ಸೋಲು–ಗೆಲುವಿನ ಲೆಕ್ಕಾಚಾರ ಶುರು

7
ಇವಿಎಂಗಳಲ್ಲಿ 203 ಅಭ್ಯರ್ಥಿಗಳ ಭವಿಷ್ಯ l ಗರಿಗೆದರಿದ ನಿರೀಕ್ಷೆಗಳು

ಸೋಲು–ಗೆಲುವಿನ ಲೆಕ್ಕಾಚಾರ ಶುರು

Published:
Updated:

ಬೆಳಗಾವಿ: ವಿಧಾನಸಭೆ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ, ಜಿಲ್ಲೆಯ ಎಲ್ಲ 18 ಮತಕ್ಷೇತ್ರಗಳಲ್ಲೂ ಸೋಲು–ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ.

ಯಾವ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವಾದ ಮಾಡಿರಬಹುದು, ಯಾವ ವಿಷಯಗಳಿಂದ ಯಾರಿಗೆ ಹೇಗೆ ಹೊಡೆತ ಬೀಳಬಹುದು, ಎಷ್ಟು ಅಂತರದಿಂದ ಗೆಲ್ಲಬಹುದು–ಸೋಲಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಮತ ಎಣಿಕೆ ಪ್ರಕ್ರಿಯೆ ಇದೇ 15ರಂದು ನಡೆಯಲಿದ್ದು, ಅಂದು ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ನಡುವೆ, ಪಕ್ಷ

ಗಳ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.

ಮತದಾರರು ತಮ್ಮ ನಿರ್ಧಾರವನ್ನು ಈಗಾಗಲೇ ಬರೆದಿದ್ದಾರೆ. 203 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ. ಅದನ್ನು ತಣಿಸಿಕೊಳ್ಳಲು ಅಥವಾ ಜೀವಂತವಾಗಿಟ್ಟುಕೊಳ್ಳಲು ವಿವಿಧ ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಹಳ್ಳಿಗಳ ಅರಳಿಕಟ್ಟೆಗಳಲ್ಲಿ, ವೃತ್ತಗಳಲ್ಲಿ, ನಾಲ್ಕಾರು ಜನ ಸೇರುವ ಪ್ರದೇಶಗಳಲ್ಲಿ ಇಂತಹ ಚರ್ಚೆಗಳು, ಗುಸುಗುಸುಗಳು ಹರಟೆಯ ವಿಷಯಗಳಾಗಿವೆ.

ಮಾಹಿತಿ ಕಲೆ ಹಾಕುತ್ತಾ...: ಅಭ್ಯರ್ಥಿಗಳು ತಮ್ಮ ಮತ ಗಳಿಕೆಯ ಕುರಿತು ‘ವಿಶ್ವಾಸಾರ್ಹ ಮೂಲ’ಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತದಾರರ ಪಟ್ಟಿ ಇಟ್ಟುಕೊಂಡು ಯಾವ ಮತಗಟ್ಟೆಯಲ್ಲಿ ಎಷ್ಟು ಮತಗಳು ದೊರೆತಿರಬಹುದು ಎನ್ನುವ ‘ಅಂದಾಜು’ ಫಲಿತಾಂಶವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಮತದಾನದ ಮರುದಿನವಾದ ಭಾನುವಾರ ಬಹುತೇಕ ಅಭ್ಯರ್ಥಿಗಳು ಇಂತಹ ‘ಮಾಹಿತಿ ಸಂಗ್ರಹಿಸುವ’ ಕಸರತ್ತುಗಳಲ್ಲಿ ತೊಡಗಿದ್ದರು.

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿದೆ. ಇದು ಯಾವ ಪಕ್ಷಕ್ಕೆ ‘ಅನುಕೂಲ’ ಮಾಡಿಕೊಡಬಹುದು ಎನ್ನುವ ವಿಶ್ಲೇಷಣೆಗಳೂ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಎದ್ದವರಿಂದ ಆಗುವ ಪರಿಣಾಮಗಳ ಕುರಿತೂ ವಿಶ್ಲೇಷಿಸಲಾಗುತ್ತಿದೆ. ಮತ ವಿಭಜನೆಯಿಂದ ಯಾರಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಮತದಾನೋತ್ತರ ಸಮೀಕ್ಷೆಗಳು ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ತಮ್ಮ ಕ್ಷೇತ್ರದ ಫಲಿತಾಂಶ ಮಾತ್ರವಲ್ಲದೇ, ರಾಜ್ಯದಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಭವಿಷ್ಯ ಏನಾಗಲಿದೆ, ಯಾರು ಮುಖ್ಯಮಂತ್ರಿ ಆಗಬಹುದು ಎಂಬಿತ್ಯಾದಿ ಲೆಕ್ಕಾಚಾರಗಳೂ ನಡೆದಿವೆ.

ಈ ಕ್ಷೇತ್ರದಲ್ಲಿ ಇಂತಹ ಪಕ್ಷದವರು ಗೆಲ್ಲಬಹುದು ಎಂಬ ‘ಊಹೆಯ ಫಲಿತಾಂಶ ಪಟ್ಟಿ’ಗಳು ಕೂಡ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ‘ಪ್ರಕಟ’ಗೊಳ್ಳುತ್ತಿವೆ. ಆ ಮಾಧ್ಯಮದ ‘ಗೋಡೆ’ಯಲ್ಲಿ ಪರ ಹಾಗೂ ವಿರೋಧದ ಬರಹಗಳು ಕಂಡುಬರುತ್ತಿವೆ.

ಯುವ ಮತದಾರರತ್ತ ಚಿತ್ತ: ‘ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ 5 ವರ್ಷಗಳಲ್ಲಿ ನೋಂದಾಯಿಸಿಕೊಂಡ ಹೊಸ ಮತದಾರರ ಸಂಖ್ಯೆ 5 ಲಕ್ಷ. 18ರಿಂದ 23 ವರ್ಷ ವಯಸ್ಸಿನ 5,19,469 ಮತದಾರರು ಈ ಬಾರಿ ಮತ ಚಲಾಯಿಸಿದ್ದಾರೆ ಎಂಬ ಅಂದಾಜಿದೆ. 2013ರಲ್ಲಿ ಒಟ್ಟು 32,18,418 ಮತದಾರರಿದ್ದರು. ಈ ಬಾರಿ 37,33,887ಕ್ಕೆ ಏರಿಕೆಯಾಗಿದೆ. ಈ ಪೈಕಿ ಶೇ 76.18 (28,37,754) ಮತದಾರರು ಭಾಗವಹಿಸಿದ್ದಾರೆ. ಹೊಸದಾಗಿ ಸೇರಿದ 5,19,469 ಮತದಾರರ ಪೈಕಿ 3,94,796 ಮಂದಿ ಮತ ಚಲಾಯಿಸಿರಬಹುದು. ಈ ಯುವಜನರ ಯೋಚನಾ ಲಹರಿ ಹೀಗೆಯೇ ಇರುತ್ತದೆ ಎನ್ನಲಾಗದು. ಕುಟುಂಬದಲ್ಲಿ ಹಿರಿಯರು ಒಂದು ಪಕ್ಷಕ್ಕೆ, ಮಕ್ಕಳು ಮತ್ತೊಂದು ಪಕ್ಷಕ್ಕೆ ಮತ ಹಾಕುವುದನ್ನೂ ಕಾಣಬಹುದು’ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ.

‘ದಲಿತರ ಮತಗಳು ಒಂದೇ ಪಕ್ಷದತ್ತ ಹೋಗುತ್ತವೆಂದು ಹೇಳಲಾಗದು. ದಲಿತ ಯುವಕರು ತಮ್ಮ ವಿಚಾರಕ್ಕೆ ತಕ್ಕಂತೆ ಬೆಂಬಲಿಸಿರಬಹುದು. ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಮತಗಳು ಕೂಡ ಒಂದೇ ಪಕ್ಷಕ್ಕೆ ಸಿಗುತ್ತವೆ ಎಂದು ಹೇಳಲಾಗದು. ಯುವಕರು ಮತ್ತು 50 ವರ್ಷ ವಯಸ್ಸು ದಾಟಿದವರ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿದೆ. ಈ ಎರಡೂ ವಯಸ್ಸಿನವರ ವಿಚಾರಗಳಲ್ಲೂ ಅಜಗಜಾಂತರ ಕಂಡುಬರುತ್ತಿವೆ. ಯುವಜನರು ಯಾರಿಗೆ ಮತ ಚಲಾಯಿಸಿರಬಹುದು ಎನ್ನುವುದು ಕುತೂಹಲ ಮೂಡಿಸಿದೆ’ ಎನ್ನುತ್ತಾರೆ ಅವರು.

ಲೆಕ್ಕಾಚಾರಗಳು ಏನೇ ಇದ್ದರೂ ಮತದಾರರ ಒಲವು ಯಾರಿಗೆ ಎನ್ನುವುದು ಮಂಗಳವಾರ ಗೊತ್ತಾಗಲಿದೆ.

ತೆರೆ–ಮರೆಯಲ್ಲಿ ಬಾಜಿ

ಯಾರು ಗೆಲ್ಲಬಹುದು, ಸೋಲಬಹುದು ಎನ್ನುವ ಕುರಿತು ತೆರೆ–ಮರೆಯಲ್ಲಿ ಬಾಜಿ ಕಟ್ಟಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ. ಹಣ, ಆಸ್ತಿ ಇಟ್ಟುಕೊಂಡು ಬಾಜಿ ಕಟ್ಟುವುದು ಕಂಡುಬರುತ್ತಿಲ್ಲ. ಚರ್ಚೆಗಳಿಗೆ ಮಾತ್ರವೇ ಇದು ಸೀಮಿತವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry