ಗುರುವಾರ , ಫೆಬ್ರವರಿ 25, 2021
30 °C
ದಾಳ ಉರುಳಿಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ‘ದಲಿತ ಮುಖ್ಯಮಂತ್ರಿ’ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ನಲ್ಲಿ ‘ದಲಿತ ಮುಖ್ಯಮಂತ್ರಿ’ ಕಾವು

ಬೆಂಗಳೂರು: ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂಬ ಸುಳಿವು ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷದಲ್ಲಿ ‘ದಲಿತ ಮುಖ್ಯಮಂತ್ರಿ’ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

‘ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಈವರೆಗೆ ಹೇಳಿಕೊಳ್ಳುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದಲಿತ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡರೆ ನನ್ನ ತಕರಾರಿಲ್ಲ’ ಎಂದು ಮೈಸೂರಿನಲ್ಲಿ ಭಾನುವಾರ ಹೇಳಿದರು.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದರೆ ಏನು ಮಾಡಬೇಕೆಂಬ ಬಗ್ಗೆ ಲೆಕ್ಕಾಚಾರ ಆರಂಭಗೊಂಡಿದೆ. ಈ ಮಧ್ಯೆ, ‘ದಲಿತರೊಬ್ಬರನ್ನು ಪರಿಗಣಿಸುವುದಾದರೆ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಲು ನಾನು ಸಿದ್ಧ’ ಎಂಬ ಸಂದೇಶ ರವಾನಿಸಿರುವುದು ಮೈತ್ರಿ ನಿಟ್ಟಿನಲ್ಲಿ ದಾಳ ಉರುಳಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

‘ಚುನಾವಣಾ ರಾಜಕೀಯದಿಂದ ದೂರ ಸರಿದಿದ್ದೇನೆ. ಆ ಬ್ರಹ್ಮ ಬಂದು ಹೇಳಿದರೂ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ಈ ಬಾರಿಯೇ ಚುನಾವಣೆಗೆ ಸ್ಪರ್ಧಿಸಬಾರದೆಂದು ತೀರ್ಮಾನಿಸಿದ್ದೆ. ಆದರೆ ಮುಖ್ಯಮಂತ್ರಿಯಾಗಿದ್ದುಕೊಂಡು ಪಲಾಯನ ಮಾಡಿದ ಎಂದು ಜನರು ಭಾವಿಸಬಾರದು ಎಂಬ ಕಾರಣದಿಂದ ಸ್ಪರ್ಧಿಸಿದೆ’ ಎಂದೂ ಸ್ಪಷ್ಟನೆ ನೀಡಿದರು.

‘ಹೈಕಮಾಂಡ್‌ ನನ್ನ ಮೇಲೆ ಭರವಸೆಯಿಟ್ಟು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಐದು ವರ್ಷ ಕಳಂಕರಹಿತ ಮತ್ತು ಪ್ರಾಮಾಣಿಕ ಆಡಳಿತ ನಡೆಸಿದ್ದೇನೆ. ಹೈಕಮಾಂಡ್‌ನ ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ’ ಎಂದು ತಿಳಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರ್ಗಿಯಲ್ಲಿ ಮಾತನಾಡಿ, ‘ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಹುದ್ದೆ ಕೊಡುವುದು ಬೇಡ. ಕಾಂಗ್ರೆಸ್‌ನ ಹಿರಿಯ ಮುಖಂಡ ಅಥವಾ ಹಿರಿಯ ಕಾರ್ಯಕರ್ತ ಎಂದು ಪರಿಗಣಿಸಿ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.

‘ಐದು ದಶಕಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಈ ಹಿಂದೆಯೂ ಈ ವಿಷಯ ಪ್ರಸ್ತಾಪವಾಗಿತ್ತು. ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಹೈಕಮಾಂಡ್‌ಗೆ ಅರ್ಜಿ ಹಾಕುವುದಿಲ್ಲ, ಕೇಳುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ‘ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟದ್ದು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಹೈಕಮಾಂಡ್‌ ನಿರ್ದೇಶನದಂತೆ ಇದೇ 16ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಎಲ್ಲ ವಿಷಯಗಳು ಚುನಾವಣೆ ಫಲಿತಾಂಶದ ದಿನ (ಮೇ 15ರ) ಸಂಜೆ ಆಖೈರಾಗಲಿದೆ’ ಎಂದರು.

ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪವಾದಾಗಲೆಲ್ಲ ಈ ಇಬ್ಬರ ಹೆಸರು ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆಗೆ ಬರುತ್ತದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದಿದ್ದರೂ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಿ. ಪರಮೇಶ್ವರ ಸೋಲು ಕಂಡಿದ್ದರು. ಬಳಿಕ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಗೃಹ ಸಚಿವ ಸ್ಥಾನ ನೀಡಿತ್ತು. ಪ್ರಸಕ್ತ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ದಲಿತರನ್ನು ಮುಖ್ಯಮಂತ್ರಿ ಮಾಡಬೇಕೆಂಬ ವಿಷಯ ಆಗಾಗ ಚರ್ಚೆಗೆ ಗ್ರಾಸವಾಗಿತ್ತು.

ಆದರೆ, ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಬಾರದೆಂದು ಪಕ್ಷದ ಹಿರಿಯ ನಾಯಕರಿಗೆ ಹಲವು ಬಾರಿ ತಾಕೀತು ಮಾಡಿದ್ದ ಕಾಂಗ್ರೆಸ್‌ ಹೈಕಮಾಂಡ್‌, ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸಿತ್ತು. ಇದೀಗ ಈ ವಿಷಯ ಮತ್ತೆ ಕಾವು ಪಡೆದುಕೊಂಡಿದೆ.

**

ಬಿಜೆಪಿ ಅಭ್ಯರ್ಥಿಗೆ ಮತ ಹಾಕಲು ನಿರಾಕರಿಸಿದ ದಲಿತರ ಮೇಲೆ ಹಲ್ಲೆ 

ಬಿಜೆಪಿ ಅಭ್ಯರ್ಥಿಗೆ ಮತ ಹಾಕಲು ನಿರಾಕರಿಸಿದ ಆರು ಮಂದಿ ದಲಿತರನ್ನು ಬಿಜೆಪಿ ಬೆಂಬಲಿಗರು ಎನ್ನಲಾದ ಎಂಟು ಜನರ ತಂಡ ಮೂರು ತಾಸು ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್‌ ಗ್ರಾಮದಲ್ಲಿ ಶನಿವಾರ ನಡೆದಿದೆ.

ಹಲ್ಲೆಗೀಡಾದ ದೇವೇಂದ್ರ ಕೊಳ್ಳಪ್ಪನವರ ನೀಡಿದ ದೂರು ಆಧರಿಸಿ, ಚನ್ನಪ್ಪ ಮುದಕಪ್ಪ ಹದ್ಲಿ, ಮಲ್ಲಿಕಾಜಿಗೌಡ ವಿ. ಪೊಲೀಸಪಾಟೀಲ, ಬಿ.ಜಿ.ಪೊಲೀಸ ಪಾಟೀಲ, ಪ್ರಮೋದ ದೇಸಾಯಿ, ಹೇಮೇಶ ಬಳಿಗಾರ, ಮುತ್ತನಗೌಡ ಪೊಲೀಸ ಪಾಟೀಲ, ನಬೀಸಾಬ್‌ ಮುಸ್ತಾಪ್ಪನವರ, ಬಸನಗೌಡ ಪೊಲೀಸಪಾಟೀಲ ಎಂಬುವವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಯಾವಗಲ್‌ ಗ್ರಾಮವು ನರಗುಂದ ಮತ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿ ಬಿಜೆಪಿಯಿಂದ ಸಿ.ಸಿ. ಪಾಟೀಲ ಮತ್ತು ಕಾಂಗ್ರೆಸ್‌ನಿಂದ ಬಿ.ಆರ್‌. ಯಾವಗಲ್‌ ಕಣದಲ್ಲಿದ್ದಾರೆ.

*

ದಲಿತ ಮುಖ್ಯಮಂತ್ರಿ ಮಾಡಬೇಕಾದರೆ ಶಾಸಕರ ಸಮ್ಮತಿ ಬೇಕು. ಈ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ.

ಸಿದ್ದರಾಮಯ್ಯ, ಮುಖ್ಯಮಂತ್ರಿ

*

ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಬೇಡಿ ಎಂದು ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತೇನೆ.

ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.