7
ನವನಗರ ಜಿಲ್ಲಾ ಕ್ರೀಡಾಂಗಣ; ಅವ್ಯವಸ್ಥೆಯ ಆಗರ

ಗಾಳಿ–ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ

Published:
Updated:
ಗಾಳಿ–ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ

ಬಾಗಲಕೋಟೆ: ಇಲ್ಲಿನ ನವನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಮುಖ್ಯ ಕಟ್ಟಡಕ್ಕೆ ಹೊಂದಿಕೊಂಡಿರುವ ಪೆವಿಲಿಯನ್‌ನ ಚಾವಣಿ ಮಳೆ–ಗಾಳಿಗೆ ಹಾರಿ ಹೋಗಿದೆ. ಚಾವಣಿಗೆ ಹೊಂದಿಕೊಂಡಂತೆ ಇದ್ದ ಕಬ್ಬಿಣದ ಭೀಮ್, ತಡಗಡಿನ ಚೌಕಟ್ಟು ಕೂಡ ಮುರಿದು ಬಿದ್ದಿದೆ.

ಮೇ 11ರಂದು ಸಂಜೆ ಬೀಸಿದ ಗಾಳಿ ಹಾಗೂ ಬಿರು ಮಳೆಗೆ ಈ ಅವಘಡ ಸಂಭವಿಸಿದೆ. ಗಾಳಿ–ಮಳೆಯ ಹೊಡೆತಕ್ಕೆ ಪೆವಿಲಿಯನ್‌ನ ಚಾವಣಿಯ ಅರ್ಧ ಭಾಗ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಆ ವೇಳೆ ಯಾರೂ ಪೆವಿಲಿಯನ್‌ನಲ್ಲಿ ಇಲ್ಲದ ಕಾರಣ ಪ್ರಾಣಹಾನಿ ತಪ್ಪಿದೆ.

ಕಳೆದ ಬಾರಿ ಮಳೆಗಾಲದಲ್ಲಿ 50 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಉರುಳಿ ಬಿದ್ದಿತ್ತು. ಸ್ಕೇಟಿಂಗ್ ರಿಂಕ್‌ನ ಮುಂಭಾಗದಲ್ಲಿ ಈ ಆವಘಡ ನಡೆದಿತ್ತು.

ಕಳಪೆ ಕಾಮಗಾರಿಗೆ ಮಾದರಿ: ಮುಳುಗಡೆ ಸಂತ್ರಸ್ತರಿಗಾಗಿ ನವನಗರದ ನಿರ್ಮಾಣದ ವೇಳೆಯೇ ಜಿಲ್ಲಾ ಕ್ರೀಡಾಂಗಣವನ್ನು ವಿನ್ಯಾಸಗೊಳಿಸಿ ಹೊಸ ವಸತಿ ಪ್ರದೇಶದ ಹೃದಯ ಭಾಗದಲ್ಲಿಯೇ ನಿರ್ಮಿಸಲಾಗಿದೆ. ಕ್ರೀಡಾಂಗಣ ನಿರ್ಮಿಸಿ ಇನ್ನೂ ಎರಡು ದಶಕ ಕಳೆದಿಲ್ಲ. ಆಗಲೇ ಕಾಮಗಾರಿಯ ಹುಳುಕುಗಳು ಹೊರಗೆ ಬರುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಅವ್ಯವಸ್ಥೆಯ ತಾಣ: ಕ್ರೀಡಾಂಗಣದ ಆವರಣದಲ್ಲಿಯೇ ಇರುವ ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ಸೋರಿಕೆಯ ಕಾರಣ ಬಂದ್ ಆಗಿದೆ. ನಿತ್ಯ ಲಕ್ಷಾಂತರ ಲೀಟರ್ ನೀರು ಸೋರಿಕೆಯಾಗುತ್ತಿರುವ ಕಾರಣ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಈಜುಕೊಳ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರ ಬಳಕೆಗೆ ಸಿಗದೇ ಹಾಳು ಬಿದ್ದಿದೆ. ಈಜುಕೊಳ ದುರಸ್ತಿಪಡಿಸಲು ಅನುದಾನ ಇಲ್ಲ ಎಂಬುದು ಕ್ರೀಡಾ ಇಲಾಖೆ ಅಧಿಕಾರಿಗಳ ಅಳಲು.

‘ಹೀಗಾಗಿ ನಗರದ ಹೆಮ್ಮೆ ಎನಿಸಬೇಕಿದ್ದ ಅಂತಾರಾಷ್ಟ್ರೀಯ ಖ್ಯಾತಿ ಈಜುಕೊಳ ನಿಷ್ಪ್ರಯೋಜಕವಾಗಿದೆ. ಇಲ್ಲಿನ ಮಕ್ಕಳಿಗೆ ಈಜು ಕಲಿಕೆ ಗಗನಕುಸುಮವಾಗಿದೆ’ ಎಂದು ನವನಗರದ ನಿವಾಸಿ ಸಂಗಮೇಶ ಮೆಣಸಿನಕಾಯಿ ಬೇಸರ ವ್ಯಕ್ತಪಡಿಸುತ್ತಾರೆ.

ಈಜುಕೊಳದ ಪಕ್ಕದಲ್ಲಿಯೇ ಇರುವ ಸ್ಕೇಟಿಂಗ್ ರಿಂಕ್ ಅಲ್ಲಲ್ಲಿ ಬಿರುಕು ಬಿಟ್ಟಿದೆ. ನಿರ್ವಹಣೆಯ ಕೊರತೆಯಿಂದ ಸಿಮೆಂಟ್‌ನ ನೆಲಹಾಸು ಒಡೆದು ಹೋಗಿದೆ. ಹೀಗಾಗಿ ಅದೂ ಬಳಕೆಗೆ ಬಾರದಂತಾಗಿದೆ. ಸ್ಕೇಟಿಂಗ್ ರಿಂಕ್ ಮೃದುತ್ವ ಕಳೆದುಕೊಂಡ ಪರಿಣಾಮ ಅಲ್ಲಿ ಜಾರಲು ಮಕ್ಕಳು ಹಿಂದೇಟು ಹಾಕುತ್ತಾರೆ. ಹಾಗಾಗಿ ಅದೂ ಕೂಡ ಬಳಕೆಗೆ ಬಾರದಂತಾಗಿದೆ.

ಕ್ರೀಡಾಂಗಣದ ಸುತ್ತಲಿನ ಶೌಚಾಲಯಗಳು ಹಾಳು ಬಿದ್ದಿವೆ. ಅಲ್ಲಿಗೆ ನೀರು ಪೂರೈಕೆ ಇಲ್ಲ. ಹಾಗಾಗಿ ಅವು ಸಾರ್ವಜನಿಕರ ಬಳಕೆಗೂ ಇದ್ದೂ ಇಲ್ಲದಂತಾಗಿವೆ. ಸ್ಥಳೀಯರು ಅವುಗಳ ಕಿಟಕಿ ಗಾಜು ಒಡೆದು, ಬಾಗಿಲು ಮುರಿದಿದ್ದು, ಕೆಲವರು ನೀರಿಲ್ಲದೇ ಬಳಕೆ ಮಾಡಿರುವುದರಿಂದ ದುರ್ನಾತ ಬೀರುತ್ತಿವೆ. ಇದರಿಂದ ಮುಂಜಾನೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಶೌಚ ಕರ್ಮಕ್ಕೆ ಬಯಲನ್ನೇ ಆಶ್ರಯಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry