯಂತರ ಡಾಲರ್ ಖರ್ಚು ಮಾಡಲೇಬೇಕಿದೆ. ಈ ಖರೀದಿಯಿಂದಾಗಿ ವಾಲ್‌ಮಾರ್ಟ್‌ನ ಮುಂದಿನ ವರ್ಷದ ಗಳಿಕೆ ಪ್ರತಿ ಷೇರಿಗೆ ಶೇ 60ರಷ್ಟು ಕಡಿತವಾಗಲಿದೆ.

ಕಿರಾಣಿ ಸಮರ: ಮನುಷ್ಯ ತಿನ್ನದೇ ಇರಲು ಸಾಧ್ಯವಿಲ್ಲ. ವಾಲ್‍ಮಾರ್ಟ್ ಬೆಳವಣಿಗೆ ಕಾರ್ಯತಂತ್ರದ ಅಡಿಪಾಯವೇ ಇದು. ಅಮೆರಿಕದ ಅತ್ಯಂತ ದೊಡ್ಡ ಕಿರಾಣಿ ಅಂಗಡಿ ಸರಪಣಿ ವಾಲ್‍ಮಾರ್ಟ್. ಆದರೆ, ತಾಜಾ ಆಹಾರದ ವಿಚಾರಕ್ಕೆ ಬಂದರೆ, ಅಮೆಜಾನ್‍ನ ಪ್ರತಿಸ್ಪರ್ಧೆಯನ್ನು ಈ ಕಂಪನಿ ಎದುರಿಸಬೇಕಿದೆ. ಕಳೆದ ಜೂನ್‍ನಲ್ಲಿ ವ್ಹೋಲ್‍ ಫುಡ್ಸ್ ಕಂಪನಿಯನ್ನು ಖರೀದಿ ಮಾಡಿದ ನಂತರ ಮಾರುಕಟ್ಟೆ ವಶಪಡಿಸಿಕೊಳ್ಳಲು ಅಮೆಜಾನ್‍ ಭಾರಿ ಪ್ರಯತ್ನ ನಡೆಸುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ‘ಕ್ಲಿಕ್‍ ಅಂಡ್‍ ಕಲೆಕ್ಟ್’ ಯೋಜನೆ ಮೂಲಕ ವಾಲ್‍ಮಾರ್ಟ್ ಗಣನೀಯ ಯಶಸ್ಸು ಕಂಡಿದೆ. ಖರೀದಿ ಮಾಡುವವರು ಆನ್‍ಲೈನ್‍ ಮೂಲಕ ವಸ್ತುಗಳನ್ನು ಆಯ್ಕೆ ಮಾಡಿ, ಅಂಗಡಿಗೆ ಬಂದು ಅವುಗಳನ್ನು ತೆಗೆದುಕೊಂಡು ಹೋಗುವುದು ಈ ಯೋಜನೆ. ಕಿರಾಣಿ ಸಾಮಗ್ರಿಗಳನ್ನು ಮನೆಗೆ ಪೂರೈಸುವ ಸೌಲಭ್ಯವನ್ನು ಅಮೆರಿಕದ ನೂರು ನಗರಗಳಿಗೆ ವಿಸ್ತರಿಸುವುದಾಗಿ ವಾಲ್‍ಮಾರ್ಟ್ ಮಾರ್ಚ್‌ನಲ್ಲಿ ಹೇಳಿದೆ. ಆದರೆ, ಆಹಾರ ವಸ್ತುಗಳನ್ನು ಮನೆಗೆ ತಲುಪಿಸುವಲ್ಲಿ ನೈಪುಣ್ಯ ಪಡೆಯವುದು ಈ ಕಂಪನಿಯ ಮುಂದಿರುವ ದೊಡ್ಡ ಸವಾಲು.

ಆಹಾರ ವಸ್ತುಗಳನ್ನು ತಲುಪಿಸುವುದಕ್ಕಾಗಿ ಉಬರ್ ಜತೆಗೆ ಸಹಭಾಗಿತ್ವದ ಪ್ರಯೋಗವನ್ನು ಕಂಪನಿ ಮಾಡಿದೆ. ಜತೆಗೆ, ಕಂಪನಿಯ ಉದ್ಯೋಗಿಗಳು ಕೆಲಸ ಮುಗಿಸಿ ಮನೆಗೆ ಹೋಗುವಾಗಲೂ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.

ಬ್ರೂಕ್ಲಿನ್‍ನ ಸಣ್ಣ ಪೂರೈಕೆ ಕಂಪನಿ ‘ಪಾರ್ಸೆಲ್‍’ ಅನ್ನು ಕಳೆದ ವರ್ಷ ವಾಲ್‍ಮಾರ್ಟ್ ಖರೀದಿಸಿದೆ. ತಾಜಾ ಮತ್ತು ಬೇಗ ಕೆಡುವ ಆಹಾರ ವಸ್ತುಗಳನ್ನು ನ್ಯೂಯಾರ್ಕ್‌ನ ಮನೆ ಮನೆಗಳಿಗೆ ತಲುಪಿಸುವುದರಲ್ಲಿ ಪಾರ್ಸೆಲ್‍ ಕಂಪನಿ ಎತ್ತಿದ ಕೈ. ಹಾರ್ವರ್ಡ್ ಪದವೀಧರರೊಬ್ಬರು 2013ರಲ್ಲಿ ಪಾರ್ಸೆಲ್‍ ಅನ್ನು ಸ್ಥಾಪಿಸಿದರು. ವಸ್ತುಗಳನ್ನು ಅದೇ ದಿನ ಮನೆಗಳಿಗೆ ತಲುಪಿಸುವ ಜಾಲವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಲು ಈ ಕಂಪನಿ ವಾಲ್‍ಮಾರ್ಟ್‌ಗೆ ಯಾವ ರೀತಿಯಲ್ಲಿ ನೆರವಾಗಬಲ್ಲುದು ಎಂಬುದು ಸ್ಪಷ್ಟವಿಲ್ಲ.

‘ಕಿರಾಣಿ ವ್ಯಾಪಾರ ಬಹಳ ಕಷ್ಟ. ಆನ್‍ಲೈನ್‍ ಮೂಲಕ ಕಿರಾಣಿ ವ್ಯಾಪಾರ ಇನ್ನೂ ಕಷ್ಟ’ ಎಂದು ಸಸ್ಕೆಹನ್ನಾ ಫೈನಾನ್ಶಿಯಲ್‍ ಗ್ರೂಪ್‍ನ ಚಿಲ್ಲರೆ ವ್ಯಾಪಾರ ವಿಶ್ಲೇಷಕ ಬಿಲ್‍ ಡೆಹರ್ ಹೇಳುತ್ತಾರೆ.

ವಿಸ್ತರಣೆ ಯತ್ನ: ವಾಲ್‍ಮಾರ್ಟ್‌ ಸೂಪರ್ ಸೆಂಟರ್‌ನ ದಿರಿಸು ವಿಭಾಗದಲ್ಲಿ ಕಾಣಸಿಗುವ ಬೊನೊಬೊಸ್‍ ಮತ್ತು ಮಾಡ್‍ಕ್ಲಾತ್‍ ಬ್ರ್ಯಾಂಡ್‍ಗಳು ಬಹಳ ಭಿನ್ನ. ಕಳೆದ ವರ್ಷ ಕಂಪನಿ ನಡೆಸಿದ ಸ್ವಾಧೀನಗಳಲ್ಲಿ ಈ ಸಮಸ್ಯೆ ಪರಿಹಾರದ ಉದ್ದೇಶ ಇದೆ.

ವಾಲ್‌ಮಾರ್ಟ್‌ನ ಗ್ರಾಹಕರಲ್ಲಿ ಹೆಚ್ಚಿನವರು ಕೆಳ ಮತ್ತು ಕೆಳಮಧ್ಯಮ ಆದಾಯ ವರ್ಗದಲ್ಲಿ ಬರುವವರು. ಹೊಸ ಸ್ವಾಧೀನಗಳ ಮೂಲಕ ಮತ್ತು ಹೊಸ ಹಾಸಿಗೆ, ಹೊದಿಕೆಗಳ ಕೊಡುಗೆಗಳ ಮೂಲಕ ಯುವ ಮತ್ತು ಹೆಚ್ಚು ಆದಾಯ ವರ್ಗದ ಗ್ರಾಹಕರನ್ನು ಆಕರ್ಷಿಸಲು ವಾಲ್‍ಮಾರ್ಟ್ ಯತ್ನಿಸುತ್ತಿದೆ. ನ್ಯೂಯಾರ್ಕ್‌ನಂತಹ ಮಹಾನಗರ ಪ್ರದೇಶಗಳಲ್ಲಿ ವಾಲ್‌ಮಾರ್ಟ್‌ ಮಳಿಗೆಗಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಈ ಕಾರ್ಯತಂತ್ರ ಅವರಿಗೆ ಬಹಳ ಮುಖ್ಯವಾಗಿದೆ.

ನಗರ ಪ್ರದೇಶದ ಗ್ರಾಹಕರಿಗಾಗಿ ವಾಲ್‌ಮಾರ್ಟ್‌ ನಡೆಸಿದ ಅತ್ಯಂತ ದೊಡ್ಡ ಖರೀದಿ ಜೆಟ್‌ ಡಾಟ್‌ಕಾಂ. 2016ರ ಆಗಸ್ಟ್‌ನಲ್ಲಿ 300 ಕೋಟಿ ಡಾಲರ್‌ (ಸುಮಾರು ₹20 ಸಾವಿರ ಕೋಟಿ) ಕೊಟ್ಟು ಈ ಕಂಪನಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಈ ವಹಿವಾಟಿನಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಳ್ಳುವ ಲಕ್ಷಣಗಳು ಗೋಚರಿಸಿವೆ. ಕಳೆದ ತ್ರೈಮಾಸಿಕದಲ್ಲಿ ಜೆಟ್‌ ಡಾಟ್‌ಕಾಂನ ಪ್ರಗತಿ ಕುಂಠಿತಗೊಂಡಿದೆ. ತನ್ನ ಪ್ರಧಾನ ವೆಬ್‌ಸೈಟ್‌ ವಾಲ್‌ಮಾರ್ಟ್‌ ಡಾಟ್‌ ಕಾಂ ಮೂಲಕ ಹೊಸ ಗ್ರಾಹಕರನ್ನು ಕಂಡುಕೊಂಡು ಜೆಟ್‌ ಡಾಟ್‌ಕಾಂ ಅನ್ನು ಪ್ರಗತಿಯತ್ತ ಕೊಂಡೊಯ್ಯಲು ಯತ್ನಿಸಲಾಗುವುದು ಎಂದು ವಾಲ್‌ಮಾರ್ಟ್‌ ಹೇಳಿದೆ.

‘ದೊಡ್ಡ ಆದಾಯದ ಗುಂಪುಗಳನ್ನು ಆಕರ್ಷಿಸುವುದಕ್ಕಾಗಿ ಇ–ಕಾಮರ್ಸ್‌ ಕ್ಷೇತ್ರದಲ್ಲಿ ಭಾರಿ ಯತ್ನಗಳು ನಡೆಯುತ್ತಿವೆ. ಆದರೆ, ವಾಲ್‌ಮಾರ್ಟ್‌ನ ಎಲ್ಲ ಪ‍್ರಯತ್ನಗಳು ಯಶಸ್ವಿಯಾಗುತ್ತಿಲ್ಲ ಎಂಬುದು ಇಲ್ಲಿನ ದೊಡ್ಡ ಸಮಸ್ಯೆ’ ಎಂದು ಮುಷ್ಕಿನ್‌ ಹೇಳಿದ್ದಾರೆ.

– ಮೈಕೆಲ್‍ ಕೋರ್ಕರಿ, ದಿ ನ್ಯೂಯಾರ್ಕ್‌ ಟೈಮ್ಸ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.