30 ಡಾಪ್ಲರ್ ರೇಡಾರ್ ಸ್ಥಾ‍ಪನೆ

7
ಹವಾಮಾನ ವೈಪರೀತ್ಯದ ಮಾಹಿತಿಗಾಗಿ ಯೋಜನೆ

30 ಡಾಪ್ಲರ್ ರೇಡಾರ್ ಸ್ಥಾ‍ಪನೆ

Published:
Updated:
30 ಡಾಪ್ಲರ್ ರೇಡಾರ್ ಸ್ಥಾ‍ಪನೆ

ನವದೆಹಲಿ: ಮುಂದಿನ 2–3 ವರ್ಷಗಳಲ್ಲಿ ದೇಶದಾದ್ಯಂತ 30 ಡಾಪ್ಲರ್ ರೇಡಾರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಡಾಪ್ಲರ್‌ ರೇಡಾರ್‌ಗಳು ಗುಡುಗು, ಚಂಡಮಾರುತ, ದೂಳು ಬಿರುಗಾಳಿ, ಆಲಿಕಲ್ಲು ಬಿರುಗಾಳಿ, ಮಳೆ, ಗಾಳಿ ಕುರಿತು ನಿಖರ ಮಾಹಿತಿ ನೀಡುತ್ತವೆ.

ರೇಡಾರ್ ಕೇಂದ್ರದಿಂದ 250 ಕಿ.ಮೀ. ವ್ಯಾಪ್ತಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ 2–3 ತಾಸು ಮೊದಲು ಮುನ್ಸೂಚನೆ ದೊರಕುತ್ತದೆ.

‘ಈಶಾನ್ಯ ಭಾರತದಲ್ಲಿ ಈಗಾಗಲೇ ಇಂತಹ ಮೂರು ರೇಡಾರ್‌ಗಳು ಇದ್ದು, ಇನ್ನೂ 11 ಡಾಪ್ಲರ್ ರೇಡಾರ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಗುಡ್ಡಗಾಡು ಪ್ರದೇಶಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೆಚ್ಚುವರಿ ಪ್ರಧಾನ ನಿರ್ದೇಶಕ (ಎಡಿಜಿ) ದೇವೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಮುಂದಿನ ವರ್ಷದ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಮೂರು ಡಾಪ್ಲರ್ ರೇಡಾರ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಪ್ರಧಾನ್ ಹೇಳಿದ್ದಾರೆ. ಈಶಾನ್ಯ ಭಾರತದಲ್ಲಿ ಹಾಗೂ ಈ ಮೂರೂ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಚಂಡಮಾರುತ, ಮಳೆ ಹಾಗೂ ಹಿಮಪಾತವಾಗುತ್ತದೆ.

ಮೊದಲ ಡಾಪ್ಲರ್ ರೇಡಾರ್‌ 2002ರಲ್ಲಿ ಚೆನ್ನೈನಲ್ಲಿ ಸ್ಥಾಪನೆಯಾಗಿತ್ತು. 2005ರಲ್ಲಿ ಮುಂಬೈನಲ್ಲಿ ಪ್ರವಾಹ ಉಂಟಾದ ನಂತರದಲ್ಲಿ ಈ ರೇಡಾರ್‌ಗಳು ಎಷ್ಟು ಮುಖ್ಯ ಎಂಬುದು ಮನದಟ್ಟಾಯಿತು. ಪ್ರಸ್ತುತ ದೇಶದಲ್ಲಿ 27 ಡಾಪ್ಲರ್ ರೇಡಾರ್‌ಗಳಿವೆ.

ಮೇ 2 ಮತ್ತು 3ರಂದು ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ 120ಕ್ಕೂ ಹೆಚ್ಚು ಜನರು ದೂಳು ಬಿರುಗಾಳಿಗೆ ಮೃತ‍‍ಪಟ್ಟ ವೇಳೆ ಜೈಪುರದಲ್ಲಿನ ಡಾಪ್ಲರ್ ರೇಡಾರ್‌ ಕಾರ್ಯನಿರ್ವಹಿಸುತ್ತಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry