ಶನಿವಾರ, ಫೆಬ್ರವರಿ 27, 2021
28 °C

ಭತ್ತಕ್ಕೆ ಬೇಕು ಎಲೆ ಗೊಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭತ್ತಕ್ಕೆ ಬೇಕು ಎಲೆ ಗೊಬ್ಬರ

–ಡಾ. ಉಲ್ಲಾಸ ಎಂ. ವೈ. / ಪ್ರದೀಪ್ ಎಸ್.

**

ರಾಜ್ಯದ ಸುಮಾರು 10.6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಪ್ರಮುಖ ಆಹಾರ ಬೆಳೆಯಾಗಿದ್ದರೂ ಆಧುನಿಕ ಕೃಷಿ ಪದ್ಧತಿಯಲ್ಲಿ ಭತ್ತದ ಉತ್ಪಾದಕತೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ದುಸ್ತರವಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ರೈತರು ಬಳಸುತ್ತಿರುವ ಗೊಬ್ಬರ, ಕೀಟನಾಶಕಗಳ ಬಳಕೆ ಪ್ರಮಾಣ ಹೆಚ್ಚಾಗಿ, ಕೃಷಿಗೆ ಆಗುವ ವೆಚ್ಚ ಹೆಚ್ಚಾಗುತ್ತಿದೆಯೇ ಹೊರತು ರೈತರಿಗೆ ಆರ್ಥಿಕ ಲಾಭ ದೊರೆಯುತ್ತಿಲ್ಲ. ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳ ಕೊರತೆಯೇ ಉತ್ಪಾದಕತೆಯಲ್ಲಿ ಸ್ಥಿರತೆ ಸಾಧಿಸಲು ಆಗದಿರುವುದಕ್ಕೆ ಕಾರಣ.

ಭತ್ತ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿರುವ ಕಾರಣ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಫಲವತ್ತಾದ ಮಣ್ಣೆಂದರೆ ಬೆಳೆಗಳಿಗೆ ಬೇಕಾಗುವ 17 ಪೋಷಕಾಂಶಗಳನ್ನು ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ ಪೂರೈಸುವಂತಿರಬೇಕು.

ಆ ಪೋಷಕಾಂಶಗಳು ಯಾವೆಂದರೆ: ಇಂಗಾಲ, ಜಲಜನಕ, ಆಮ್ಲಜನಕ, ಸಾರಜನಕ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಗಂಧಕ, ಕಬ್ಬಿಣ , ಮ್ಯಾಂಗನೀಸ್‌, ತಾಮ್ರ, ಮಾಲಿಬ್‌ಡೆನಮ್‌, ಸತು, ಬೋರಾನ್, ಕೊಬಾಲ್ಟ್ ಮತ್ತು ಕ್ಲೋರಿನ್.

ಸಸ್ಯಗಳು ಇಂಗಾಲ, ಜಲಜನಕ ಮತ್ತು ಆಮ್ಲಜನಕವನ್ನು ಹೊರತುಪಡಿಸಿ ಮಿಕ್ಕೆಲ್ಲ 14 ಪೋಷಕಾಂಶಗಳನ್ನು ಮಣ್ಣಿನಿಂದಲೇ ಪಡೆಯಬೇಕು. ಇವುಗಳೆಲ್ಲದರ ಮೂಲ ಮಣ್ಣಿನಲ್ಲಿರುವ ಪೋಷಕಾಂಶಗಳು ಮತ್ತು ಸಾವಯವ ವಸ್ತುಗಳು. ಪೋಷಕಾಂಶವು ಸಸ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಕಾಗಿರಲಿ ಇಲ್ಲವೇ ಅತ್ಯಲ್ಪ ಪ್ರಮಾಣದಲ್ಲಿ ಅವಶ್ಯಕವಿರಲಿ, ಸಸ್ಯದ ಸರಿಯಾದ ಬೆಳವಣಿಗೆ ಆಗಬೇಕಾದರೆ ಎಲ್ಲಾ 17 ಪೋಷಕಾಂಶಗಳೂ ಬೇಕೇಬೇಕು.

ಆದರೆ ಇತ್ತೀಚಿನ ದಿನಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಇತಿ ಮಿತಿಗಳಿಲ್ಲದೆ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಇವುಗಳನ್ನು ಮಾತ್ರ ಬಳಸುತ್ತಿರುವುದರಿಂದ ಪೋಷಕಾಂಶ ಲಭ್ಯತೆಯಲ್ಲಿ ಏರು ಪೇರಾಗಿದೆ.

ಸೂಕ್ಷ್ಮಾಣು ಜೀವಿಗಳ ಆಹಾರವಾಗಿ, ಮಣ್ಣಿನ ಪೋಷಕಾಂಶ ಹಾಗೂ ನೀರು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ವೃದ್ಧಿಸುವ ಗುಣ ಹೊಂದಿರುವ ಸಾವಯವ ಗೊಬ್ಬರಗಳ ಬಳಕೆಯನ್ನು ರೈತರು ಕಡಿಮೆ ಮಾಡಿರುವ ಕಾರಣ ಪರಿಸ್ಥಿತಿ ಇನ್ನೂ ಕ್ಲಿಷ್ಟಕರವಾಗಿದೆ. ಕೊಟ್ಟಿಗೆ ಗೊಬ್ಬರದ ಲಭ್ಯತೆ ಕಡಮೆ ಆಗಿರುವುದರಿಂದ ಪರ್ಯಾಯವಾಗಿ ಹಸಿರೆಲೆ ಗೊಬ್ಬರವನ್ನು ಬಳಸಬಹುದಾಗಿದೆ.

ಹಸಿರೆಲೆ ಗೊಬ್ಬರದ ಬಳಕೆಯು ಭತ್ತದ ಬೆಳೆಗೆ ಸೂಕ್ತವಾಗಿದ್ದು ನಾಟಿಗೆ 45 ದಿನ ಮುಂಚಿತವಾಗಿ ಭೂಮಿಯನ್ನು ಚೆನ್ನಾಗಿ ಹದಗೊಳಿಸಿ ನೀರಿನ ಲಭ್ಯತೆಯನ್ನು ಖಾತರಿಪಡಿಸಿಕೊಂಡು ಹಸಿರೆಲೆ ಸಸಿಗಳನ್ನು ಬಿತ್ತನೆ ಮಾಡಬಹುದಾಗಿದೆ. ಹಸಿರೆಲೆ ಬೆಳೆಗಳ ಬಿತ್ತನೆಗೆ ಮುನ್ನ ಚೆನ್ನಾಗಿ ಕಳೆತ ಕೊಟ್ಟಿಗೆ ಗೊಬ್ಬರವನ್ನು (ಭತ್ತಕ್ಕೆ ಶಿಫಾರಸ್ಸು ಮಾಡಿದ ಪ್ರಮಾಣ ಪ್ರತಿ ಹೆಕ್ಟೇರ್‌ಗೆ 7.5 ಟನ್) ಹಾಗೂ ಭತ್ತದ ಬೆಳೆಗೆ ಶಿಫಾರಸ್ಸು ಮಾಡಿದ ರಂಜಕದ ಪ್ರಮಾಣವನ್ನು ಶಿಲಾರಂಜಕದ ರೂಪದಲ್ಲಿ ಮಣ್ಣಿಗೆ ಸೇರಿಸಬೇಕು.

ತದನಂತರ ಪ್ರತಿ ಹೆಕ್ಟೇರ್‌ಗೆ ಸುಮಾರು 30 ಕೆ.ಜಿ ಸೆಣಬು/ಡಯಂಚ ಬೀಜವನ್ನು ರೈಜೋಬಿಯಂ ಮತ್ತು ರಂಜಕ ಕರಗಿಸುವ ಅಣುಜೀವಿಗೊಬ್ಬರದಿಂದ ಉಪಚರಿಸಿ ಹೊಲದಲ್ಲಿ ಚೆಲ್ಲಿ ಮಣ್ಣು ಮುಚ್ಚಬೇಕು (ಅಧಿಕ ನೀರು ನಿಲ್ಲುವ ಪ್ರದೇಶವಾದರೆ ಡಯಂಚ ಸೂಕ್ತ).

ಹಸಿರೆಲೆಗಳ ಬಿತ್ತನೆ ಸಮಯದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದರಿಂದ ಹಸಿರೆಲೆ ಗಿಡಗಳಿಗೆ ಅಧಿಕ ಪೋಷಕಾಂಶ ದೊರೆತು ಹಸಿರೆಲೆ ಉತ್ಪಾದನೆ ಅಧಿಕವಾಗುತ್ತದೆ. ಹಸಿರೆಲೆ ಇಳುವರಿ ಅಧಿಕವಾದರೆ ಭತ್ತದ ಬೆಳೆಗೆ ಪೋಷಕಾಂಶಗಳ ಲಭ್ಯತೆ ಹೆಚ್ಚಾಗಿ ಭತ್ತದ ಇಳುವರಿಯೂ ವೃದ್ಧಿಸುತ್ತದೆ.

ಭೂಮಿಗೆ ಶಿಲಾರಂಜಕ ಗೊಬ್ಬರ ಸೇರಿಸುವುದರಿಂದ ದ್ವಿದಳ ವರ್ಗಕ್ಕೆ ಸೇರಿದ ಹಸಿರು ಗೊಬ್ಬರದ ಗಿಡಗಳ ಬೇರುಗಳಲ್ಲಿ ಗಂಟುಗಳು ವೃದ್ಧಿಸಿ, ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವ ಪ್ರಮಾಣ ಹೆಚ್ಚಾಗುತ್ತದೆ.

ಹಸಿರೆಲೆ ಬೆಳೆಯು 35 ರಿಂದ 45 ದಿನಗಳಲ್ಲಿ ಹೂಬಿಡುವ ಹಂತ ತಲುಪುತ್ತದೆ. ಸಕಾಲದಲ್ಲಿ ಅಂದರೆ ಹೂ ಬಿಡುವ ಹಂತದಲ್ಲಿ ಗಿಡಗಳನ್ನು ಭೂಮಿಗೆ ಸೇರಿಸಬೇಕು, ಮುಂಚಿತವಾಗಿ ಕತ್ತರಿಸಿದರೆ ಸೊಪ್ಪಿನ ಇಳುವರಿ ಕಡಿಮೆಯಾಗುತ್ತದೆ, ತಡ ಮಾಡಿ ಕತ್ತರಿಸಿದರೆ ಗಿಡಗಳು ಬಲಿತು ನಾರಿನಂಶ ಹೆಚ್ಚಾಗಿ ಭೂಮಿಯಲ್ಲಿ ಸುಲಭವಾಗಿ ಕಳಿಯುವುದಿಲ್ಲ.

ಒಂದು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 20 ಟನ್‌ನಷ್ಟು ಹಸಿರೆಲೆ ಗೊಬ್ಬರವನ್ನು ಪಡೆಯಬಹುದಾಗಿದೆ. ಹೂ ಬಿಡುವ ಹಂತದಲ್ಲಿ ಬೆಳೆದು ನಿಂತ ಸುಮಾರು 20 ಟನ್‌ನಷ್ಟು ಹಸಿರೆಲೆ ಗೊಬ್ಬರವನ್ನು ಉಳುಮೆ ಮಾಡುವ ಮೂಲಕ ಮಣ್ಣಿಗೆ ಸೇರಿಸುವುದರಿಂದ 50ರಿಂದ 70 ಕಿ. ಗ್ರಾಂ ಸಾರಜನಕವನ್ನು ಹಾಗೂ ಇನ್ನುಳಿದ ಎಲ್ಲ ಅಗತ್ಯ ಪೋಷಕಾಂಶಗಳನ್ನು ಭತ್ತದ ಬೆಳೆಗೆ ಒದಗಿಸಿದಂತಾಗುತ್ತದೆ.

ಹಸಿರೆಲೆ ಗೊಬ್ಬರಗಳಾದ ಡಯಂಚ ಹಾಗೂ ಸೆಣಬಿನ ಗಿಡಗಳು, ಆಳಕ್ಕೆ ತಮ್ಮ ಬೇರನ್ನು ಹರಿಸುವುದರಿಂದ ಭೂಮಿಯ ಆಳದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಹೀಗೆ ಭೂಮಿಯ ಆಳದಿಂದ ಹೀರಿಕೊಂಡ ಪೋಷಕಾಂಶವು ಗಿಡಗಳನ್ನು ಮಣ್ಣಿಗೆ ಸೇರಿಸಿದಾಗ ಭೂಮಿಯ ಮೇಲ್ಪದರಕ್ಕೆ ಸೇರುವುದರಿಂದ, ಭೂಮಿಯ ಮೇಲ್ಪದರದಲ್ಲಿ ಬೇರುಗಳನ್ನು ಹೊಂದಿರುವ ಭತ್ತಕ್ಕೆ ಪೋಷಕಾಂಶಗಳನ್ನು ಹೀರಲು ಸಹಕಾರಿಯಾಗುತ್ತದೆ.

ಹಸಿರೆಲೆ ಗೊಬ್ಬರ ಬೆಳೆದು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಸಾವಯವ ಅಂಶವು ಅಧಿಕವಾಗುತ್ತದೆ, ಈ ಸಾವಯವ ಅಂಶವು ಸೂಕ್ಷ್ಮಣು ಜೀವಿಗಳಿಗೆ ಆಹಾರವಾಗಿದ್ದು ಮಣ್ಣಿನಲ್ಲಿ ಸೂಕ್ಷ್ಮಣು ಜೀವಿಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ.

30-40 ದಿನಗಳವರೆಗೆ ಒಂದು ಎಕರೆ ಜಮೀನಿನಲ್ಲಿ ಬೆಳೆದ ಹಸಿರೆಲೆ ಗೊಬ್ಬರಗಳಾದ ಸೆಣಬು ಹಾಗೂ ಡಯಂಚವನ್ನು ಮಣ್ಣಿಗೆ ಸೇರಿಸುವುದರಿಂದ ಸುಮಾರು 5-10 ಟನ್‌ನಷ್ಟು ಸಾವಯವ ಪದಾರ್ಥವನ್ನು ಮಣ್ಣಿಗೆ ಒದಗಿಸಿದಂತಾಗುತ್ತದೆ.

ಹಸಿರಲೆ ಗೊಬ್ಬರದ ವಿವಿಧ ಸಸ್ಯಭಾಗಗಳ ಕಳಿಯುವಿಕೆ ಸಮಯವು ಬೇರೆ ಬೇರೆಯಾಗಿರುವುದರಿಂದ ಬೆಳೆಗೆ ವಿವಿಧ ಹಂತಗಳಲ್ಲಿ ಸಮನವಾಗಿ ಪೋಷಕಾಂಶಗಳನ್ನು ಒದಗಿಸಿದಂತಾಗುತ್ತದೆ.

ಮರಳು ಮಿಶ್ರಿತ ಮಣ್ಣುಗಳಲ್ಲಿ ಹಸಿರೆಲೆ ಗೊಬ್ಬರವನ್ನು ಬಳಸುವುದರಿಂದ ಪೋಷಕಾಂಶಗಳು ಬಸಿದು ಹೋಗುವುದನ್ನು ತಡೆಗಟ್ಟಬಹುದಾಗಿದೆ.

ಹಸಿರೆಲೆ ಗಿಡಗಳು ದ್ವಿದಳ ಜಾತಿಗೆ ಸೇರಿದವುಗಳಾದ್ದರಿಂದ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಹಸಿರೆಲೆ ಗೊಬ್ಬರದಿಂದ ಮಣ್ಣಿನ ಸವಕಳಿ ಕಡಿಮೆಮಾಡುವುದರ ಜೊತೆಗೆ ಕಳೆಗಳನ್ನು ನಿಯಂತ್ರಿಸಬಹುದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.