ಭರದಿಂದ ಸಾಗಿರುವ ಎಡದಂಡೆ ಕಾಮಗಾರಿ

7
ಆಲಮಟ್ಟಿ: ರೈತರ ಜೀವನಾಡಿಯಾದ ಕಾಲುವೆ: ನೀತಿ ಸಂಹಿತೆಯಿಂದ ವಿಳಂಬ

ಭರದಿಂದ ಸಾಗಿರುವ ಎಡದಂಡೆ ಕಾಮಗಾರಿ

Published:
Updated:
ಭರದಿಂದ ಸಾಗಿರುವ ಎಡದಂಡೆ ಕಾಮಗಾರಿ

ಆಲಮಟ್ಟಿ: ಚುನಾವಣೆಯ ಕಾವು ಕ್ರಮೇಣ ಕಡಿಮೆಯಾಗಿದ್ದು, ಇತ್ತ ಕಳೆದ ವರ್ಷ ಅನುಮೋದನೆಗೊಂಡಿದ್ದ, ಜಲಾಶಯದ ಮೊಟ್ಟಮೊದಲ ನೀರಾವರಿ ಕಾಮಗಾರಿಯಾಗಿರುವ ಎಡದಂಡೆ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿ ಆರಂಭಗೊಂಡಿದೆ.

2003 ರಿಂದಲೇ ಕಾಲುವೆಗಳ ಜಾಲಕ್ಕೆ ನೀರು ಹರಿಯುವುದು ಆರಂಭಗೊಂಡಿತ್ತು. ಈ ಮುಖ್ಯ ಕಾಲುವೆಯು 67 ಕಿ.ಮೀ ಉದ್ದವಿದ್ದು, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕಿನ ಸುಮಾರು 22, 000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುತ್ತದೆ. ಈ ಕಾಲುವೆಯ ಅನೇಕ ಕಡೆ ಬೋಂಗಾ ಬಿದ್ದಿದ್ದು, ಆಧುನೀಕರಣ ಗೊಳಿಸಲು ₹ 112 ಕೋಟಿ ಕಾಮಗಾರಿಗೆ 2017ರ ಜುಲೈನಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಕಾಲುವೆಯ 12.5 ಕಿ.ಮೀ ನಲ್ಲಿ ಇದೇ ಕಾಲುವೆಯಲ್ಲಿನ ನೀರನ್ನು ಎರಡನೇ ಬಾರಿಗೆ ಹುಲ್ಲೂರು ಗ್ರಾಮದ ಬಳಿ ಎತ್ತಿ ಚಿಮ್ಮಲಗಿ ಏತ ನೀರಾವರಿ ಪೂರ್ವ ಹಾಗೂ ಪಶ್ಚಿಮ ಕಾಲುವೆಗೆ ನೀರು ಹರಿಸಲಾಗುತ್ತದೆ. ಅಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುತ್ತಿದೆ.

ಅದಕ್ಕಾಗಿ ಕಿ.ಮೀ 0 ರಿಂದ 12.5 ಕಿ.ಮೀ ವರೆಗಿನ ಕಾಲುವೆಯ ಪ್ರಮಾಣ ದೊಡ್ಡದಾಗಿದ್ದು, (ಸುಮಾರು 50 ಕ್ಯೂಮೆಕ್ಸ್ ನೀರು ಹರಿಯುವ ಸಾಮರ್ಥ್ಯ), ಅದರ ಮುಂದಿನ 60 ಕಿ.ಮೀ ವರೆಗಿನ ಕಾಲುವೆಗಳ ಜಾಲ ಚಿಕ್ಕದಾಗಿದ್ದು ಸುಮಾರು 12 ಕ್ಯುಮೆಕ್ಸ್‌ ನೀರು ಹರಿಯುವ ಸಾಮರ್ಥ್ಯ ಇದೆ.

ಕಾಮಗಾರಿ ಏನೇನು?: ಆಲಮಟ್ಟಿ ಎಡದಂಡೆ ಕಾಲುವೆಯ 0 ದಿಂದ 12.5 ಕಿ.ಮೀ ವರೆಗಿನ ಮುಖ್ಯ ಕಾಲುವೆಯ ಹಾಗೂ 12.5 ಕಿ.ಮೀ ದಿಂದ 60 ಕಿ.ಮೀ ಒಳಗೆ ನಾನಾ ಕಡೆ ಹದಗೆಟ್ಟಿರುವ ಮುಖ್ಯ ಕಾಲುವೆಯ ಸುಮಾರು 20 ಕಿ.ಮೀ ಸೇರಿ 32.5 ಕಿ.ಮೀ ಮುಖ್ಯ ಕಾಲುವೆಯ ಆಧುನೀಕರಣ, ಇನ್ನುಳಿದ ಅಗತ್ಯ ಇರುವೆಡೆ ದುರಸ್ತಿ, ಸಿಡಿ ನಿರ್ಮಾಣ, ಸೇವಾ ರಸ್ತೆ ನಿರ್ಮಾಣ ಕಾಮಗಾರಿಗೆ ₹ 65 ಕೋಟಿ ವೆಚ್ಚದಲ್ಲಿ ಆರಂಭಗೊಂಡಿದೆ.

ಆದರೆ 0 ದಿಂದ 29 ನೇ ವಿತರಣಾ ಕಾಲುವೆ ಮತ್ತು 80 ಕಿ.ಮೀ ಉದ್ದದ ತೂಬು ಕಾಲುವೆಗಳ ಸಂಪೂರ್ಣ ನವೀಕರಣ ಕಾರ್ಯಕ್ಕೆ ₹ 47 ಕೋಟಿಗೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಶೀಘ್ರ ಕರೆಯಲಾಗುವುದು, ಇನ್ನೂ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿಲ್ಲ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎಚ್‌.ನಾಯ್ಕೋಡಿ ತಿಳಿಸಿದರು.

ಗುಣಮಟ್ಟದ ಕಾಮಗಾರಿ ನಡೆಯಲಿ: ಭರದಿಂದ ಸಾಗಿರುವ ಆಧುನೀಕರಣ ಕಾಮಗಾರಿಯಲ್ಲಿ, ಕಾಲುವೆಗೆ ಮೊದಲಿದ್ದ ಸಿಮೆಂಟ್ ಕಾಂಕ್ರಿಟ್‌ನ ಲೈನಿಂಗ್‌ ಕಿತ್ತುಹಾಕಿ ಹೊಸದಾಗಿ ಕಾಂಕ್ರಿಟ್‌ ಲೈನಿಂಗ್‌ ನಿರ್ಮಿಸಲಾಗುತ್ತಿದೆ. ರೈತರ ಜೀವನಾಡಿಯಾಗಿರುವ ಈ ಕಾಮಗಾರಿ, ಬಹು ದಿನ ಬಾಳಿಕೆ ಬರಬೇಕಿದ್ದು, ಸಿಮೆಂಟ್‌ ಲೈನಿಂಗ್‌ಗೆ ಸಮರ್ಪಕ ಕ್ಯೂರಿಂಗ್, ಸಿಮೆಂಟ್‌ ಪ್ರಮಾಣ, ಲೈನಿಂಗ್ ಹಾಗೂ ಕಾಂಕ್ರಿಟ್‌ ವ್ಯತ್ಯಾಸವಾಗದಂತೆ ಗಮನಿಸಬೇಕು, ಅಧಿಕಾರಿಗಳು ನಿತ್ಯ ಇತ್ತ ಕಡೆ ಗಮನವಿಟ್ಟು, ಗುಣಮಟ್ಟದ ಕಾಮಗಾರಿಗೆ ಕ್ರಮ ವಹಿಸಬೇಕು ಎಂದು ರೈತ ಮುಖಂಡರಾದ ಜಿ.ಸಿ.ಮುತ್ತಲದಿನ್ನಿ, ಲಿಂಗರಾಜ ಆಲೂರ, ಬಸವರಾಜ ಕುಂಬಾರ, ಬಸವರಾಜ ದಂಡಿನ ಮೊದಲಾದವರು ಆಗ್ರಹಿಸಿದ್ದಾರೆ.

₹ 65 ಕೋಟಿ ಕಾಮಗಾರಿ

ಕಾಲುವೆಗೆ ನೀರು ಬಂದ್‌ ಇರುವಾಗಲೇ ಕಾಮಗಾರಿ ನಿರ್ವಹಿಸಬೇಕಿದ್ದು, ಸದ್ಯ ₨65 ಕೋಟಿ ವೆಚ್ಚದ ಮುಖ್ಯ ಕಾಲುವೆಗಳ ಜಾಲದ ಆಧುನೀಕರಣ ಕಾಮಗಾರಿಗೆ ಕಳೆದ ಮೂರು ತಿಂಗಳ ಹಿಂದೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಇನ್ನೂ ಉಪಕಾಲುವೆ, ಹೊಲಗಾಲುವೆಗಳ ಜಾಲದ ದುರಸ್ತಿ ಕಾಮಗಾರಿಯ ಟೆಂಡರ್‌ ಕರೆದು ಅಂತಿಮಗೊಳಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಬಂದಿತ್ತು.

**

ಕಾಲುವೆಗಳ ಜಾಲದ ಅಕ್ಕಪಕ್ಕದ ಜಮೀನಿನ ರೈತರು ಸ್ಥಳದಲ್ಲಿದ್ದು, ಕಾಲುವೆ ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ನಿಗಾ ವಹಿಸಬೇಕು

- ಜಿ.ಸಿ.ಮುತ್ತಲದಿನ್ನಿ, ರೈತ ಮುಖಂಡ 

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry