ಮತದಾನ: ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಹಾನಗಲ್ ಮುಂದೆ

7

ಮತದಾನ: ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಹಾನಗಲ್ ಮುಂದೆ

Published:
Updated:
ಮತದಾನ: ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಹಾನಗಲ್ ಮುಂದೆ

ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಶೇ 80.46 ಮತದಾನವಾಗಿದ್ದು, ಪುರುಷರು ಶೇ 81.80 ಮತ್ತು ಮಹಿಳೆಯರು ಶೇ 79 ಮತ ಚಲಾಯಿಸಿದ್ದಾರೆ.

ಕ್ಷೇತ್ರವಾರು ಪೈಕಿ ಹಾನಗಲ್(ಶೇ 83.98) ಗರಿಷ್ಠ ಹಾಗೂ ಹಾವೇರಿ (ಶೇ 76.53) ಕನಿಷ್ಠ ಮತದಾನವಾಗಿದೆ. ಆದರೆ, 38 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದು, ನೀರಸವಾಗಿದೆ. 2013ರ ಚುನಾವಣೆಗಿಂತ ಈ ಬಾರಿ ಶೇ 0.55 ಮತದಾನ ಹೆಚ್ಚಳವಾಗಿದೆ. ಒಟ್ಟು ಮತದಾರರ ಸಂಖ್ಯೆಯು 2013ಕ್ಕಿಂತ ಈ ಬಾರಿ 1,35,333 ವೃದ್ಧಿಸಿದೆ. ಅಲ್ಲದೇ, ಕಳೆದ ಬಾರಿಗಿಂತ 1,14,859 ಹೆಚ್ಚುವರಿ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಮತ ಎಣಿಕೆ: ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದ ಇವಿಎಂ ಹಾಗೂ ವಿ.ವಿ. ಪ್ಯಾಟ್‌ಗಳು ಭಾನುವಾರ ಬೆಳಿಗ್ಗೆ ಮತ ಎಣಿಕೆ ಕೆಂದ್ರವಾದ ತಾಲ್ಲೂಕಿನ ದೇವಗಿರಿ ಎಂಜಿನಿಯರಿಂಗ್ ಕಾಲೇಜಿನ ಭದ್ರತಾ ಕೊಠಡಿ ಸೇರಿವೆ.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಎಸ್ಪಿ ಕೆ. ಪರಶುರಾಂ ಮತ್ತು ಎಡಿಸಿ ಶಾಂತಾ ಹುಲ್ಮನಿ ಸಮ್ಮುಖದಲ್ಲಿ ಭದ್ರತಾ ಕೊಠಡಿಯನ್ನು ಬಂದ್ ಮಾಡಲಾಯಿತು.

ನಿಷೇಧಾಜ್ಞೆ: ಮೇ 15ರಂದು ಮತ ಎಣಿಕೆ ನಡೆಯಲಿದ್ದು, ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಅಂದು ಬೆಳಿಗ್ಗೆ 6 ರಿಂದ ಮೇ 16ರ ಬೆಳಿಗ್ಗೆ 6ಗಂಟೆಯವರೆಗೆ ಕಲಂ 144 ಅನ್ವಯ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು, ಮಾರಕಾಸ್ತ್ರ, ಸ್ಫೋಟಕ ವಸ್ತು, ಇತರ ಯಾವುದೇ ಅಪಾಯಕಾರಿ ವಸ್ತುಗಳನ್ನು ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಲಾಗಿದೆ. ಅನುಮತಿ ಇಲ್ಲದೆ ಯಾವುದೇ ಸಭೆ-, ಸಮಾರಂಭ

ಅಥವಾ ಮೆರವಣಿಗೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಈ ಆದೇಶವು ಶವ ಸಂಸ್ಕಾರ, ಮದುವೆ ಹಾಗೂ ಧಾರ್ಮಿಕ ಸಭೆ ಅಥವಾ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry