ಸ್ವಪಕ್ಷೀಯರಿಂದಲೇ ಆಕ್ರೋಶ

7
ಮತದಾನದಿಂದ ದೂರ ಉಳಿದ ರಮ್ಯಾ

ಸ್ವಪಕ್ಷೀಯರಿಂದಲೇ ಆಕ್ರೋಶ

Published:
Updated:
ಸ್ವಪಕ್ಷೀಯರಿಂದಲೇ ಆಕ್ರೋಶ

ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಮತದಾನದಿಂದ ಹಿಂದೆ ಸರಿದ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ಕಾಂಗ್ರೆಸ್‌ ಪಕ್ಷದ ಮುಖಂಡರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿ ಇರುವ ಹಾಗೂ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಹಕ್ಕು ಚಲಾವಣೆ ಮಾಡಬೇಕಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವ ಜವಾಬ್ದಾರಿಗಳ ಬಗ್ಗೆ ಮಾತನಾಡುವ ಅವರು ತಮ್ಮ ಮೂಲಭೂತ ಕರ್ತವ್ಯವನ್ನೇ ಮರೆತಿದ್ದು ಸರಿಯಲ್ಲ. ಇನ್ನೊಬ್ಬರಿಗೆ ಹೇಳುವ ಯಾವುದೇ ನೈತಿಕತೆಯನ್ನು ರಮ್ಯಾ ಉಳಿಸಿಕೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಟೀಕೆ ಮಾಡುತ್ತಿದ್ದು ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ದೂರಿದ್ದಾರೆ.

‘ರಮ್ಯಾ ಅವರು ರಾಜಕಾರಣವನ್ನು ಚಲನಚಿತ್ರ ಎಂದು ಭಾವಿಸಿದಂತಿದೆ. ಜವಾಬ್ದಾರಿ ಇದ್ದರೆ ಅವರು ಮಂಡ್ಯಕ್ಕೆ ಬಂದು ಮತದಾನ ಮಾಡಬೇಕಾಗಿತ್ತು. ಅವರ ವಿಚಾರವಾಗಿ ಜಿಲ್ಲೆಯ ಎಲ್ಲಾ ಮುಖಂಡರು ಅವಮಾನ ಅನುಭವಿಸಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಿದ್ದಾಗ ನಾವೆಲ್ಲರೂ ಅವರ ಪರವಾಗಿ ಕೆಲಸ ಮಾಡಿದ್ದೆವು. ಅವರಿಗೆ ಮಂಡ್ಯದ ಮೇಲೆ ಪ್ರೀತಿ ಇದ್ದಿದ್ದರೆ ಅವರು ಬಂದು ಮತದಾನ ಮಾಡುತ್ತಿದ್ದರು. ಅವರಿಗೆ ಮಂಡ್ಯದ ಮೇಲೆ ಕಾಳಜಿ ಇಲ್ಲ’ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸತೀಶ್‌ಚಂದ್ರ ಆರೋಪಿಸಿದರು.

‘ಅವರಿಗೆ ಏನೇ ಕಾರಣಗಳಿದ್ದರೂ, ತುರ್ತು ಕೆಲಸಗಳು ಇದ್ದರೂ ಮತದಾನ ಕರ್ತವ್ಯಕ್ಕಿಂತ ಯಾವುದೂ ದೊಡ್ಡದಲ್ಲ. ಪಕ್ಷದ ಹಿತದೃಷ್ಟಿಯಿಂದಲಾದರೂ ಅವರು ಮತದಾನ ಮಾಡಬೇಕಾಗಿತ್ತು. ಮಂಡ್ಯ ಸಂಸದರಾಗಿದ್ದ ಅವರು ಮತದಾನದ ಕರ್ತವ್ಯ ಪಾಲನೆ ಮಾಡದೇ ಇರುವುದು ತಪ್ಪು‌’ ಎಂದು ಎಪಿಎಂಸಿ ಅಧ್ಯಕ್ಷೆ ಪಲ್ಲವಿ ಹೇಳಿದರು.

‘ರಮ್ಯಾ ಅವರು ಕ್ಷೇತ್ರಕ್ಕೆ ಬಂದು ಮತದಾನ ಮಾಡಿದ್ದರೆ ಶೋಭೆ ಬರುತ್ತಿತ್ತು. ಅವರು ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನಲ್ಲಿ ಪ್ರಮುಖ ಹುದ್ದೆ ನಿರ್ವಹಣೆ ಮಾಡುತ್ತಿದ್ದಾರೆ. ಅವರು ರಾಷ್ಟ್ರವ್ಯಾಪಿ ರಾಜಕಾರಣ ಮಾಡುತ್ತಿದ್ದಾರೆ. ಅಂತಹ ಸ್ಥಾನದಲ್ಲಿ ಇರುವವರು ಅತ್ಯಂತ ಪ್ರಮುಖ ಮೂಲಭೂತ ಹಕ್ಕು ಚಲಾವಣೆಯಿಂದ ಹಿಂದೆ ಸರಿದದ್ದನ್ನು ಒಪ್ಪತಕ್ಕದ್ದಲ್ಲ. ನಮ್ಮ ಜಿಲ್ಲೆಯ ಸಂಸದರಾಗಿ ಕಾರ್ಯ ನಿರ್ವಹಿಸಿರುವ ರಮ್ಯಾ ಅವರು ಮತದಾನ ಮಾಡುತ್ತಾರೆ ಎಂಬ ವಿಶ್ವಾಸ ಇತ್ತು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry