ಅಭ್ಯರ್ಥಿಗಳ ಮೊಬೈಲ್‌ ಸ್ವಿಚ್ಡ್ ಆಫ್‌!

7

ಅಭ್ಯರ್ಥಿಗಳ ಮೊಬೈಲ್‌ ಸ್ವಿಚ್ಡ್ ಆಫ್‌!

Published:
Updated:

ಬೆಳಗಾವಿ: ಮತದಾನ ಮುಗಿದಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯೊಳಗೆ ಸೇರಿಯಾಗಿದೆ. ಹಳ್ಳಿ ಹಳ್ಳಿ, ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸಿದ್ದ ಚುನಾವಣಾ ಅಭ್ಯರ್ಥಿಗಳು ಈಗ ಫುಲ್‌ ರಿಲ್ಯಾಕ್ಸ್‌! ಎಷ್ಟೋ ದಿನಗಳ ನಂತರ ‘ನಿಜವಾದ ಭಾನುವಾರ’ವನ್ನು ಅನುಭವಿಸಿದಂತಾಗಿದೆ.

ಹಲವು ದಿನಗಳಿಂದ ಪ್ರಚಾರ ಮಾಡಿ ಸುಸ್ತಾಗಿದ್ದ ಅಭ್ಯರ್ಥಿಗಳು, ವಿಶ್ರಾಂತಿ ಪಡೆದರು. ತಮ್ಮ ವಿಶ್ರಾಂತಿಗೆ ಭಂಗ ಬಾರದೆಂದು ಹಲವರು ಮೊಬೈಲ್‌ಗಳನ್ನು ‘ನಾಟ್‌ ರೀಚಬಲ್‌’ ಮಾಡಿಟ್ಟಿದ್ದರು. ಇನ್ನು ಕೆಲವರು ‘ಸ್ವಿಚ್ ಆಫ್‌’ ಮಾಡಿ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಇನ್ನುಳಿದವರು ತಮ್ಮ ಸ್ನೇಹಿತರು, ಹಿತೈಷಿಗಳ ಜೊತೆ ಮನೆಯಲ್ಲಿಯೇ ಕಾಲ ಕಳೆದರು.

ಬೈಲಹೊಂಗಲದ ಬಿಜೆಪಿ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಅವರು ಸಂಬಂಧಿಕರ ಮೂರು ಮದುವೆಗೆ ಹಾಜರಾದರು. ರಾಮದುರ್ಗದಲ್ಲಿ ನಡೆದ ಮದುವೆಯಲ್ಲೂ ಭಾಗವಹಿಸಿದ್ದರು. ‘ಬಹಳ ದಿನಗಳಿಂದ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಈಗ ಮದುವೆಯ ನೆಪದಲ್ಲಿ ಎಲ್ಲರನ್ನೂ ಭೇಟಿಯಾದಂತಾಯಿತು’ ಎಂದು ಪ್ರತಿಕ್ರಿಯಿಸಿದರು.

ಸ್ವಚ್ಛತೆಯಲ್ಲಿ ತೊಡಗಿದ ಅಭಯ: ಪ್ರತಿ ಭಾನುವಾರ ತಮ್ಮ ಕ್ಷೇತ್ರದಲ್ಲಿ ನಡೆಸುತ್ತಿದ್ದ ಸ್ವಚ್ಛತಾ ಅಭಿಯಾನವನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಮುಂದುವರಿಸಿದರು. ಮತದಾನದ ಮರುದಿನವೂ ಬಿಡುವು ನೀಡದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನ್ನು ಕಂಡು ಜನರು ಪ್ರಶಂಶಿಸಿದರು.

ಸುಮಾರು 150ಕ್ಕೂ ಹೆಚ್ಚು ಯುವಕರ ಜೊತೆಗೂಡಿ ಆರ್.ಪಿ.ಡಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೈಗೊಂಡಿದ್ದರು. ವ್ಯಾಕ್ಸಿನ್‌ ಡಿಪೊದಲ್ಲಿ ಹುತಾತ್ಮ ಯೋಧರ ಹೆಸರಿನಲ್ಲಿ ನೆಟ್ಟಿರುವ ಗಿಡಗಳಿಗೆ ನೀರು, ಗೊಬ್ಬರ ಹಾಕಿದರು.

ಆಸ್ಪತ್ರೆ ಅಲೆದಾಟ: ಮತದಾನದ ವೇಳೆ ಸಂಭವಿಸಿದ್ದ ಘರ್ಷಣೆಯಲ್ಲಿ ಗಾಯಗೊಂಡ ಪಕ್ಷದ ಕಾರ್ಯಕರ್ತ ರಾಜು ಗುಂಜಿಕರ ಅವರನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಡಿ. ಲಕ್ಷ್ಮೀನಾರಾಯಣ ಭೇಟಿಯಾಗಿ ಸಾಂತ್ವನ ಹೇಳಿದರು. ವಡಗಾವಿಯ ಮಾರುತಿ ಗಲ್ಲಿಯಲ್ಲಿದ್ದ ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

‘ಘರ್ಷಣೆಯಲ್ಲಿ ಗಾಯಗೊಂಡ ಕಾರ್ಯಕರ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಇವರಲ್ಲದೇ, ಇನ್ನೂ ಮೂರು ಜನರ ಮೇಲೆ ಹಲ್ಲೆ ನಡೆದಿದೆ. ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನೂ ವಿಚಾರಿಸಿದ್ದೇನೆ. ನನಗೋಸ್ಕರ ಚುನಾವಣೆಯಲ್ಲಿ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು. ಇವರ ಮೇಲೆ ಕೆಲವರು ರಾಜಕೀಯ ದ್ವೇಷದಿಂದ ಹಲ್ಲೆ ನಡೆಸಿದ್ದಾರೆ. ಎಲ್ಲ ಅಭ್ಯರ್ಥಿಗಳು ರಿಲ್ಯಾಕ್ಸ್‌ ಆಗಿದ್ದರೆ ನಾನಿಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಫಿರೋಜ್‌ ಸೇಠ್‌, ಬಿಜೆಪಿಯ ಅನಿಲ ಬೆನಕೆ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ, ಬಿಜೆಪಿಯ ಸಂಜಯ ಪಾಟೀಲ ಸೇರಿದಂತೆ ಹಲವರ ಫೋನ್‌ಗಳು ‘ನಾಟ್‌ ರೀಚಬಲ್‌’ ಆಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry