ಬಾಳಿಗಾ ಕಾಲೇಜು ಸುತ್ತ ಸರ್ಪಗಾವಲು

7
ಕುಮಟಾ: ಮತ ಎಣಿಕೆ ಕೇಂದ್ರದ ಭದ್ರತೆಗೆ 400 ರಕ್ಷಣಾ ಸಿಬ್ಬಂದಿ

ಬಾಳಿಗಾ ಕಾಲೇಜು ಸುತ್ತ ಸರ್ಪಗಾವಲು

Published:
Updated:

ಕುಮಟಾ: ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ತಂದಿಡಲಾಗಿರುವ ಇಲ್ಲಿಯ ಬಾಳಿಗಾ ಕಾಲೇಜು ಮತ ಎಣಿಕೆ ಕೇಂದ್ರಕ್ಕೆ ಗಡಿ ಭದ್ರತಾ ಪಡೆ ಹಾಗೂ ರಾಜ್ಯ ಪೊಲೀಸ್ ಸಿಬ್ಬಂದಿಯ ಸರ್ಪಗಾವಲು ಹಾಕಲಾಗಿದೆ.

ಪ್ರತಿ ಕ್ಷೇತ್ರಗಳ ಬೂತ್‌ವಾರು ಮತ ಯಂತ್ರಗಳನ್ನು ಮತಗಟ್ಟೆಯಲ್ಲಿ ವ್ಯವಸ್ಥಿತವಾಗಿ ಇಡುವ ಕಾರ್ಯ ಭಾನುವಾರ ಮಧ್ಯಾಹ್ನವರೆಗೆ ನಡೆಯಿತು. ಘಟ್ಟ ಪ್ರದೇಶಗಳ ಮತಪೆಟ್ಟಿಗೆಗಳನ್ನು ತಂದ ಬಸ್‌ಗಳು ಒಂದೇ ಸಲ ಮತ ಎಣಿಕೆ ಕೇಂದ್ರದ ಬಳಿ ಬಂದ ಕಾರಣ ಕಾಲೇಜು ರಸ್ತೆ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಹೆಗಡೆ ಕ್ರಾಸ್‌ನಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಮೇ 15ವರೆಗೆ ಬಾಳಿಗಾ ಕಾಲೇಜು ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಆಯೋಗ ಈ ಸಲ ಹಿಂದೆಂದಿಗಿಂತ ಹೆಚ್ಚಿನ ಭದ್ರತೆ ಒದಗಿಸಿದೆ. ತಲಾ 90 ಸಿಬ್ಬಂದಿಯ ಮೂರು ಗಡಿ ಭದ್ರತಾ ಪಡೆಯ ತುಕಡಿಗಳನ್ನು ಹಗಲು–ರಾತ್ರಿ ಕಾವಲಿಗಾಗಿ ನಿಯೋಜಿಸಲಾಗಿದೆ. ಜತೆಗೆ 150ಕ್ಕೂ ಹೆಚ್ಚು ರಾಜ್ಯ ಪೊಲೀಸ್ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆರು ಮಂದಿ ಸಿಪಿಐ, ಎಂಟು ಪಿಎಸ್ಐ ಹಾಗೂ ಒಬ್ಬ ಡಿವೈಎಸ್‌ಪಿ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಗಡಿ ಭದ್ರತಾ ಪಡೆ ಸಿಬ್ಬಂದಿ ಸ್ಥಳದಲ್ಲೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಇಲಾಖೆಯಿಂದ ಆಹಾರ ಪೂರೈಸಲಾಗುತ್ತದೆ.

‘ಸಿಬ್ಬಂದಿಗೆ ಸ್ನಾನ, ಶೌಚ ಮುಂತಾದ ಅಗತ್ಯಗಳಿಗೆ ಸಮೀಪದ ಶಿಕ್ಷಣ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಸಮೀಪದ ವಸತಿ ಗೃಹಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆಯ ದಿನ ಭದ್ರತಾ ಹಾಗೂ ಉಳಿದೆಲ್ಲ ಸಿಬ್ಬಂದಿಯ ಊಟ, ತಿಂಡಿ ವ್ಯವಸ್ಥೆಯನ್ನು ಚುನಾವಣಾ ಆಯೋಗವೇ ನೋಡಿಕೊಳ್ಳಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry