ಜೀವನಾನುಭವ ತೃಪ್ತಿ ನೀಡುವಂತಿರಲಿ

7
‘ಪ್ರಭುಲಿಂಗಲೀಲೆ’ ಕಾವ್ಯದ ಗಮಕ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿ

ಜೀವನಾನುಭವ ತೃಪ್ತಿ ನೀಡುವಂತಿರಲಿ

Published:
Updated:

ಮೈಸೂರು: ವಸ್ತುಗಳನ್ನು ವರ್ಣಿಸಬಹುದು. ಆದರೆ ಬಯಲನ್ನು ವರ್ಣಿಸಲು ಸಾಧ್ಯವಿಲ್ಲ. ವಚನಕಾರ ಅಲ್ಲಮಪ್ರಭುವೆಂದರೆ ಬಟಾಬಯಲು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪರಂಪರೆ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕವಿ ಚಾಮರಸನ ‘ಪ್ರಭುಲಿಂಗಲೀಲೆ’ ಕಾವ್ಯದ ವಾಚನ– ವ್ಯಾಖ್ಯಾನ’ ಗಮಕ ಕಾರ್ಯಕ್ರಮವನ್ನು ಇಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಭುವಿನದು ಬಯಲು ಜೀವನ, ಅವರ ಜೀವನವೇ ಬಯಲಿನ ಕಥೆ. ಅಂತಹ ಕಥನವನ್ನು ‘ಪ್ರಭುಲಿಂಗಲೀಲೆ’ ತೆರೆದಿಡುತ್ತದೆ. ಅದನ್ನು ಕೇಳುತ್ತಾ ನಾವು ಬಯಲಾಗಬೇಕು. ಬದುಕಿನಲ್ಲಿ ಬಯಲನ್ನು ಸಾಧಿಸಬೇಕು. ಅದೊಂದು ಸುಂದರ ಸಾಧನೆ ಎಂದು ಸಲಹೆ ನೀಡಿದರು.

ಅಲ್ಲಮಪ್ರಭು ಒಳಕೃಷಿ ಮಾಡಿದರು. ಯಾವುದನ್ನು ಅನುಭವಿಸಿದರೂ ಪರಮ ತೃಪ್ತಿ ನೀಡುವಂತಿರಬೇಕು. ಯಾವುದೇ ವೇಷ, ವೃತ್ತಿ ನೆಮ್ಮದಿ ತರಬೇಕು. ಬಯಲು ಬಯಲನೇ ಬಿತ್ತಿ, ಬಯಲು ಬೆಳೆಯನೆ ಬೆಳೆದು ಬಯಲಾಗಿ ಹೋಯಿತಲ್ಲೋ ಅನ್ನುತ್ತಾರೆ ಅಲ್ಲಮ. ಅಂತಹ ಅಂತರಂಗದ ಬದುಕು ನಮ್ಮದಾಗಬೇಕು ಎಂದು ಆಶಿಸಿದರು.

ಪ್ರಭುಲಿಂಗಲೀಲೆ ಕೇಳುವ ಮುನ್ನ ಏನೋ ಆಗಿರುತ್ತೇವೆ. ಆದರೆ ಮುಗಿಯುವ ವೇಳೆಗೆ ಬಯಲಾಗಿರುತ್ತೇವೆ. ಒಂದು ವೇಳೆ ನಾವು ಬಯಲಾಗದಿದ್ದರೆ ಸರಿಯಾಗಿ ಕಾವ್ಯವನ್ನು ಆಲಿಸಿಲ್ಲವೆಂದರ್ಥ. ಅಲ್ಲಮನ ಬೆಡಗಿನ ವಚನಗಳು ಮೇಲುನೋಟಕ್ಕೆ ಅರ್ಥವಾಗುವುದಿಲ್ಲ. ಅವುಗಳ ಒಳಹೊಕ್ಕರೆ ವಿಭಿನ್ನ ಲೋಕ ತೆರೆದುಕೊಳ್ಳುತ್ತದೆ ಎಂದು ತಿಳಿಸಿದರು.

ಅಲ್ಲಮ ಎಲ್ಲರನ್ನೂ ಗೌರವಿಸುತ್ತಿದ್ದರು. ಆದರೆ ತಪ್ಪು ಹೆಜ್ಜೆ ಇಟ್ಟಾಗ ಟೀಕಿಸದೆ ಇರುತ್ತಿರಲಿಲ್ಲ. ಬಸವಣ್ಣ ಅವರು ಒಮ್ಮೆ ಗರ್ವದ ಮಾತನಾಡಿದಾಗ, ‘ಇಲ್ಲಿ ಎಲ್ಲವೂ ಗುಹೇಶ್ವರ ಲಿಂಗದ ಒಡೆತನಕ್ಕೆ ಸೇರಿದ್ದು’ ಎಂದಿದ್ದರು. ಆಕಾಶದಲ್ಲಿ ಮೇಘ ಸಂಚರಿಸಿದ ಹಾಗೆ ಜಗತ್ತಿನಲ್ಲಿ ಅಲ್ಲಮ ಸಂಚರಿಸಿದರು ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಚಾಮರಸ ತನ್ನ ಕೃತಿಯಲ್ಲಿ ಎಲ್ಲಿಯೂ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ತಮ್ಮ ಹೆಸರನ್ನು ಘೋಷಿಸಿಕೊಂಡು ಕಾವ್ಯವನ್ನು ಬರೆದವರು ಒಂದು ಬಗೆಯಾದರೆ, ತನ್ನ ಹೆಸರನ್ನು ಎಲ್ಲಿಯೂ ಹೇಳಿಕೊಳ್ಳದ ಕವಿಗಳು ಇದ್ದಾರೆ. ಎರಡನೇ ಗುಂಪಿಗೆ ಚಾಮರಸ ಸೇರುತ್ತಾನೆ. ಪ್ರಭುವಿನ ಲೀಲೆಯನ್ನು ಹೇಳುತ್ತ ಮೇರುಕವಿಯಾಗಿ ನಿಲ್ಲುತ್ತಾನೆ’ ಎಂದು ಅಭಿಪ್ರಾಯಪಟ್ಟರು.

ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಅವರ ಮಹತ್ವವನ್ನು ತೋರುವ ಉದ್ದೇಶದಿಂದ ಅಕ್ಕನನ್ನು ಅಲ್ಲಮಪ್ರಭು ಪ್ರಶ್ನಿಸುತ್ತಾರೆ. ಅಲ್ಲಮ ಎಲ್ಲರ ದೋಷಗಳನ್ನು ತಿದ್ದುವ ಉದ್ದೇಶ ಹೊಂದಿದ್ದರು ಎಂದು ಸ್ಮರಿಸಿದರು.

ಸಾಹಿತಿಗಳಾದ ಗುರುಲಿಂಗ ಕಾಪಸೆ, ಮಲೆಯೂರು ಗುರುಸ್ವಾಮಿ, ಗಮಕಿ ಕೃ.ರಾಮಚಂದ್ರ, ಪರಂಪರೆ ಸಂಸ್ಥೆ ಕಾರ್ಯದರ್ಶಿ ಕೃಷ್ಣಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry