ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿಗೆ ಮೊರೆಹೋದ ಅಭ್ಯರ್ಥಿಗಳು

ಕುಟುಂಬ ಸದಸ್ಯರ ಜತೆ ಹರಟೆ; ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ
Last Updated 14 ಮೇ 2018, 8:25 IST
ಅಕ್ಷರ ಗಾತ್ರ

ಮೈಸೂರು: ಅಬ್ಬರದ ಪ್ರಚಾರ, ರೋಡ್‌ ಷೋ, ಪಾದಯಾತ್ರೆ, ಆರೋಪ–ಪ್ರತ್ಯಾರೋಪಗಳಲ್ಲೇ ಮುಳುಗಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭಾನುವಾರ ನಿರಾಳರಾದಂತೆ ಕಂಡುಬಂದರು.

ರಾಜಕೀಯ ಜಂಜಾಟದಲ್ಲಿ ವೈಯಕ್ತಿಕ ಜೀವನಕ್ಕೆ ಗಮನಕೊಡಲು ಸಾಧ್ಯವಾಗದವರು ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು. ಚುನಾವಣೆ ಮುಗಿದ ಕಾರಣ ಅಭ್ಯರ್ಥಿಗಳ ಜತೆ ಪಕ್ಷಗಳ ಕಾರ್ಯಕರ್ತರೂ ನಿಟ್ಟುಸಿರುಬಿಟ್ಟರು. ಫಲಿತಾಂಶ ಏನಾಗುತ್ತದೆ ಎಂಬ ಆತಂಕ ಇದ್ದರೂ, ಅದಕ್ಕೆ ತಲೆಕೆಡಿಸಿಕೊಳ್ಳದೆ ಭಾನುವಾರವನ್ನು ಉತ್ಸಾಹದಿಂದ ಕಳೆದರು.

ಮೈಸೂರು ಜಿಲ್ಲೆ ಹಾಗೂ ನಗರದ ಕೆಲವು ಅಭ್ಯರ್ಥಿಗಳು ಚುನಾವಣೆ ವೇಳೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಸಮಯ ಮೀಸಲಿಟ್ಟರು. ಮತ್ತೆ ಕೆಲವರು ಆಪ್ತರ ಜತೆಗೂಡಿ ಸೋಲು–ಗೆಲುವಿನ ಸಾಧ್ಯತೆಗಳ ವಿಶ್ಲೇಷಣೆ ಮೂಲಕ ದಿನವನ್ನು ಕಳೆದರು.

‘ಹೈವೋಲ್ಟೇಜ್‌’ ಕದನದಿಂದ ರಾಜ್ಯದ ಕುತೂಹಲ ಕೆರಳಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಎರಡು ದಿನಗಳ ವಿಶ್ರಾಂತಿಗಾಗಿ ಮಡಿಕೇರಿಯಲ್ಲಿದ್ದಾರೆ. ಭಾನುವಾರ ಬೆಳಿಗ್ಗೆ ಮಡಿಕೇರಿಗೆ ತೆರಳಿರುವ ಅವರು ಸೋಮವಾರ ಸಂಜೆ ನಗರಕ್ಕೆ ವಾಪಸಾಗಲಿದ್ದಾರೆ.

‘ಇಷ್ಟು ದಿನಗಳ ಒತ್ತಡ ಕಳೆಯಲು ಮಡಿಕೇರಿಗೆ ಹೋಗಿದ್ದೇನೆ. ನಾನು ಹಾಗೂ ಇಬ್ಬರು ಗೆಳೆಯರು ಜತೆಗಿದ್ದಾರೆ. ರಾಜಕೀಯ ಜೀವನಕ್ಕೆ ಎರಡು ದಿನಗಳ ಬಿಡುವು ನೀಡಿದ್ದೇನೆ’ ಎನ್ನುತ್ತಾ ಅವರು ನಗು ಬೀರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ನಡುವಿನ ಹಣಾಹಣಿಯಿಂದಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಿಂಗಳಿಗೂ ಅಧಿಕ ಕಾಲ ‘ಪ್ರೆಷರ್‌ ಕುಕ್ಕರ್‌’ ರೀತಿಯ ವಾತಾವರಣವಿತ್ತು. ಚುನಾವಣೆ ಮುಗಿದಿರುವ ಕಾರಣ ಅಭ್ಯರ್ಥಿಗಳು ಮಾತ್ರವಲ್ಲ, ಇಲ್ಲಿನ ಮತದಾರರೂ ನಿರಾಳರಾಗಿದ್ದಾರೆ.

ಕೆ.ಆರ್‌.ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಾ.ರಾ.ಮಹೇಶ್‌ ಅವರು ಆಪ್ತರೊಂದಿಗೆ ಶಿರಡಿಗೆ ಭೇಟಿ ತೆರಳಿದ್ದಾರೆ.

ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌.ರಂಗಪ್ಪ ಅವರು ಕಾರ್ಯಕರ್ತರು, ಅಪ್ತರು ಮತ್ತು ಕುಟುಂಬ ಸದಸ್ಯರ ಜತೆ ಕಾಲ ಕಳೆದರು. ಮನೆಯ ಹಿತ್ತಲಲ್ಲಿ ಕುಳಿತು ಆಪ್ತರ ಜತೆ ಗೆಲುವಿನ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಮನೆಯಲ್ಲಿ ಸಾಕಿರುವ ಹಸುಗಳಿಗೆ ಹುಲ್ಲು ಹಾಕಿದರು, ಕೋಳಿಗಳಿಗೆ ಕಾಳು ಹಾಕಿದರು.

ರಂಗಪ್ಪ ಅವರು ಸುಮಾರು ಒಂದು ತಿಂಗಳಿಗೂ ಅಧಿಕ ನಿರಂತರ ಪಾದಯಾತ್ರೆ ನಡೆಸಿದ್ದರು. ಪ್ರತಿದಿನ ಸರಾಸರಿ 8ರಿಂದ 10 ಕಿ.ಮೀ. ನಡೆಯುತ್ತಿದ್ದರು.

ಎನ್‌.ಆರ್‌, ಕೆ.ಆರ್‌ ಮತ್ತು ಚಾಮರಾಜ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗಳಾದ ತನ್ವೀರ್‌ ಸೇಠ್‌, ಎಂ.ಕೆ.ಸೋಮಶೇಖರ್‌ ಮತ್ತು ವಾಸು ಅವರು ಕುಟುಂಬ ಸದಸ್ಯರು ಹಾಗೂ ಆಪ್ತರ ಜತೆ ಕಾಲ ಕಳೆದರು. ಸೋಮಶೇಖರ್‌ ಅವರು ಬೂತ್‌ಮಟ್ಟದ ಪದಾಧಿಕಾರಿಗಳನ್ನು ಭೇಟಿಯಾದರು.

ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್‌.ನಾಗೇಂದ್ರ ಅವರು ಜಯನಗರದ ನಿವಾಸದಲ್ಲಿ ಕುಟುಂಬ ಸದಸ್ಯರ ಜತೆ ಕಾಲ ಕಳೆದರು. ಪತ್ರಿಕೆ ಓದಲು, ಟಿ.ವಿ. ನೋಡಲು ಸಮಯ ಮೀಸಲಿಟ್ಟರು.

‘ಬಿಜೆಪಿ ಮೂರನೇ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಪ್ರಚಾರಕ್ಕೆ ಕಡಿಮೆ ಸಮಯ ದೊರೆತಿತ್ತು. ಅಲ್ಪ ಅವಧಿಯಲ್ಲಿ ಎಲ್ಲರನ್ನು ತಲುಪುವ ಉದ್ದೇಶದಿಂದ ಬಿಡುವಿಲ್ಲದೆ ಪ್ರಚಾರ ನಡೆಸಿದೆ. ಇದರಿಂದ ಕುಟುಂಬ ಸದಸ್ಯರ ಜತೆ ಕಾಲ ಕಳೆಯಲು ಆಗಿರಲಿಲ್ಲ. ಶನಿವಾರ ರಾತ್ರಿಯಿಂದ ಬಿಡುವು ಲಭಿಸಿದೆ’ ಎಂದು ಹೇಳಿದರು.

‘ಅರ್ಧ ಗಂಟೆ ತಡವಾಗಿ ಎದ್ದೆ’

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ.ರಾಮದಾಸ್‌ ಅವರು ಪ್ರತಿದಿನ ನಸುಕಿನ 4 ಗಂಟೆಗೆ ಏಳುವರು. ಭಾನುವಾರ ಅರ್ಧ ಗಂಟೆ ತಡವಾಗಿ ಎದ್ದರು.

‘4.30ಕ್ಕೆ ಎದ್ದೆ. ಯೋಗ, ಧ್ಯಾನ, ಸಂಧ್ಯಾವಂದನೆ ಬಳಿಕ ಕೋಟೆ ಆಂಜನೇಯ, ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿದೆ. ಎಂದಿನಂತೆ ಪಾರಿವಾಳಗಳಿಗೆ ಕಾಳುಹಾಕಿದೆ. ಸುಮಾರು 7 ಗಂಟೆಯವರೆಗೆ ಗೆಳೆಯರ ಜತೆ ಮಾತುಕತೆ ನಡೆಸಿದೆ’ ಎಂದು ದಿನಚರಿಯನ್ನು ವಿವರಿಸಿದರು.

‘ಕಳೆದ ಕೆಲ ದಿನಗಳಿಂದ ದಿನಪತ್ರಿಕೆ ಓದಲು ಸಮಯ ಸಿಕ್ಕಿರಲಿಲ್ಲ. ಎರಡು ಮೂರು ದಿನಗಳ ಪತ್ರಿಕೆಗಳನ್ನು ಮೇಲಿಂದ ಮೇಲೆ ಓದಿದೆ’ ಎಂದರು.

ಮಧ್ಯಾಹ್ನದ ಬಳಿಕ ಕ್ಷೇತ್ರದ ಬೂತ್‌ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಅವರು ಪಾಲ್ಗೊಂಡರು. ಸಂಜೆ ಅರಮನೆ ಆವರಣದ ಶ್ವೇತವರಾಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT