ದೇಶ ತೊರೆಯದಂತೆ ಅಮೆರಿಕ ರಾಜತಾಂತ್ರಿಕ ಅಧಿಕಾರಿಗೆ ಪಾಕ್‌ ನಿರ್ಬಂಧ

7

ದೇಶ ತೊರೆಯದಂತೆ ಅಮೆರಿಕ ರಾಜತಾಂತ್ರಿಕ ಅಧಿಕಾರಿಗೆ ಪಾಕ್‌ ನಿರ್ಬಂಧ

Published:
Updated:

ಇಸ್ಲಾಮಾಬಾದ್‌: ರಸ್ತೆ ಅಪಘಾತಕ್ಕೆ ಕಾರಣರಾಗಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಕರ್ನಲ್‌ ಜೋಸೆಫ್‌ ಇಮ್ಯಾನುವೆಲ್‌ ಹಾಲ್‌ ಅವರು ದೇಶ ಬಿಟ್ಟು ಹೋಗದಂತೆ ಪಾಕಿಸ್ತಾನದ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಜೋಸೆಫ್‌ ಅವರನ್ನು ಕರೆದೊಯ್ಯಲು ರಾವಲ್ಪಿಂಡಿಯ ನೂರ್‌ ಖಾನ್ ವಿಮಾನ ನಿಲ್ದಾಣಕ್ಕೆ ಅಮೆರಿಕದ ವಿಮಾನ ಬಂದಿಳಿದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು.

ಜೋಸೆಫ್‌ ಹೆಸರು ಕಪ್ಪುಪಟ್ಟಿಯಲ್ಲಿರುವ ಕಾರಣ ಅವರನ್ನು ಕರೆದೊಯ್ಯಲು ಬಂದ ವಿಮಾನಕ್ಕೆ ತೆರಳಲು ಅನುಮತಿ ನೀಡಿರಲಿಲ್ಲ. ಬಳಿಕ ಪ್ರಯಾಣಿಕರಿಲ್ಲದೆ ಆ ವಿಮಾನವನ್ನು ವಾಪಸ್‌ ಕಳುಹಿಸಲಾಯಿತು ಎಂದು ಪಾಕಿಸ್ತಾನದ ಫೆಡರಲ್‌ ತನಿಖಾ ಸಂಸ್ಥೆ(ಎಫ್‌ಐಎ) ಹೇಳಿದೆ.

ಏಪ್ರಿಲ್‌ 7ರಂದು ಜೋಸೆಫ್‌ ಚಲಾಯಿಸುತ್ತಿದ್ದ ವಾಹನ ಇಬ್ಬರು ಯುವಕರು ಸಂಚರಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಯುವಕ ಮೃತಪಟ್ಟಿದ್ದ.ರಾಜತಾಂತ್ರಿಕ ಅಧಿಕಾರಿ ದೇಶ ಬಿಟ್ಟುಹೋಗದಂತೆ ತಡೆಯಬೇಕು ಎಂದು ಮೃತ ಯುವಕನ ತಂದೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಹಿಂದೂ ವ್ಯಾಪಾರಿ, ಪುತ್ರನ ಹತ್ಯೆ

ಇಸ್ಲಾಮಾಬಾದ್‌: ಇಲ್ಲಿನ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಹಿಂದೂ ವ್ಯಾಪಾರಿ ಹಾಗೂ ಆತನ ಪುತ್ರನನ್ನು ದರೋಡೆಕೋರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಜಯ್‌ಪಾಲ್‌ ದಾಸ್‌ ಮತ್ತು ಪುತ್ರ ಗಿರೀಶ್‌ ನಾಥ್‌ ಮೃತಪಟ್ಟವರು. ಸಿಮೆಂಟ್‌ ಕಾರ್ಖಾನೆಯೊಂದರ ಬಳಿ ಇವರನ್ನು ದರೋಡೆಕೋರರು ತಡೆದಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದಾಗ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry