ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 65.85ರಷ್ಟು ಮತದಾನ

ನಾಳೆ ಮತ ಎಣಿಕೆ: ಕೋಣೆ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್
Last Updated 14 ಮೇ 2018, 9:31 IST
ಅಕ್ಷರ ಗಾತ್ರ

ಯಾದಗಿರಿ: ‘ವಿಧಾನಸಭೆ ಚುನಾವಣೆಗೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಮತಕ್ಷೇತ್ರಗಳಲ್ಲಿ ಸರಾಸರಿ ಶೇ 65.85ರಷ್ಟು ಮತದಾನ ಆಗಿದ್ದು, ಸುರಪುರ ಕ್ಷೇತ್ರದಲ್ಲಿ ಶೇ 71.20 ರಷ್ಟು ದಾಖಲೆ ಮತದಾನ ಆಗಿದೆ’ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

ನಗರದಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘2013ರ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಸರಾಸರಿ ಶೇ 64.92ರಷ್ಟು ಮತದಾನ ಆಗಿತ್ತು. ಹೋದ ಚುನಾವಣೆಗೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ 1.15ರಷ್ಟು ಹೆಚ್ಚು ಮತದಾನದ ಆಗಿದೆ. ಕ್ಷೇತ್ರವಾರು ಮತದಾನ ಕುರಿತು ಅಂಕಿಅಂಶ ಗಮನಿಸಿದರೆ ಹೋದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದಲ್ಲಿ ಶೇ 69.82ರಷ್ಟು ಮತದಾನ ಆಗಿತ್ತು. ಈ ಬಾರಿ ಶೇ 71.20 ರಷ್ಟು ಮತದಾನ ಆಗಿದೆ. ಅದೇ ರೀತಿಯಲ್ಲಿ ಶಹಾಪುರದಲ್ಲಿ 68.84, ಯಾದಗಿರಿಯಲ್ಲಿ 60.88, ಗುರಮಠಕಲ್‌ನಲ್ಲಿ 61.86ರಷ್ಟು ಮತದಾನ ಆಗಿದ್ದು, ಪ್ರತಿ ಕ್ಷೇತ್ರಗಳಲ್ಲಿ ಹೆಚ್ಚು ಮತದಾನ ಆಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ 9,82,363 ಅರ್ಹ ಮತದಾರರಲ್ಲಿ 4,91,707 ಮಂದಿ ಪುರುಷರು, 4,90,656 ಮಂದಿ ಮಹಿಳೆಯರು ಇದ್ದಾರೆ. ಈ ಪೈಕಿ ತಮ್ಮ ಹಕ್ಕು ಚಲಾಯಿಸಿದ ಒಟ್ಟು 6,46,904 ಮಂದಿ ಮತದಾರರಲ್ಲಿ 3,29,173 ಮಂದಿ ಪುರುಷರು, 3,17,731 ಮಹಿಳೆಯರು ಸೇರಿದ್ದಾರೆ’ ಎಂದು ತಿಳಿಸಿದರು.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,75,668 ಮತದಾರರ ಪೈಕಿ 1,96,248 ಮಂದಿ ಮತದಾರರು ಹಕ್ಕು ಚಲಾಯಿಸಿದ್ದಾರೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಶೇ 71.20ರಷ್ಟು ಮತದಾನವಾಗಿದೆ.

ಶಹಾಪುರದಲ್ಲಿ 2,25,798 ಮತದಾರರ ಪೈಕಿ 1,55,438 ಜನ ಮತ ಚಲಾಯಿಸಿದ್ದು, ಶೇ 68.48ರಷ್ಟು ಮತದಾನ ದಾಖಲಾಗಿದೆ. ಯಾದಗಿರಿ ಕ್ಷೇತ್ರದಲ್ಲಿ 2,35,682 ಮತದಾರರಲ್ಲಿ 1,43,482 ಮತದಾರರು ತಮ್ಮ ಹಕ್ಕು ಚಲಾಯಿ ಸಿದ್ದಾರೆ. ಗುರುಮಠಕಲ್ ಕ್ಷೇತ್ರದ ಒಟ್ಟು 2,45,215 ಮತದಾರರಲ್ಲಿ 1,51,700 ಜನ ಮತದಾನ ಮಾಡಿದ್ದು, ಶೇ 61.86ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜೆ. ಮಂಜುನಾಥ್ ವಿವರಿಸಿದರು.

ಬಿಗಿ ಭದ್ರತೆಯಲ್ಲಿ ಮತ ಎಣಿಕೆ ನಾಳೆ

ನಗರದಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಮೇ 15ರಂದು ಮತ ಎಣಿಕೆ ನಡೆಯಲಿದ್ದು, ಭಾನುವಾರ ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜುನಾಥ್ ಮತ ಎಣಿಕೆ ಕೇಂದ್ರ ಪರಿಶೀಲಿಸಿದರು.

ಗುರುಮಠಕಲ್‌ನಲ್ಲಿ 12, ಯಾದಗಿರಿಯಲ್ಲಿ 10, ಶಹಾಪುರದಲ್ಲಿ 9, ಸುರಪುರದಲ್ಲಿ 9 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು. ಭದ್ರತಾ ಕೋಣೆಯಲ್ಲಿ ಒಟ್ಟು 40 ಮಂದಿ ಅಭ್ಯರ್ಥಿಗಳ ಭವಿಷ್ಯ ಅಡಗಿದೆ.

ಸೋಲು–ಗೆಲುವಿನ ಲೆಕ್ಕಾಚಾರ ಮತದಾನದ ನಂತರ ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದಾಗಿ ಜಿಲೆಯಲ್ಲಿ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕೆಲ ಕಾರ್ಯಕರ್ತರ ಮಧ್ಯೆ ಪಕ್ಷದ ಅಭ್ಯರ್ಥಿಯ ಮೇಲೆ ಜೂಜು ಕೂಡ ಕಟ್ಟುತ್ತಿರುವ ಬಗ್ಗೆ ಸುದ್ದಿ ಹರಡಿದೆ. ಇದರಲ್ಲಿ ವೃತ್ತಿಪರ ಜೂಜುಕೋರರು ಇದ್ದಾರೆ ಎನ್ನಲಾಗಿದೆ.

ಶಹಾಪುರ ಮತ್ತು ಸುರಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿಯ ನಡೆದಿದೆ. ಗೆಲುವು ಯಾರಿಗೆ ಒಲಿಯಲಿದೆ ಎಂಬುದು ಕೂಡ ತೀವ್ರ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವು–ಸೋಲಿನ ಕುರಿತು ತೆರೆಮರೆಯಲ್ಲೇ ಜೂಜು ಭರಾಟೆ ನಡೆದಿದೆ ಎನ್ನಲಾಗುತ್ತಿದೆ.

**
ನಿರೀಕ್ಷೆಯಂತೆ ಗರಿಷ್ಠ ಮತದಾನ ಆಗಿದೆ. ಮತದಾನದ ಮಹತ್ವ ಮತ್ತು ಅರಿವನ್ನು ಸಾಮಾನ್ಯ ಜನರಲ್ಲಿ ಮೂಡಿಸಿದ ಪರಿಣಾಮ ಮತದಾನ ಹೆಚ್ಚಾಗಿದೆ
- ಜೆ.ಮಂಜುನಾಥ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT