ನಿರ್ಮಲಾ–ಚಿದಂಬರಂ ವಾಕ್ಸಮರ

7
ಆದಾಯ ತೆರಿಗೆ ಇಲಾಖೆ ಆರೋಪಪಟ್ಟಿ

ನಿರ್ಮಲಾ–ಚಿದಂಬರಂ ವಾಕ್ಸಮರ

Published:
Updated:
ನಿರ್ಮಲಾ–ಚಿದಂಬರಂ ವಾಕ್ಸಮರ

ನವದೆಹಲಿ : ಕೇಂದ್ರ ಹಣಕಾಸು ಖಾತೆಯ ಮಾಜಿ ಸಚಿವ ಪಿ. ಚಿದಂಬರಂ ಅವರ ಕುಟುಂಬದ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿರುವ ಆರೋಪಪಟ್ಟಿಗಳು ವಾಕ್ಸಮರಕ್ಕೆ ಕಾರಣವಾಗಿದೆ.

ಚಿದಂಬರಂ ಅವರ ಕುಟುಂಬ ವಿದೇಶಗಳಲ್ಲಿ ಅಕ್ರಮವಾಗಿ ಆಸ್ತಿ ಮಾಡಿರುವ ಬಗ್ಗೆ ಆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ತನಿಖೆ ನಡೆಸಲಿದ್ದಾರೆಯೇ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಶ್ನಿಸಿದ್ದಾರೆ.

ನಿರ್ಮಲಾ ಅವರ ಟೀಕೆಗೆ ಚಿದಂಬರಂ ಅವರು ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. 

ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್‌ ತರಲಾಗುವುದು ಎಂದು 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

‘ಭಾರತದ ಅತ್ಯಂತ ಶ್ರೀಮಂತ ಪಕ್ಷದ ಅಧ್ಯಕ್ಷರು ಕೋಟ್ಯಂತರ ಡಾಲರ್‌ಗಳ ಕನಸು ಕಾಣುತ್ತಿದ್ದಾರೆ. ಕಪ್ಪುಹಣವನ್ನು ವಾಪಸ್‌ ತಂದು ಪ್ರತಿ ಭಾರತೀಯನ ಖಾತೆಗೆ ₹15 ಲಕ್ಷ ತುಂಬಿ’ ಎಂದು ಚಿದಂಬರಂ ಹೇಳಿದ್ದಾರೆ. ಆದರೆ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೆಸರು ಉಲ್ಲೇಖಿಸಿಲ್ಲ.

‘ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರೂ ಹಣಕಾಸು ವಹಿವಾಟೊಂದರ ಸಂಬಂಧ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ನಿರ್ಮಲಾ ಹೇಳಿದ್ದಾರೆ.

ವಿದೇಶದಲ್ಲಿರುವ ಆಸ್ತಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂಬ ಕಾರಣಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಅಲ್ಲಿನ ಸುಪ್ರೀಂ ಕೋರ್ಟ್‌ ಅನರ್ಹಗೊಳಿಸಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಚಿದಂಬರಂ ಪ್ರಕರಣ ಮತ್ತು ನವಾಜ್‌ ಷರೀಫ್‌ ಪ್ರಕರಣದ ನಡುವೆ ಇರುವ ಸಾಮ್ಯವನ್ನು ಕಡೆಗಣಿಸಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶದಲ್ಲಿರುವ ಆಸ್ತಿಯ ಮಾಹಿತಿ ನೀಡಿಲ್ಲ ಎಂಬ ಆರೋಪದಲ್ಲಿ ಚಿದಂಬರಂ ಹೆಂಡತಿ ನಳಿನಿ, ಮಗ ಕಾರ್ತಿ ಮತ್ತು ಸೊಸೆ ಶ್ರೀನಿಧಿ ವಿರುದ್ಧ ಆದಾಯ ತೆರಿಗೆ ಇಲಾಖೆಯು

ಕಪ್ಪುಹಣ ತಡೆ ಕಾಯ್ದೆ ಅಡಿಯಲ್ಲಿ ಇದೇ 11ರಂದು ನಾಲ್ಕು ಆರೋಪಪಟ್ಟಿ ದಾಖಲಿಸಿದೆ.

ಚಿದಂಬರಂ ಕುಟುಂಬವು ಈ ಆರೋಪವನ್ನು ನಿರಾಕರಿಸಿದೆ. ವಿದೇಶದಲ್ಲಿರುವ ಆಸ್ತಿಯ ಮಾಹಿತಿಯನ್ನು ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ ಸಂದರ್ಭದಲ್ಲಿ ನೀಡಲಾಗಿದೆ ಎಂದು ಕುಟುಂಬ ಹೇಳಿದೆ.

**

ಚಿದಂಬರಂ ಕುಟುಂಬ ವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುವುದೇ ಎಂಬುದನ್ನು ದೇಶದ ಜನರಿಗೆ ಕಾಂಗ್ರೆಸ್‌ ಅಧ್ಯಕ್ಷರು ತಿಳಿಸಬೇಕು.

– ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವೆ

*

ನಿರ್ಮಲಾ ಅವರನ್ನು ರಕ್ಷಣಾ ಸಚಿವೆ ಸ್ಥಾನದಿಂದ ಕೆಳಗಿಳಿಸಿ ಆದಾಯ ತೆರಿಗೆ ಇಲಾಖೆಯ ವಕೀಲೆಯಾಗಿ ನೇಮಿಸಲಾಗುವುದು ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ

–ಚಿದಂಬರಂ, ಕಾಂಗ್ರೆಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry