ಪೆಟ್ರಾ ಕ್ವಿಟೋವಾಗೆ ಸಿಂಗಲ್ಸ್‌ ಪ್ರಶಸ್ತಿ

7
ಮ್ಯಾಡ್ರಿಡ್‌ ಓಪನ್ ಟೆನಿಸ್‌ ಟೂರ್ನಿ: ಬರ್ಟೆನ್ಸ್‌ಗೆ ನಿರಾಸೆ

ಪೆಟ್ರಾ ಕ್ವಿಟೋವಾಗೆ ಸಿಂಗಲ್ಸ್‌ ಪ್ರಶಸ್ತಿ

Published:
Updated:
ಪೆಟ್ರಾ ಕ್ವಿಟೋವಾಗೆ ಸಿಂಗಲ್ಸ್‌ ಪ್ರಶಸ್ತಿ

ಮ್ಯಾಡ್ರಿಡ್‌ : ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಮ್ಯಾಡ್ರಿಡ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಕ್ವಿಟೋವಾ 7–6, 4–6, 6–3ರಲ್ಲಿ ನೆದರ್ಲೆಂಡ್ಸ್‌ನ ಕಿಕಿ ಬರ್ಟೆನ್ಸ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ ಎರಡು ಗಂಟೆ 51 ನಿಮಿಷ ನಡೆಯಿತು.

ಇದರೊಂದಿಗೆ ಜೆಕ್‌ ಗಣರಾಜ್ಯದ ಆಟಗಾರ್ತಿ, ಟೂರ್ನಿಯಲ್ಲಿ ಮೂರನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. 2011 ಮತ್ತು 2015ರಲ್ಲೂ ಅವರು ಚಾಂಪಿಯನ್‌ ಆಗಿದ್ದರು. ಕ್ವಿಟೋವಾ ಈ ವರ್ಷ ಗೆದ್ದ ನಾಲ್ಕನೇ ಟ್ರೋಫಿ ಇದು. ಸೇಂಟ್‌ ಪೀಟರ್ಸ್‌ ಬರ್ಗ್‌, ದೋಹಾ ಮತ್ತು ಪರುಗ್ವೆಯಲ್ಲಿ ನಡೆದಿದ್ದ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿದ್ದರು.

ಟೂರ್ನಿಯಲ್ಲಿ 10ನೇ ಶ್ರೇಯಾಂಕ ಹೊಂದಿದ್ದ ಕ್ವಿಟೋವಾ ಮೊದಲ ಸೆಟ್‌ನಲ್ಲಿ ಮಿಂಚಿದರು. ಶ್ರೇಯಾಂಕರಹಿತ ಆಟಗಾರ್ತಿ ಬರ್ಟೆನ್ಸ್‌ ಕೂಡ ಉತ್ತಮ ಆಟ ಆಡಿದರು. ಹೀಗಾಗಿ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ಮೀರಿ ನಿಂತು ಆಡಿದ ಕ್ವಿಟೋವಾ ಸೆಟ್‌ ಜಯಿಸಿದರು.

ಆರಂಭಿಕ ನಿರಾಸೆಯಿಂದ ಕಿಕಿ ಎದೆಗುಂದಲಿಲ್ಲ. ಎರಡನೇ ಸೆಟ್‌ನಲ್ಲಿ ಅವರು ಮೋಡಿ ಮಾಡಿದರು. ಮೊದಲ ಎಂಟು ಗೇಮ್‌ಗಳವರೆಗೆ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದ ಅವರು ನಂತರ ಮೇಲುಗೈ ಸಾಧಿಸಿದರು. ಶರವೇಗದ ಸರ್ವ್‌ ಮತ್ತು ಅಮೋಘ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಕ್ವಿಟೋವಾ ಅವರನ್ನು ಕಂಗೆಡಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನ ಆರಂಭದಿಂದಲೇ ಕ್ವಿಟೋವಾ ಅಬ್ಬರಿಸಿದರು. ಬೇಸ್‌ಲೈನ್‌ ಹೊಡೆತಗಳ ಮೂಲಕ ಗೇಮ್‌ ಜಯಿಸಿ 4–2ರ ಮುನ್ನಡೆ ಗಳಿಸಿದರು. ಏಳನೇ ಗೇಮ್‌ ನಲ್ಲಿ ಸರ್ವ್‌ ಉಳಿಸಿಕೊಂಡ ಬರ್ಟೆನ್ಸ್‌ ಹಿನ್ನಡೆಯನ್ನು 3–4ಕ್ಕೆ ತಗ್ಗಿಸಿಕೊಂಡರು. ಆದರೆ ಕ್ವಿಟೋವಾ ಇದರಿಂದ ವಿಚಲಿತರಾಗಲಿಲ್ಲ. ಎಂಟನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡು ಮುನ್ನಡೆಯನ್ನು 5–3ಕ್ಕೆ ಹೆಚ್ಚಿಸಿಕೊಂಡರು. ಮರು ಗೇಮ್‌ನಲ್ಲಿ ಪರಿಣಾಮಕಾರಿ ಆಟ ಆಡಿ ಬರ್ಟೆನ್ಸ್‌ ಸವಾಲು ಮೀರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry