ಮಂಗಳವಾರ, ಮಾರ್ಚ್ 2, 2021
31 °C
ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಕಡಿಮೆ ಏನಲ್ಲ: ತಜ್ಞರ ಅಭಿಮತ

‘ಮತದಾರರ ಪಟ್ಟಿಯ ದೋಷವೇ ಕಾರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತದಾರರ ಪಟ್ಟಿಯ ದೋಷವೇ ಕಾರಣ’

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಮತದಾರರು ನಿರಾಸಕ್ತಿ ತೋರಿದ್ದಾರೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಮತದಾನ ವಿಶ್ಲೇಷಣಾ ತಜ್ಞರು ಹೇಳುವುದೇ ಬೇರೆ. ಅವರ ಪ್ರಕಾರ ರಾಜಧಾನಿಯಲ್ಲೂ ಮತದಾರರು ಹುರುಪಿನಿಂದ ಹಕ್ಕು ಚಲಾಯಿಸಿದ್ದಾರೆ.

ಇಲ್ಲಿನ 26 ಕ್ಷೇತ್ರಗಳಲ್ಲಿ ಈ ಬಾರಿ ಶೇ 54.29 ಮತದಾನವಾಗಿದೆ. 2013ರ ಚುನಾವಣೆಯಲ್ಲಿ ಶೇ 57.33ರಷ್ಟು ಮತದಾನವಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 3.04ರಷ್ಟು ಕಡಿಮೆ. ಆದರೆ, ಚುನಾವಣಾ ಆಯೋಗದ ಅಂಕಿ ಅಂಶಗಳಲ್ಲಿ ವ್ಯಕ್ತವಾಗುವಂತೆ ಇಲ್ಲಿನ ಮತದಾರರು ಜವಾಬ್ದಾರಿ ಮರೆತಿಲ್ಲ. ಇಲ್ಲಿನ ನೈಜ ಮತದಾರರ ಪ್ರಮಾಣವನ್ನು ಪರಿಗಣಿಸಿದರೆ ಇಲ್ಲೂ ಶೇ 70ಕ್ಕಿಂತಲೂ ಹೆಚ್ಚು ಮಂದಿ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ ಲೋಪವಿರುವ ಕಾರಣ ಇಲ್ಲಿ ಕಡಿಮೆ ಮತದಾನ ಆಗಿರುವಂತೆ ಕಾಣಿಸುತ್ತದೆ ಎನ್ನುತ್ತಾರೆ ಮತದಾನ ವಿಶ್ಲೇಷಣಾ ತಜ್ಞ ಪಿ.ಜಿ.ಭಟ್‌.

‘ರಾಷ್ಟ್ರೀಯ ಜನಗಣತಿ ಪ್ರಕಾರ, ದೇಶದಲ್ಲಿ 18 ವರ್ಷ ಮೀರದವರ ಸರಾಸರಿ ಪ್ರಮಾಣ ಶೇ 41ರಷ್ಟಿದೆ. ಇದಕ್ಕನುಗುಣವಾಗಿ ಲೆಕ್ಕ ಹಾಕಿದರೆ ನಗರದಲ್ಲಿ 49 ಲಕ್ಷ ಮಂದಿ 18 ವರ್ಷದೊಳಗಿನವರು ಇರಬೇಕು. 71 ಲಕ್ಷದಷ್ಟು ಮತದಾರರು ಮಾತ್ರ ಇರಲು ಸಾಧ್ಯ. ಆದರೆ, ಚುನಾವಣಾ ಆಯೋಗದ ಪ್ರಕಾರ ಬಿಬಿಎಂಪಿಯ 28 ಕ್ಷೇತ್ರಗಳಲ್ಲಿ ಪ್ರಸ್ತುತ 91.13 ಲಕ್ಷ ಮತದಾರರಿದ್ದಾರೆ. ಇಷ್ಟೊಂದು ವ್ಯತ್ಯಾಸ ಹೇಗೆ ಸಾಧ್ಯ’ ಎಂದು ಪ್ರಶ್ನಿಸುತ್ತಾರೆ

ಭಟ್‌.

ಒಂದೋ ಜನಸಂಖ್ಯೆಯ ಅಂಕಿ ಅಂಶಗಳಲ್ಲಿ ಲೋಪವಿರಬೇಕು ಅಥವಾ ಆಯೋಗ ತಪ್ಪು ಮಾಹಿತಿ ನೀಡುತ್ತಿರಬೇಕು ಎನ್ನುತ್ತಾರೆ ಅವರು.

‘ನನ್ನ ಪ್ರಕಾರ ನಗರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರಲ್ಲಿ 20 ಲಕ್ಷದಷ್ಟು ಹೆಸರುಗಳು ಬೋಗಸ್‌’ ಎಂದು ಅವರು ಆರೋಪಿಸುತ್ತಾರೆ.

‘ನಗರದಲ್ಲಿ ರಾಜಕೀಯ ಮುಖಂಡರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಚುನಾವಣೆ ಸಂದರ್ಭದಲ್ಲಿ ತಮಗೆ ಬೇಕಾದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿದ್ದಾರೆ. ಒಬ್ಬ ಬೂತ್‌ ಮಟ್ಟದ ಅಧಿಕಾರಿಯೂ ದಿನವೊಂದಕ್ಕೆ 10ಕ್ಕಿಂತ ಹೆಚ್ಚು ಮಂದಿಯ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಅವಕಾಶ ಇಲ್ಲ. ಆದರೆ, ಒಬ್ಬ ಪಾಲಿಕೆ ಸದಸ್ಯ, ಶಾಸಕರ ಕಚೇರಿ ಮೂಲಕ ಬಂದ ಸಾವಿರಾರು ಮಂದಿಯ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗುತ್ತವೆ. ಅವರು ಸ್ಥಳೀಯ ನಿವಾಸಿಗಳೇ ಆಗಿರುವುದಿಲ್ಲ. ಅಧಿಕಾರಿಗಳು ಅದನ್ನು ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಅರ್ಜಿಯ (ಫಾರ್ಮ್‌ ನಂ. 6) ಸಾವಿರಾರು ತುಣುಕುಗಳು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಪತ್ತೆಯಾಗಿದ್ದು ಇದೇ ತೆರನಾದ ಪ್ರಕರಣ’ ಎಂದು ಅವರು ವಿವರಿಸಿದರು.

‘ಅನೇಕ ಮತದಾರರು ಬೇರೆ ಕ್ಷೇತ್ರಕ್ಕೆ ವಲಸೆ ಹೋದರೂ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ. ಎಷ್ಟೋ ಮಂದಿ ಕ್ಷೇತ್ರ ಬದಲಾವಣೆ ಕುರಿತ ಅರ್ಜಿಯಲ್ಲಿ ನಮೂದಿಸಿದರೂ ಅಧಿಕಾರಿಗಳು, ಈ ಹಿಂದಿನ ಕ್ಷೇತ್ರದ ಪಟ್ಟಿಯಿಂದ ಆತನ ಹೆಸರು ತೆಗೆದು ಹಾಕುವುದಿಲ್ಲ. ಒಬ್ಬ ವ್ಯಕ್ತಿಯ

ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಪಟ್ಟಿಯಲ್ಲಿರುವ ಸಾವಿರಾರು ಉದಾಹರಣೆಗಳಿವೆ’ ಎಂದು ಅವರು ವಿವರಿಸಿದರು.

‘ಈ ರೀತಿ ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗುತ್ತಿರುವುದರಿಂದ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದೆ. ಅರ್ಹ ಅರ್ಜಿಗಳನ್ನು ಪರಿಗಣಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಶೇ 66ರಷ್ಟು ಅರ್ಜಿಗಳನ್ನು ಪರಿಗಣಿಸಿಲ್ಲ ಎಂದು ಆಯೋಗದ ಅಧಿಕಾರಿಗಳೇ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಮತದಾನ ಮಾಡಬೇಕೆಂಬ ಉತ್ಸಾಹ ಹೊಂದಿದವರಿಗೆ ಅಧಿಕಾರಿಗಳೇ ತಣ್ಣೀರು ಎರಚುತ್ತಿದ್ದಾರೆ’ ಎಂದು ಅವರು ದೂರಿದರು.

‘ಒಂದೇ ಕುಟುಂಬದ ಇಬ್ಬರು ಸದಸ್ಯರು ಬೇರೆ ಬೇರೆ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಅನೇಕ ಉದಾಹರಣೆಗಳಿವೆ. ನಾನು ಒಂದು ಕಡೆ ಮತದಾನ ಮಾಡಿದರೆ, ತಂಗಿ ಬೇರೆ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು. ಮತದಾರರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಇರುವ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನ (ಎನ್‌ವಿಎಸ್‌ಪಿ) ಮಾಹಿತಿಯೂ ಪರಿಷ್ಕರಣೆಗೆ ಒಳಗಾಗುತ್ತಿಲ್ಲ. ನೀವು ಈ ಪೋರ್ಟಲ್‌ ಬಳಸಿ ಮತಗಟ್ಟೆ ಹುಡುಕಲು ಪ್ರಯತ್ನಿಸಿದರೆ ಅದು ದಾರಿ ತಪ್ಪಿಸುತ್ತದೆ. ಅದರಲ್ಲಿರುವ ಮಾಹಿತಿ ಪರಿಷ್ಕರಿಸುವಂತೆ ಆಯೋಗದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದರು.

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸ್‌ ಅಲವಿಲ್ಲಿ, ‘ಇಲ್ಲಿ ಹೊಸ ಮತದಾರರ ಸೇರ್ಪಡೆಯಾಗುತ್ತದೆ. ಆದರೆ ಬೇರೆ ಕಡೆಗೆ ವಲಸೆ ಹೋದವರು ಹಾಗೂ ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಇದು ಕೂಡಾ ಇಲ್ಲಿ ಮತದಾನ ಪ್ರಮಾಣ ಕಡಿಮೆ ಆಗುವುದಕ್ಕೆ ಕಾರಣ’ ಎಂದು ವಿಶ್ಲೇಷಿಸುತ್ತಾರೆ .

‘ನಾವು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೆವು. ಅಣಕು ಮತದಾನಗಳನ್ನು ನಡೆಸುವ ಮೂಲಕ ಜನರ ಗಮನ ಸೆಳೆದಿದ್ದೆವು. ಇದರ ಪರಿಣಾಮವಾಗಿ ಸಾಕಷ್ಟು ಯುವ ಮತದಾರರು ಹಕ್ಕನ್ನು ಚಲಾಯಿಸಿದ್ದಾರೆ’ ಎಂದರು.

‘ಮತ ಚಲಾಯಿಸಲು ಯಾವುದೇ ಮತಗಟ್ಟೆಯಲ್ಲೂ 25 ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾಯಬೇಕಾದ ಪ್ರಮೇಯ ಇರಲಿಲ್ಲ. ಆದರೂ ಜನ

ಏಕೆ ಮತ ಚಲಾಯಿಸಲು ಬಂದಿಲ್ಲ ಅರ್ಥವಾಗುತ್ತಿಲ್ಲ. ಇದು ಬೇಜವಾಬ್ದಾರಿಯ ಪರಮಾವಧಿ. ಮೂಲಸೌಕರ್ಯ ವಿಚಾರದಲ್ಲಿ ನಾವು ಹೋರಾಟ ಮಾಡಿದಾಗಲೆಲ್ಲ ರಾಜಕಾರಣಿಗಳು, ಬೆಂಗಳೂರಿನ ಜನ ಮತ ಹಾಕಲು ಬರುವುದಿಲ್ಲ ಎಂದು ದೂರುತ್ತಾರೆ. ಜನರು ಮತದಾನದ ವಿಚಾರದಲ್ಲಿ ಇಷ್ಟೊಂದು ನಿರುತ್ಸಾಹ ತೋರಿಸಿದರೆ ಭವಿಷ್ಯದಲ್ಲಿ ಮೂಲಸೌಕರ್ಯ ಪಡೆಯುವುದು ಕಷ್ಟವಾಗಲಿದೆ’ ಎನ್ನುತ್ತಾರೆ ಸಿಟಿಜನ್ಸ್‌ ಆಕ್ಷನ್‌ ಫೋರಂನ ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌.

ಗಂಭೀರವಾಗಿ ಪರಿಗಣಿಸುತ್ತೇವೆ: ಆಯುಕ್ತ

‘ಕಳೆದ ಬಾರಿಗಿಂತ (ಶೇ 57.33) ಹೆಚ್ಚು ಮತದಾನ ಆಗಲಿದೆ ಎಂಬುದೇ ನಮ್ಮ ನಿರೀಕ್ಷೆ ಆಗಿತ್ತು. ಇಷ್ಟು ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತದೆ ಎಂದು ನಾವು ಖಂಡಿತಾ ಊಹಿಸಿರಲಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್‌ ತಿಳಿಸಿದರು.

‘ಮತದಾರರಿಗೆ ಉತ್ತೇಜನ ನೀಡಲು ಈ ಬಾರಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಮಹಿಳಾ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ‘ಪಿಂಕ್‌ ಮತಗಟ್ಟೆ’ಗಳನ್ನು ಸಜ್ಜುಗೊಳಿಸಿದ್ದೆವು. ಮತದಾರರ ವ್ಯವಸ್ಥಿತ ಜಾಗೃತಿ ಹಾಗೂ ಚುನಾವಣಾ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ (ಸ್ವೀಪ್‌) ಅಡಿ ಅನೇಕ ಚಟುವಟಿಕೆ ಹಮ್ಮಿಕೊಂಡಿದ್ದೆವು. ಮನೆ ಮನೆಗೆ ತೆರಳಿ ಮತದಾರರ ಗುರುತಿನ ಚೀಟಿ ನೀಡಿದ್ದೆವು. ಆದರೂ ಮತದಾರರು ಏಕೆ ಮತಗಟ್ಟೆಯತ್ತ ಬಂದಿಲ್ಲ ಎಂದು ಅರ್ಥವಾಗುತ್ತಿಲ್ಲ’ ಎಂದರು.

‘ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇದಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಅಧ್ಯಯನ ನಡೆಸುತ್ತೇವೆ. ಮುಂದಿನ ಬಾರಿ ಮತದಾನದ ಪ್ರಮಾಣ ಹೆಚ್ಚಳವಾಗುವಂತೆ ಮಾಡಲು ಇನ್ನಷ್ಟು ಶ್ರಮ ವಹಿಸುತ್ತೇವೆ’ ಎಂದು ಅವರು ತಿಳಿಸಿದರು.

ದ್ರಾವಿಡ್‌, ಕುಂಬ್ಳೆಯನ್ನು ಕರೆಸಿ ಪ್ರಯೋಜನವಿಲ್ಲ’

‘ಮತದಾನದ ಜಾಗೃತಿ ಮೂಡಿಸುವ ಚಟುವಟಿಕೆಗಾಗಿ ಚುನಾವಣಾ ಆಯೋಗವು ದುಂದು ವೆಚ್ಚ ಮಾಡುತ್ತಿದೆ. ತಾರಾ ವರ್ಚಸ್ಸು ಇರುವಂತಹ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ ಅವರಂತಹವರನ್ನು ಕರೆಸಿ, ಅವರ ಮೂಲಕ ಸಂದೇಶ ನೀಡಿದರೆ ಮತದಾರರ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಅದರ ಬದಲು ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಷ್ಕರಿಸುವ ಕಾರ್ಯ ಆಗಬೇಕು. ಮತದಾನ ಮಾಡಲು ಇರುವ ತೊಡಕುಗಳನ್ನು ನಿವಾರಣೆ ಮಾಡಬೇಕು. ಮತಗಟ್ಟೆಯ ಮಾಹಿತಿ ಸುಲಭವಾಗಿ ಸಿಗುವಂತೆ ಮಾಡಬೇಕು’ ಎಂದು ಪಿ.ಜಿ.ಭಟ್‌ ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.