ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಏಡಿ, ಕರುಂ ದದೀಮ್‌!

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಕೋಲಾರ ಜಿಲ್ಲೆಯ ಕೆರೆಗಳಲ್ಲಿ ಗಡಿಗೆ, ಸನಿಕೆ ಹಿಡಿದು ಸುತ್ತಾಡುವವರ ಸಂಖ್ಯೆ ಹೆಚ್ಚಿದೆ. ಇವರು ಏಡಿ ಹಿಡಿಯಲು ಹೊರಟವರು. ನೀರಿನ ಅಂಚಲ್ಲಿ ಬಿಲ ತೋಡಿ ವಾಸಿಸುವ ಏಡಿಗಳನ್ನು ಸನಿಕೆಯಿಂದ ಅಗೆದು, ಹಿಡಿದು ಗಡಿಯಲ್ಲಿ ಹಾಕಿ ಮನೆಗೆ ಕೊಂಡೊಯ್ಯುತ್ತಾರೆ.

ಹೌದು, ಈ ಬಾರಿ ಚೆನ್ನಾಗಿ ಮಳೆಯಾದ ಪರಿಣಾಮವಾಗಿ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರಿದೆ. ಸುಮಾರು ಎರಡು ದಶಕಗಳಿಂದ ನಿಂತಿದ್ದ ಏಡಿ ಹಿಡಿಯುವ ಕಾಯಕ ಮತ್ತೆ ಪ್ರಾರಂಭವಾಗಿದೆ. ಏಡಿ, ಗ್ರಾಮೀಣ ಪ್ರದೇಶದ ಮಾಂಸಾಹಾರಿಗಳಿಗೆ ಪ್ರಿಯವಾದ ಆಹಾರ. ಕೆರೆ ಏಡಿಯ ರುಚಿಯನ್ನು ಬಲ್ಲವರೇ ಬಲ್ಲರು. ಈ ಕಾಲದಲ್ಲಿ ಏಡಿಗಳಲ್ಲಿ ಕೊಬ್ಬು ಕಟ್ಟಿರುತ್ತದೆ. ಅಂಥ ಏಡಿ ಹೆಚ್ಚು ರುಚಿಕರ ಎಂಬುದು ಏಡಿ ಪ್ರಿಯರ ಅನುಭವದ ಮಾತು.

ಭೋವಿ ಜನಾಂಗದವರಿಗೆ ಏಡಿಯೆಂದರೆ ಪಂಚಪ್ರಾಣ. ಹಾಗೆಂದ ಮಾತ್ರಕ್ಕೆ ಅವರು ಮಾತ್ರ ಏಡಿ ಹಿಡಿಯುವುದಿಲ್ಲ. ಇತರ ಸಮುದಾಯದ ಜನರೂ ಹಿಡಿದು ತಿನ್ನುತ್ತಾರೆ. ಹಿಡಿದು ತಂದ ಏಡಿಯನ್ನು ಚೆನ್ನಾಗಿ ತೊಳೆದು, ಚಿಪ್ಪು ತೆಗೆದು, ಸಂಸ್ಕರಿಸಿ ತುಂಡು ಮಾಡಿ, ಸೋರೆಕಾಯಿ, ಅವರೆಕಾಳಿನೊಂದಿಗೆ ಸಾರು ಮಾಡುವುದು ರೂಢಿ. ಏಡಿ ಬೇಯುತ್ತಿದ್ದರೆ ಘಮಲು ಬೀದಿಗೂ ತೇಲಿ ಬರುತ್ತದೆ. ಬಿಸಿ ಮುದ್ದೆ, ಏಡಿ ಸಾರು ಇದ್ದರೆ ಇನ್ನೂ ನಾಲ್ಕು ತುತ್ತು ಹೆಚ್ಚಾಗಿಯೇ ಹೊಟ್ಟೆ ಸೇರುತ್ತದೆ.

‌‌ಸಮುದ್ರ ಏಡಿಗಿಂತ ಕೆರೆ ಏಡಿಯ ರುಚಿ ಹೆಚ್ಚು ಎಂದು ಹೇಳಲಾಗುತ್ತದೆ. ಸಮುದ್ರ ಏಡಿಗೆ ಆರ್ಥಿಕ ಮೌಲ್ಯ ಇದೆ. ಕೆಲವು ಮಾಂಸಾಹಾರ ಹೋಟೆಲ್‌ಗಳಲ್ಲಿ ಸಮುದ್ರ ಏಡಿಯಿಂದ ತಯಾರಿಸಿದ ತಿಂಡಿಗಳು ಸಿಗುತ್ತವೆ. ಬೆಲೆ ಮಾತ್ರ ಹೆಚ್ಚು. ಆದರೆ ಕೆರೆ ಏಡಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬೇಕಾದವರು ಕೆರೆಗೆ ಹೋಗಬೇಕು ಅಥವಾ ಬೇರೆಯವರಿಗೆ ಹೇಳಿ ಹಿಡಿಸಬೇಕು.

ಹಲವು ರೀತಿಯಲ್ಲಿ ಏಡಿಗಳನ್ನು ಹಿಡಿಯುತ್ತಾರೆ. ಕೆರೆ, ಕುಂಟೆಗಳಲ್ಲಿ ಏಡಿಗಳ ಸಂಖ್ಯೆ ಅಧಿಕವಾಗಿದ್ದರೆ, ಕೈಯಲ್ಲೇ ತಡಕಾಡಿ ಹಿಡಿದು ಗಡಿಗೆಗೆ ಸೇರಿಸುತ್ತಾರೆ. ಮೀನು ಹಿಡಿಯುವಾಗ ಬಲೆಗೆ ಹಾಗೂ ಕೊಡಮೆಗೆ ಬೀಳುವ ಏಡಿಗಳನ್ನು ಪ್ರತ್ಯೇಕಿಸಿ ಪಡೆಯುತ್ತಾರೆ. ಸನಿಕೆಯಿಂದ ಬಿಲ ಅಗೆದು ಏಡಿ ಹಿಡಿಯುವುದು ನಿಜಕ್ಕೂ ಕಷ್ಟದ ಕೆಲಸ. ಆದರೂ ಅದರ ರುಚಿಗೆ ಮಾರುಹೋದ ಮಂದಿ ಕಷ್ಟ ಸಹಿಸಿ ಹಿಡಿಯುತ್ತಾರೆ. ನೀರಿನ ಅಂಚಲ್ಲಿ ಏಡಿ ಬಿಲ ಅಗೆದ ಕುರುಹುಗಳು ಒತ್ತಾಗಿ ಕಾಣುತ್ತವೆ.

ಮೊದಲು ಮಣ್ಣಿನ ಮುದ್ರೆ ಇರುವ ಬಿಲಗಳನ್ನು ಗುರುತಿಸಬೇಕು. ಏಡಿಗೆ ಪೆಟ್ಟಾಗದಂತೆ ಅಗೆದು ತೆಗೆಯಬೇಕು. ಏಡಿ ಹಿಡಿಯುವಾಗ ಕತ್ತರಿಯಂಥ ಕೊಂಡಿಗಳಿಂದ ಬೆರಳುಗಳನ್ನು ಕಚ್ಚುವುದು ಸಾಮಾನ್ಯ. ಕೆಲವು ಸಲ ಕಚ್ಚಿದ ಕಡೆ ರಕ್ತ ಚಿಮ್ಮುವುದುಂಟು. ನೋವನ್ನು ಅನುಭವಿಸುತ್ತಲೇ ಹಿಡಿಯಬೇಕು. ಅನುಭವ ಇಲ್ಲದೆ ಏಡಿ ಹಿಡಿಯಲು ಕೆರೆಗೆ ಹೋದವರು, ಏಡಿ ಹಿಡಿಯುವ ಧಾವಂತದಲ್ಲಿ ಸಿಕ್ಕಿದ ಬಿಲಕ್ಕೆ ಕೈಹಾಕಿ ನೀರು ಹಾವು ಕಡಿತಕ್ಕೆ ಒಳಗಾದ ಉದಾಹರಣೆಗಳೂ ಇವೆ. ಆಳದ ಅರಿವಿಲ್ಲದೆ ನೀರಿಗೆ ಬಿದ್ದು ಸಮಸ್ಯೆ ಎದುರಿಸಿದ ವ್ಯಕ್ತಿಗಳಿಗೂ ಕೊರತೆಯಿಲ್ಲ.

ಏಡಿ ಪುಷ್ಟಿದಾಯಕ ಆಹಾರ. ಏಡಿಗಳನ್ನು ಹಿಡಿದು ತಂದು, ಚೆನ್ನಾಗಿ ತೊಳೆದು ಒರಳಿಗೆ ಹಾಕಿ, ಒನಕೆ ಬಡಿಯಿಂದ ಜಜ್ಜಿ ರಸ ತೆಗೆಯುತ್ತಾರೆ. ಹಾಗೆ ತೆಗೆದ ರಸಕ್ಕೆ ಮಸಾಲೆ, ಒಗ್ಗರಣೆ ಹಾಕಿ ಅನ್ನದೊಂದಿಗೆ ತಿನ್ನುತ್ತಾರೆ. ಇಂಥ ರಸವನ್ನು ಗ್ರಾಮೀಣ ಪ್ರದೇಶದಲ್ಲಿ ಬಾಣಂತಿಯರಿಗೆ ಕೊಡುವುದು ವಾಡಿಕೆ. ಏಡಿ ರಸ ಸೇವನೆಯಿಂದ ಬಾಣಂತಿಯರಲ್ಲಿ ಹಾಲಿನ ಉತ್ಪಾದನೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

(ಬಯಲು ಸೀಮೆಯ ಏಡಿ)

ಕೆರೆ, ಕುಂಟೆಗಳಲ್ಲಿ ಏಡಿಗಳನ್ನು ಹಿಡಿದು ಬೆಂಕಿಗೆ ಹಾಕಿ ಸುಟ್ಟು ತಿನ್ನುವವರೂ ಇದ್ದಾರೆ. ಸಾಮಾನ್ಯವಾಗಿ ದನಗಾಹಿಗಳು ಹೀಗೆ ಮಾಡುತ್ತಾರೆ. ದನಗಳನ್ನು ಕೆರೆಯಲ್ಲಿ ಮೇಯಲು ಬಿಟ್ಟು, ಸಾಂಘಿಕವಾಗಿ ಏಡಿ ಹಿಡಿದು ಸುಡುತ್ತಾರೆ. ಸುಟ್ಟ ಏಡಿಗೆ ತನ್ನದೇ ಆದ ರುಚಿ ಇರುತ್ತದೆ. ಏಡಿಯ ಚಿಪ್ಪು ತೆಗೆದು ಹಸಿಹಸಿಯಾಗಿಯೇ ತಿನ್ನುವುದುಂಟು. ಏಡಿ ರಸ ಜೀರ್ಣಶಕ್ತಿ ಹೆಚ್ಚಿಸುವುದರಿಂದ, ವಿಶೇಷವಾಗಿ ಮೇಯಿಸುವ ಎತ್ತುಗಳಿಗೆ ಗೊಟ್ಟದಲ್ಲಿ ಕುಡಿಸುತ್ತಿದ್ದರು. ಆದರೆ ಇಂದು ಮಳೆ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಏಡಿ ಸಿಗುತ್ತಿಲ್ಲ. ಅಷ್ಟು ಮುತುವರ್ಜಿ ವಹಿಸಿ ಎತ್ತು ಮೇಯಿಸುವ ರೈತರೂ ಕಾಣುತ್ತಿಲ್ಲ.

ಗುಳ್ಳೆನರಿಗಳಿಗೆ ಏಡಿಯೆಂದರೆ ಪಂಚಪ್ರಾಣ. ಹಾಗಾಗಿಯೇ ಇಲ್ಲಿ ಏಡಿ ಮತ್ತು ನರಿಯ ಬಗ್ಗೆ ಕತೆಗಳು ಹುಟ್ಟಿಕೊಂಡಿವೆ. ಈ ಕತೆಗಳು ಶಿಶು ಸಾಹಿತ್ಯಕ್ಕೆ ಉತ್ತಮ ಕೊಡುಗೆಯಾಗಿವೆ. ಕೃಷಿಕ ನಾರೆಪ್ಪ ಅವರು ಹೇಳುವ ಒಂದು ಕತೆ ಹೀಗಿದೆ: ಒಂದು ಸಲ ನರಿಗಳ ನಾಯಕ ಏಡಿಗಳ ಮುಖಂಡನ ಬಳಿ ಬಂದು, ‘ಇನ್ನು ಮುಂದೆ ನಮ್ಮ ನಡುವೆ ವೈರತ್ವ ಬೇಡ. ಹೆಣ್ಣು ಕೊಟ್ಟು ತೆಗೆಯೋಣ, ಹುಣ್ಣಿಮೆ ರಾತ್ರಿ ಬರ್ತೀವಿ’ ಎಂದು ಹೇಳಿತಂತೆ. ಇದಕ್ಕೆ ಒಪ್ಪಿದ ಏಡಿ ‘ಹಾಗೇ ಆಗಲಿ’ ಎಂದಿತಂತೆ. ಹುಣ್ಣಿಮೆಯ ದಿನ ಕತ್ತಲಾಗುತ್ತಿದ್ದಂತೆ, ಏಡಿಗಳು ಬಿಲಗಳಿಂದ ಹೊರಗೆ ಬಂದು ನರಿಗಳಿಗಾಗಿ ಕಾಯುತ್ತಿದ್ದವಂತೆ. ಗುಂಪಾಗಿ ಬರುತ್ತಿದ್ದ ನರಿಗಳು, ಗುಂಪು ಗುಂಪಾಗಿ ಸೇರಿದ್ದ ಏಡಿಗಳನ್ನು ಕಂಡು, ‘ಕರುಂ ದದೀಮ್‌, ಕರುಂ ದದೀಮ್‌’ ಎಂದು ಕುಣಿದಾಡುತ್ತಿದ್ದವಂತೆ. ಅಪಾಯವನ್ನು ಗ್ರಹಿಸಿದ ಏಡಿಗಳು ‘ನಾದಗಳಲ್ಲೆ ಭೇದಗಳುಂಟು ಹಿಂದಿಂದಕ್ಕೆ ತತ್ತಾರೆ’ ಎಂದು ಬಿಲ ಸೇರಿದವಂತೆ. ನರಿಗಳು ನಿರಾಸೆಯಿಂದ ಹಿಂದಿರುಗಿದವಂತೆ.

ಹಿಂದೆ ಗ್ರಾಮೀಣ ಪ್ರದೇಶದ ಹಿರಿಯರು ಇಂಥ ಕತೆಗಳನ್ನು ಮಕ್ಕಳಿಗೆ ಹೇಳಿ ರಂಜಿಸುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕತೆ ಹೇಳುತ್ತಿದ್ದ ಅಜ್ಜ ಹಾಗೂ ಕತೆ ಕೇಳುತ್ತಿದ್ದ ಮೊಮ್ಮಗ ಒಟ್ಟಿಗೆ ಟಿವಿ ಮುಂದೆ ಕುಳಿತಿದ್ದಾರೆ.

ಕೆರೆ ಉತ್ಪನ್ನಗಳಲ್ಲಿ ಏಡಿಯೂ ಒಂದು. ವಿವಿಧ ಜಾತಿಯ ನಾಟಿ ಮೀನು, ಸಿಗಡಿ, ಮೀನು ಸೊಪ್ಪು, ಗೊಟ್ಟಿಗಡ್ಡೆ ಇತರ ಉತ್ಪನ್ನಗಳು. ಕೆರೆ ಪಕ್ಕದ ಗ್ರಾಮದ ಜನರು ಈ ಎಲ್ಲ ಉತ್ಪನ್ನಗಳನ್ನೂ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಆರೋಗ್ಯವಾಗಿ ಬದುಕುತ್ತಿದ್ದರು. ಈಗ ನಾಟಿ ಉತ್ಪನ್ನಗಳ ಬಗ್ಗೆ ಒಲವು ಇದೆಯಾದರೂ, ಲಭ್ಯತೆ ಪ್ರಮಾಣ ಕುಸಿದಿರುವುದು ಜನರ ಕಳವಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT