ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಕೊಠಡಿ ಸೇರಿದ ಅಭ್ಯರ್ಥಿಗಳ ಭವಿಷ್ಯ

ಧಾರವಾಡ: ಮತಯಂತ್ರಗಳಿರುವ ಕೃಷಿ ವಿಶ್ವ ವಿದ್ಯಾಲಯಕ್ಕೆ ಸರ್ಪಗಾವಲು
Last Updated 14 ಮೇ 2018, 7:04 IST
ಅಕ್ಷರ ಗಾತ್ರ

ಧಾರವಾಡ: ಮತದಾನದ ನಂತರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳು ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಭಾನುವಾರ ಇರಿಸಲಾಯಿತು.

ಕೇಂದ್ರದ ಚುನಾವಣಾ ವೀಕ್ಷಕ ಪ್ರಕಾಶಚಂದ್ ಪವನ್, ಜಿಲ್ಲಾ ಚುನಾವಣಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಹುಬ್ಬಳ್ಳಿ– ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶಮೂರ್ತಿ ಸೇರಿ ಕೇಂದ್ರ ಅರೆಸೇನಾ ಪಡೆಗಳ ಹಿರಿಯ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳಿರುವ ಕೊಠಡಿಗೆ ಬೀಗ ಹಾಕಲಾಯಿತು.

ಈ ವೇಳೆ ಮಾತನಾಡಿದ ಡಾ. ಬೊಮ್ಮನಹಳ್ಳಿ, ‘ಜಿಲ್ಲೆಯ ಎಲ್ಲ ಕಡೆ ಮತದಾನ ಶಾಂತಯುತವಾಗಿ ನಡೆದಿದೆ. ಅಂತಿಮವಾಗಿ ಒಟ್ಟಾರೆ ಶೇ 70.99 ರಷ್ಟು ಮತದಾನವಾಗಿದೆ. 2013ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ 3.89 ರಷ್ಟು ಹೆಚ್ಚಳವಾಗಿದೆ. ಮತದಾನದ ನಂತರ ಎಲ್ಲ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕೇಂದ್ರಗಳಿಂದ ಬಂದ ಇವಿಎಂ ಹಾಗೂ ವಿ.ವಿ ಪ್ಯಾಟ್‌ ಯಂತ್ರಗಳನ್ನು ಅಭ್ಯರ್ಥಿಗಳು ಮತ್ತು ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಯಲ್ಲಿ ಇರಿಸಿ ಸೀಲ್ ಮಾಡಲಾಗಿದೆ’ ಎಂದರು.

‘ಅಭ್ಯರ್ಥಿಗಳ ಭವಿಷ್ಯ ದಾಖಲಾಗಿರುವ ಮತಯಂತ್ರಗಳಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ಅರೆಸೇನಾ ಪಡೆಗಳ ಯೋಧರನ್ನು ಮತಯಂತ್ರಗಳ ಕಾವಲಿಗೆ ನೇಮಿಸಲಾಗಿದೆ’ ಎಂದು ವಿವರಿಸಿದರು.

ಬೆಳಿಗ್ಗೆ ಸಭೆ: ಬೆಳಿಗ್ಗೆ 11ಕ್ಕೆ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಅವರ ಚುನಾವಣಾ ಏಜೆಂಟರ್‌ ಸಭೆ, ಆಯಾ ಕ್ಷೇತ್ರಗಳ ಎಣಿಕೆ ಸಭಾಂಗಣದಲ್ಲಿ ಜರುಗಿದವು. ಮತಗಳ ಎಣಿಕೆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ನಾಳೆ ಮತ ಎಣಿಕೆ ಎಲ್ಲಿ?

ಕೃಷಿ ವಿ.ವಿಯ ಮುಖ್ಯ ಕಟ್ಟಡದ ನೆಲಮಹಡಿಯಲ್ಲಿ ಹುಬ್ಬಳ್ಳಿ ಧಾರವಾಡ (ಕೇಂದ್ರ) ಹಾಗೂ ಮೊದಲ ಮಹಡಿಯಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದ ಮತಯಂತ್ರಗಳ ಭದ್ರತಾ ಕೊಠಡಿಗಳು ಮತ್ತು ಎಣಿಕೆ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ.

ಮುಖ್ಯ ಕಟ್ಟಡದ ಹಿಂಭಾಗದಲ್ಲಿರುವ ಕಟ್ಟಡದ ನೆಲಮಹಡಿಯಲ್ಲಿ ಹುಬ್ಬಳ್ಳಿ ಧಾರವಾಡ (ಪೂರ್ವ) ಮತ್ತು ಧಾರವಾಡ ಕ್ಷೇತ್ರ, ಮೊದಲನೆಯ ಮಹಡಿಯಲ್ಲಿ ಕುಂದಗೋಳ, ಹುಬ್ಬಳ್ಳಿ–ಧಾರವಾಡ (ಪಶ್ಚಿಮ) ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರಗಳ ಭದ್ರತಾ ಕೊಠಡಿಗಳು ಹಾಗೂ ಎಣಿಕೆ ಸಭಾಂಗಣಗಳನ್ನು ಸಿದ್ಧಪಡಿಸಲಾಗಿದೆ. ಇದೇ ಕಟ್ಟಡದಲ್ಲಿ ಮಾಧ್ಯಮ ಕೇಂದ್ರವನ್ನೂ ಸ್ಥಾಪಿಸಲಾಗಿದೆ.

ಮತಗಳ ಎಣಿಕೆಗೆ 14 ಟೇಬಲ್‌ ವ್ಯವಸ್ಥೆ

ಮತಗಳ ಎಣಿಕೆ ಮೇ 15 ರಂದು ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಯುತ್ತದೆ. ನಂತರ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ನಡೆಯುವುದು.

ಪ್ರತಿ ಸುತ್ತಿನಲ್ಲಿ 14 ಮತಗಟ್ಟೆಗಳ ಎಣಿಕೆ ಕಾರ್ಯ ಕೈಗೊಳ್ಳಲು 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯವು 15 ರಿಂದ 20 ಸುತ್ತುಗಳಲ್ಲಿ ನಡೆಯಲಿದೆ.

ಮತಗಳ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೈಕ್ರೊ ಅಬ್ಸರ್ವರ್‌ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮತ ಎಣಿಕೆ ದಿನದಂದು ಬೆಳಿಗ್ಗೆ 5.30ಕ್ಕೆ ಎಣಿಕೆ ಕೇಂದ್ರದಲ್ಲಿ ಹಾಜರಿರಲು ಈಗಾಗಲೇ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT