ಮತ ಎಣಿಕೆ ಕೇಂದ್ರಕ್ಕೆ ಬಂದೋಬಸ್ತ್

7
17ರಿಂದ 18 ಸುತ್ತುಗಳವರೆಗೆ ಮತ ಎಣಿಕೆ

ಮತ ಎಣಿಕೆ ಕೇಂದ್ರಕ್ಕೆ ಬಂದೋಬಸ್ತ್

Published:
Updated:

ಉಡುಪಿ: ಮತ ಎಣಿಕೆ ಕೇಂದ್ರವಾದ ನಗರದ ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಯಂತ್ರಗಳನ್ನು ಸಂಗ್ರಹಿಸಲಾಗಿದೆ. ದಿನದ 24 ಗಂಟೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ.

ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರ ಇರುವ ಕಾರಣ ಮುಖ್ಯ ಕಟ್ಟಡದ ಒಳಗೆ ಐದು ಎಣಿಕೆ ಕೇಂದ್ರ ಆರಂಭಿಸಲಾಗುತ್ತದೆ. ಒಂದೊಂದು ಕೇಂದ್ರದಲ್ಲಿ ಒಟ್ಟು ಟೇಬಲ್ ಹಾಕಲಾಗುತ್ತದೆ. 17ರಿಂದ 18 ಸುತ್ತುಗಳ ವರೆಗೆ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಅಂತಿಮ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.

‘ಮತಯಂತ್ರಗಳನ್ನು ಮತ ಎಣಿಕೆ ಕೇಂದ್ರದಲ್ಲಿ ಭದ್ರವಾಗಿಟ್ಟು ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ರಾಜಕೀಯ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಗಳ ಪರ ಏಜೆಂಟ್‌ಗಳು ಸಹ ಅಲ್ಲಿ ಬಂದು ಕೂರಲು ಅವಕಾಶ ಇದೆ. ಮತ ಎಣಿಕೆಗೆ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಷೇಧಾಜ್ಞೆ ಜಾರಿ: ಫಲಿತಾಂಶ ಪ್ರಕಟವಾದ ನಂತರ ರಾಜಕೀಯ ಪಕ್ಷಗಳು ಮೆರವಣಿಗೆ ನಡೆಸುವ ಹಾಗೂ ವಿಜಯೋತ್ಸವ ಆಚರಿಸುವ ವೇಳೆ ಅಹಿತಕರ ಘಟನೆ ನಡೆಯಬಹುದು ಎಂದು ಮೇ15ರ ಬೆಳಿಗ್ಗೆ 6ಗಂಟೆಯಿಂದ 17ರ ಬೆಳಿಗ್ಗೆ 6 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಐದು ಜನಕ್ಕಿಂತ ಅಧಿಕ ಮಂದಿ ಗುಂಪುಗೂಡುವಂತಿಲ್ಲ. ಸಭೆ, ಸಮಾರಂಭ ಹಾಗೂ ಮೆರವಣಿಗೆ ನಡೆಸುವಂತಿಲ್ಲ. ಮಾರಕಾಸ್ತ್ರಗಳೊಂದಿಗೆ ಓಡಾಡುವಂತಿಲ್ಲ.

ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಎದುರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್, ಇತರ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry