ಸೋಮವಾರ, ಮಾರ್ಚ್ 8, 2021
31 °C
ಮತದಾನ ಪ್ರಮಾಣ: ಬಬಲೇಶ್ವರ ಕ್ಷೇತ್ರದಲ್ಲಿ ಅತಿ ಹೆಚ್ಚು– ವಿಜಯಪುರ ನಗರದಲ್ಲಿ ಕಡಿಮೆ

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಖಾಡದಲ್ಲಿ ಸ್ಪರ್ಧೆಗಿಳಿದಿದ್ದ 85 ಅಭ್ಯರ್ಥಿಗಳ ಭವಿಷ್ಯ ಶನಿವಾರ ಇವಿಎಂ ಮತ ಯಂತ್ರಗಳಲ್ಲಿ ಭದ್ರವಾಗಿದ್ದು, ಸೈನಿಕ ಶಾಲೆಯ ಆವರಣದಲ್ಲಿನ ಕೊಠಡಿಗಳಲ್ಲಿ ಬಿಗಿ ಭದ್ರತೆಯಲ್ಲಿವೆ.

ಪ್ಯಾರಾ ಮಿಲಿಟರಿ ತುಕಡಿ, ಸ್ಥಳೀಯ ಪೊಲೀಸರು ಮತಯಂತ್ರಗಳಿರುವ ಕೊಠಡಿಗಳಿಗೆ ಬಿಗಿ ಬಂದೋಬಸ್ತ್‌ ಒದಗಿಸಿದೆ. ಕೊಠಡಿಯ ಬಾಗಿಲುಗಳಿಗೆ ಭಾನುವಾರ ನಸುಕಿನಲ್ಲಿ ಜಿಲ್ಲಾ ಚುನಾ ವಣಾಧಿಕಾರಿ ನೇತೃತ್ವದಲ್ಲಿ ಶೀಲ್‌ ಮಾಡ ಲಾಗಿದೆ. ಮಂಗಳವಾರ (ಮೇ 15) ಬಾದಾಮಿ ಅಮಾವಾಸ್ಯೆಯಂದು ಸೈನಿಕ ಶಾಲೆ ಆವರಣದಲ್ಲೇ ಮತ ಎಣಿಕೆ ನಡೆಯಲಿದೆ. ಎಣಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ, ಈ ಕೊಠಡಿಗಳ ಬಾಗಿಲಿಗೆ ಹಾಕಲಾಗಿರುವ ಶೀಲ್‌ ಅನ್ನು ಆಯೋಗದ ಅಧಿಕಾರಿಗಳ ಸಮ್ಮುಖ ತೆರೆದು, ಇವಿಎಂ ಮತ ಯಂತ್ರಗಳನ್ನು ಎಣಿಕೆ ಕೊಠಡಿಗೆ ಸಾಗಿಸಲಾಗುವುದು ಎಂದು ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶೇ 69.61 ಮತದಾನ: 2008, 2013ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಗೊಂಡಿದೆ. 2008ರಲ್ಲಿ ಶೇ 60.65 ಮತದಾನವಾಗಿ ದ್ದರೆ, 2013ರಲ್ಲಿ ಶೇ 66.62 ಮತದಾನ ವಾಗಿತ್ತು. ಇದೀಗ ಶೇ 69.61 ಮತದಾ ನವಾಗಿದ್ದು, ಹಿಂದಿನ ಚುನಾವಣೆಗಿಂತ ಶೇ 3 ರಷ್ಟು ಹೆಚ್ಚಳವಾಗಿದೆ.

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 9,19,875 ಪುರುಷ ಮತದಾರರು, 8,70,976 ಮಹಿಳಾ ಮತದಾರರು ಸೇರಿದಂತೆ 233 ಇತರೆ ಮತದಾರರನ್ನೊಳಗೊಂಡು ಒಟ್ಟು 17,91,084 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.

ಶನಿವಾರ ನಡೆದ ಮತದಾನದಲ್ಲಿ 9,19,875 ಪುರುಷ ಮತದಾರರಲ್ಲಿ 6,50,787 ಮತದಾರರು, 8,70, 976 ಮಹಿಳಾ ಮತದಾರರಲ್ಲಿ 5,96,064 ಮತದಾರರು, 233 ಇತರೆ ಮತದಾರರಲ್ಲಿ ಎಂಟು ಮತದಾ ರರಷ್ಟೇ ಮತ ಚಲಾಯಿಸಿದ್ದು, ಒಟ್ಟು 12,46,859 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಆಯೋಗದ ಅಂಕಿ–ಅಂಶಗಳು ದೃಢೀಕರಿಸಿವೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ 2,05,694 ಮತದಾರರಲ್ಲಿ 1,37,814 ಮತದಾರರು ಮತ ಚಲಾಯಿಸಿದ್ದು, ಶೇ 67 ಮತದಾನ ವಾಗಿದೆ. 70866 ಪುರುಷರು, 66947 ಮಹಿಳೆಯರು ಸೇರಿದಂತೆ ಇತರೆ ಒಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ 2,08,625 ಮತದಾರರಲ್ಲಿ 1,38,232 ಮತದಾರರು ಮತ ಚಲಾಯಿಸಿದ್ದು, ಶೇ 66.26 ಮತದಾನ ವಾಗಿದೆ. 71753 ಪುರುಷರು, 66476 ಮಹಿಳೆಯರು ಸೇರಿದಂತೆ ಇತರೆ ಮತದಾರ ಪಟ್ಟಿಯಲ್ಲಿರುವ ಮೂವರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ 2,01,089 ಮತದಾರರಲ್ಲಿ 1,46,647 ಮತದಾರರು ಮತ ಚಲಾಯಿಸಿದ್ದು, ಶೇ 72.93 ಮತದಾನ ವಾಗಿದೆ. 76354 ಪುರುಷರು, 70292 ಮಹಿಳೆಯರು ಸೇರಿದಂತೆ ಇತರೆ ಮತದಾರರು ಒಬ್ಬರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ 2,11,555 ಮತದಾರರಲ್ಲಿ 1,71,094 ಮತದಾರರು ಮತ ಚಲಾಯಿಸಿದ್ದು, ಶೇ 80.27 ಮತದಾನ ವಾಗಿದೆ. 88700 ಪುರುಷರು, 82394 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದು, ಇತರೆ ಮತದಾರರು ಸಂಖ್ಯೆ 12 ಇದ್ದರೂ; ಯಾರೊಬ್ಬರೂ ಮತಗಟ್ಟೆಯತ್ತ ಸುಳಿದಿಲ್ಲ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ 2,47,240 ಮತದಾರರಲ್ಲಿ 1,51,498 ಮತದಾರರು ಮತ ಚಲಾಯಿಸಿದ್ದು, ಶೇ 61.28 ಮತದಾನ ವಾಗಿದೆ. 77532 ಪುರುಷರು, 73 964 ಮಹಿಳೆಯರು ಸೇರಿದಂತೆ ಇತರೆ ಮತದಾರರಲ್ಲಿ ಇಬ್ಬರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ 2,60,382 ಮತದಾರರಲ್ಲಿ 1,75,294 ಮತದಾರರು ಮತ ಚಲಾಯಿಸಿದ್ದು, ಶೇ 67.32 ಮತದಾನ ವಾಗಿದೆ. 92515 ಪುರುಷರು, 82778 ಮಹಿಳೆ ಸೇರಿದಂತೆ ಇತರೆ ಮತದಾರ ರಲ್ಲಿ ಒಬ್ಬರು ಮಾತ್ರ ತಮ್ಮ ಮತ ಹಾಕಿದ್ದಾರೆ.

ಇಂಡಿ ವಿಧಾನಸಭಾ ಕ್ಷೇತ್ರದ 2,31,797 ಮತದಾರರಲ್ಲಿ 1,67,136 ಮತದಾರರು ಮತ ಚಲಾಯಿಸಿದ್ದು, ಶೇ 72.10 ಮತದಾನವಾಗಿದೆ. 88103 ಪುರುಷರು, 79033 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದು, 24 ಇತರೆ ಮತದಾರರಿದ್ದರೂ, ಯಾರೊಬ್ಬರು ತಮ್ಮ ಹಕ್ಕು ಚಲಾಯಿಸಿಲ್ಲ.

ಸಿಂದಗಿ ವಿಧಾನಸಭಾ ಕ್ಷೇತ್ರದ 2,24,702 ಮತದಾರರಲ್ಲಿ 1,59,144 ಮತದಾರರು ಮತ ಚಲಾಯಿಸಿದ್ದು, ಶೇ 70.82 ಮತದಾನವಾಗಿದೆ. 84964 ಪುರುಷರು, 74180 ಮಹಿಳೆಯರು ಮತ ಹಾಕಿದ್ದಾರೆ. 28 ಇತರೆ ಮತದಾ ರರಿದ್ದರೂ, ಯಾರೊಬ್ಬರೂ ತಮ್ಮ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಿಲ್ಲ.

ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 80.87 ಮತದಾನವಾಗುವ ಮೂಲಕ ಅತ್ಯಂತ ಹೆಚ್ಚು ಮತದಾನವಾದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ 61.28 ಮತದಾನವಾಗಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಮತದಾ ನದ ಪ್ರಮಾಣ ಅಭ್ಯರ್ಥಿಗಳ ಗೆಲುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ರಾಜಕೀಯ ವಿಶ್ಲೇಷಣೆ ಮತದಾನದ ಶೇಕಡಾವಾರು ಪ್ರಕಟಗೊಂಡ ಬೆನ್ನಿಗೆ ನಡೆದಿದೆ.

ಮತದಾನ ಹೆಚ್ಚಳಕ್ಕೆ ಜಾಗೃತಿ ಕಾರಣ

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂಬ ಆಶಯದಿಂದ ಜಿಲ್ಲಾ ಸ್ವೀಪ್‌ ಸಮಿತಿ ಜಿಲ್ಲೆಯ 660 ಗ್ರಾಮಗಳಲ್ಲಿಯೂ ಪ್ರಚಾರಾಂದೋಲನ ಕೈಗೊಳ್ಳುವ ಮೂಲಕ ಮತದಾರರ ಮನವೊಲಿಸಿತ್ತು.

ಶೇ 100ರ ಮತದಾನದ ಗುರಿ ನಿಗದಿಪಡಿಸಿಕೊಂಡು, ಜಿಲ್ಲೆಯಲ್ಲಿರುವ 2098 ಬೂತ್‌ಗಳಲ್ಲೂ ಐವರ ತಂಡ ರಚಿಸಿತ್ತು. ಈ ತಂಡದಲ್ಲಿನ 10000ಕ್ಕೂ ಹೆಚ್ಚಿನ ಸಿಬ್ಬಂದಿ ಮೂಲಕ ಎಲ್ಲ ಗ್ರಾಮಗಳಲ್ಲಿನ 10 ಲಕ್ಷ ಕುಟುಂಬಗಳನ್ನು ತಲುಪಿ, ಮತದಾನದ ಮಹತ್ವ, ಇವಿಎಂ ವಿಶೇಷತೆ, ಮತಗಟ್ಟೆಯಲ್ಲಿ ಕಲ್ಪಿಸಿರುವ ಸೌಲಭ್ಯಗಳ ಮಾಹಿತಿ ಒಳಗೊಂಡ ಕರಪತ್ರ ವಿತರಿಸುವುದು ಸೇರಿದಂತೆ ಹಲವೆಡೆ ಜಾಗೃತಿ ಕಾರ್ಯಗಾರ ಆಯೋಜಿಸಲಾಗಿತ್ತು ಎಂದು ಸ್ವೀಪ್‌ ಸಮಿತಿ ಅಧ್ಯಕ್ಷ ಎಂ.ಸುಂದರೇಶಬಾಬು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.