ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಕೆಗಳಿಗೆ ಹಸಿರು ಹುಲ್ಲು, ಕೊಳವೆ ಬಾವಿ ನೀರು

ಗೆಂಡೆಕಟ್ಟೆ ವನ್ಯಧಾಮದಲ್ಲಿ ಪ್ರಾಣಿಗಳಿಗೆ ಬಿಸಿಲು ತಟ್ಟದಂತೆ ಅರಣ್ಯ ಇಲಾಖೆ ಕ್ರಮ
Last Updated 14 ಮೇ 2018, 11:13 IST
ಅಕ್ಷರ ಗಾತ್ರ

ಹಾಸನ: ಜಿಂಕೆವನ ಎಂದೇ ಹೆಸರು ಗಳಿಸಿರುವ ಗೆಂಡೆಕಟ್ಟೆ ವನ್ಯಧಾಮದ ಜಿಂಕೆಗಳಿಗೆ ಈ ಬಾರಿ ಬೇಸಿಗೆಯಲ್ಲಿ ಮೇವು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಿಲ್ಲ.

ವನ್ಯಧಾಮದಲ್ಲಿರುವ ಜಿಂಕೆಗಳ ಮೇವಿಗೆ ಅರಣ್ಯ ಇಲಾಖೆ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಹುಲ್ಲು ಬೆಳೆಸುವುದರ ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.

ಕಳೆದ ವರ್ಷ ಬೇಸಿಗೆಯಲ್ಲಿ ನೀರಿಲ್ಲದೆ ಒಣಹುಲ್ಲನ್ನೇ ಜಿಂಕೆಗಳು ತಿನ್ನಬೇಕಿತ್ತು. ಈ ಬಾರಿ ಹಲವೆಡೆ ಮಳೆ ಆಗಿರುವುದರಿಂದ ಮೇವಿನ ಸಮಸ್ಯೆ ತಕ್ಕ ಮಟ್ಟಿಗೆ ನೀಗಿದೆ.

ಹೊಟ್ಟೆತುಂಬ ಹುಲ್ಲು ತಿಂದು , ನೀರು ಕುಡಿದ ಜಿಂಕೆಗಳು ಲವಲವಿಕೆಯಿಂದ ಓಡಾಡುತ್ತಿವೆ. ಜಿಂಕೆ ನೋಡಲು ಬರುವ ಪ್ರವಾಸಿಗರಿಗೂ ಮುದ ನೀಡುತ್ತಿವೆ.

ಜಿಲ್ಲೆಯಲ್ಲಿ ಅರಣ್ಯ ಇರುವ ಕಡೆ ಅಲ್ಲೊಂದು, ಇಲ್ಲೊಂದು ಜಿಂಕೆ ಕಾಣ ಸಿಗುವುದು ಬಿಟ್ಟರೆ, ಗುಂಪು ಗುಂಪು ಜಿಂಕೆಗಳಿರುವುದು ಇಲ್ಲೇ. ಕಳೆದ ವರ್ಷ 80 ಇದ್ದ ಜಿಂಕೆಯ ಸಂತತಿ ಈ ಬಾರಿ 95ಕ್ಕೆ ಏರಿದೆ. ಇವುಗಳ ಜತೆಗೆ ಕಡವೆ ಆಶ್ರಯ ಪಡೆದಿದೆ.

ಕಳೆದ ವರ್ಷ ಬೇಸಿಗೆಯಲ್ಲಿ ಬಿಸಿಲ ತಾಪದ ಜತೆಗೆ ಮತ್ತೊಂದೆಡೆ ಹಸಿರು ಮೇವಿಲ್ಲದೇ ಕಷ್ಟ ಅನುಭವಿಸಿದ್ದವು. ಒಣ ಹುಲ್ಲು ಬಿಟ್ಟರೆ ಏನೂ ಸಿಗುತ್ತಿರಲಿಲ್ಲ. ಕುಡಿಯಲು ನೀರಿನ ಜೊತೆಗೆ ಹಸಿರು ಹುಲ್ಲು ಮರೀಚಿಕೆಯಾಗಿತ್ತು. ಈ ಬಾರಿ ಅರಣ್ಯ ಇಲಾಖೆ ಹಸಿರು ಹುಲ್ಲು ಬೆಳೆಸಿದೆ. ಜಿಂಕೆವನಕ್ಕೆ ಪ್ರತ್ಯೇಕ ನೀರಿನ ಹೊಂಡ ಇದೆ.

ಇಲ್ಲಿಗೆ ಎರಡು ಕೊಳವೆಬಾವಿಯ ನೀರನ್ನು ಹರಿಸಲಾಗುತ್ತಿದೆ. ಮತ್ತೊಂದು ಕೊಳವೆ ಬಾವಿಯನ್ನು ಪ್ರವಾಸಿ ಮಂದಿರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕೊಳವೆ ಬಾವಿ ನೀರು ಕಡಿಮೆಯಾದರೆ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತದೆ. ಇದರಿಂದಾಗಿ ಪ್ರಾಣಿಗಳಿಗೆ ನೀರು, ಆಹಾರಕ್ಕೆ ಅಷ್ಟಾಗಿ ಸಮಸ್ಯೆ ಆಗಲಿಲ್ಲ.

ವಾರಾಂತ್ಯ ಇಲ್ಲವೇ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಬೆಳಿಗ್ಗೆಯಿಂದ ಸಂಜೆ ವರೆಗೂ ಹಿಂಡು ಹಿಂಡು ಜಿಂಕೆಯನ್ನು ಕಣ್ತುಂಬಿಕೊಳ್ಳಬಹುದು. ಕುಟುಂಬ ಸದಸ್ಯರು, ವಿದ್ಯಾರ್ಥಿಗಳು, ಮಕ್ಕಳಿಗೆ ಮನರಂಜನೆ ಸಿಗಲಿದೆ.

ಜಿಂಕೆವನದ ಜತೆಗೆ ಸುಮಾರು 300 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿರುವ ಗೆಂಡೆಕಟ್ಟೆ ವನ್ಯಧಾಮಕ್ಕೆ ಮೂಲ ಸೌಕರ್ಯ, ಮಕ್ಕಳ ಆಟೋಟ ಉಪಕರಣಗಳು ಅಳವಡಿಸಿ ಮತ್ತಷ್ಟು ಸೌಲಭ್ಯ ನೀಡಿದರೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬಹುದು.

‘ಜಿಂಕೆವನಕ್ಕಾಗಿಯೇ ಪ್ರತ್ಯೇಕ ಟ್ಯಾಂಕ್ ಹಾಗೂ ಕೊಳವೆ ಬಾವಿ ಇದೆ. ಕೊಳವೆಬಾವಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಒಣ ಹುಲ್ಲಿನ ಜತೆಗೆ ಹಸಿರು ಹುಲ್ಲನ್ನು ನೀಡಲಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೊದಲೇ ಮಳೆ ಯಾಗಿರುವುದರಿಂದ ಸಮಸ್ಯೆ ಅಷ್ಟೇನು ಬಿಗಡಾಯಿಸದು’ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದರು.

ಜೆ.ಎಸ್‌.ಮಹೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT