ಶುಕ್ರವಾರ, ಮಾರ್ಚ್ 5, 2021
17 °C

ಮನದ ಮಾತು

ಎಸ್‌.ಜಿ. ಸಿದ್ದರಾಮಯ್ಯ Updated:

ಅಕ್ಷರ ಗಾತ್ರ : | |

ಮನದ ಮಾತು

ಸುಳ್ಳನ್ನು ಹೇಳುವುದು ಸುಲಭ; ಆದರೆ ಸುಳ್ಳನ್ನು ಸಾಧಿಸುವುದು ಕಷ್ಟ. ಅದಕ್ಕೇ ಒಂದು ಸುಳ್ಳು ಹೇಳಿದವನು ಆ ಸುಳ್ಳನ್ನು ಸಮರ್ಥಿಸುವುದಕ್ಕೆ ಹಲವು ಸುಳ್ಳುಗಳನ್ನು ಹೇಳುತ್ತಾ ಸಾಗುತ್ತಾನೆ. ಹೀಗೆ ಹಲವು ಸುಳ್ಳುಗಳನ್ನು ಹೇಳುವಾಗ ಒಂದಕ್ಕೊಂದು ವಿರೋಧಾಭಾಸದ ಅಭಿಪ್ರಾಯವುಳ್ಳ ಸುಳ್ಳುಗಳನ್ನೇ ಹೇಳುವುದು ಸಹಜ. ಇಂಥ ಸಂದರ್ಭದಲ್ಲಿ ಅವನು ಮಾತನ್ನು ಮೋಸದ ಮೆರುಗಿನ ಗಿಲೀಟಿನ ಬಣ್ಣದ ಭಾಷೆಯಾಗಿ ಬಳಸುತ್ತಾನೆ. ಅಲಂಕಾರಿಕ ಪದ ಪ್ರಯೋಗಗಳು, ಅನಗತ್ಯವಾದ ಹಾವಭಾವದ ದೇಹಭಂಗಿಗಳು ನಾಟಕೀಯ ಪ್ರದರ್ಶನ ಇವುಗಳೆಲ್ಲ ಅವನ ಮಾತಿನ ವೈಖರಿಯ ಉಪಸಾಧನಗಳಾಗುತ್ತವೆ.

ಇಷ್ಟೆಲ್ಲವೂ ಮುಖವಾಡದ ಬೂಟಾಟಿಕೆಯ ಸಂಮೋಹನದ ತಂತ್ರಜಾಲಗಳೇ ಹೊರತು ಅದು ಸತ್ಯದ ಬೆಳಗಿನ ಭಾಷೆಯಲ್ಲ. ಇಂಥ ಮಾತಿನಿಂದ ಜನರನ್ನು ಮೊದಮೊದಲು ಸಂಮೋಹನಕ್ಕೆ ಒಳಗುಮಾಡಬಹುದು. ಆಕರ್ಷಿತರಾಗುವಂತೆ ಮಾಡಬಹುದು. ಆದರೆ ಇದು ಹೆಚ್ಚುದಿನ ನಡೆಯುವುದಿಲ್ಲ. ಒಂದು ಸುಳ್ಳನ್ನು ನೂರು ಸಾರಿ ಹೇಳಿದರೆ ಅದನ್ನೇ ಸತ್ಯವೆಂದು ನಂಬಿಸಬಹುದು ಎಂಬುದೂ ಸತ್ಯವಲ್ಲ. ಏಕೆಂದರೆ ಆಡುವ ಮಾತಿನಲ್ಲಿ ಅಂತಃ ಸತ್ವವಿಲ್ಲದೆ ಅದು ಶವದ ಶೃಂಗಾರದಂತೆ ಹೆಣವಾಸನೆಯ ವಾಕರಿಕೆಯ ಅಸಹ್ಯದ ಕೊಳೆತ ವಸ್ತುಸತ್ತೆ. ಹೀಗಾಗಿ ನೂರುಸಾರಿ ಹೇಳುವುದಕ್ಕೆ ತೊಡಗಿದ್ದರ ಹಿಂದೆ ಯಾವುದೇ ಭಯೋತ್ಪಾದನೆಯ ಆಗ್ರಹವಿಲ್ಲದಿದ್ದರೆ ಜನ ಅದನ್ನು ಗೇಲಿಯ ಪ್ರಸಂಗವಾಗಿಸುತ್ತಾರೆ. ಮನದ ಮಾತು ಅದಾಗದೆ ಅಜೀರ್ಣದ ಅಪಾನವಾಯುವಿನಂತೆ ಮೂಗು ಮುಚ್ಚಿಕೊಳ್ಳುತ್ತಾರೆ.

ವಿಚಿತ್ರವೆಂದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿರುತ್ತದೆ. ಅದು ಅಲಂಕಾರಿಕ ಪರಿಭಾಷೆಗಳನ್ನು ಇಷ್ಟಪಡುವುದಿಲ್ಲ. ಸರಳವಾಗಿರುತ್ತದೆ. ಸ್ವಭಾವಸಹಜವಾಗಿರುತ್ತದೆ. ನೂರಲ್ಲ ಸಾವಿರ ಸಾರಿ ಹೇಳಿದರೂ ಅದು ಅದೇ ಆಗಿರುತ್ತದೆ. ಸಾಧಿಸುವುದಕ್ಕೆ ಯಾವುದೇ ಉಪಾದಿಗಳ ಅಲಂಕರಣಗಳ ಮುಖವಾಡಗಳ ಅವಲಂಬನೆ ಅದಕ್ಕೆ ಬೇಕಾಗುವುದಿಲ್ಲ. ಹೀಗಾಗಿ ಸತ್ಯ ತಾನೇ ಮಾತಾಡುತ್ತದೆ. ಮಾತೇ ಸತ್ಯವಾಗಿರುತ್ತದೆ. ಅದು ಮನದ ನಿಜದ ಮಾತಾಗಿರುತ್ತದೆ. ಸಾಧಕನಾದವನ ಮಾತು ಸರಳ ಸುಂದರ. ಅದು ನಿರಾಭರಣ ಸೌಂದರ್ಯ; ನಿಸರ್ಗ ಸಹಜ ಸೌಂದರ್ಯ. ಸಾಧಕನಲ್ಲದವನ ಮಾತು ಶಬ್ದಾಡಂಬರ; ಬರೀ ಬೊಗಳೆ, ಬೊಗಳೆ ಮಾತಿನಿಂದ ಮನೆಕಟ್ಟಲು ಸಾಧ್ಯವಿಲ್ಲ; ದೇಶವನ್ನೂ ಕಟ್ಟಲಾಗುವುದಿಲ್ಲ.

ಮನಕ್ಕೆ ಮನ ಏಕಾರ್ಥವಾಗಿ ಕಾಯಕ್ಕೆ ಕಾಯ ಸಮದರ್ಶನವಾಗಿ

ಪ್ರಾಣಕ್ಕೆ ಪ್ರಾಣ ಸಮಕಳೆಯಾಗಿ ಇದ್ದವರಲ್ಲಿ

ಮನವಚನ ಕಾಯದಲ್ಲಿ ಶಬ್ದ ಸೂತಕ ಹುಟ್ಟಿದಡೆ

ಸೈರಿಸಬಾರದು ಕೇಳಾ

ನಮ್ಮ ಗುಹೇಶ್ವರ ಲಿಂಗದಲ್ಲಿ ನೀನು ಭಕ್ತನಾದ ಕಾರಣ

ಮುಳಿಸು ಮೊಳೆದೋರಿತ್ತು ಕಾಣಾ ಸಂಗನ ಬಸವಣ್ಣಾ.
ಬಸವಣ್ಣನನ್ನು ಕುರಿತು ಅಲ್ಲಮಪ್ರಭು ಹೇಳಿರುವ ಈ ಮಾತು ಲಿಂಗಾಯತದ ಆಚರಣೆಗೆ ಸಂಬಂಧಿಸಿದ ಆತ್ಮವಿಮರ್ಶಾ ವಿವೇಕದ ದಾರ್ಶನಿಕ ನುಡಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.