ನಾಳೆ ಫಲಿತಾಂಶ: ತೀವ್ರಗೊಂಡ ಬೆಟ್ಟಿಂಗ್‌

7

ನಾಳೆ ಫಲಿತಾಂಶ: ತೀವ್ರಗೊಂಡ ಬೆಟ್ಟಿಂಗ್‌

Published:
Updated:

ಗದಗ: ಮತದಾನ ಮುಗಿದ ಬೆನ್ನಲ್ಲೇ, ಜಿಲ್ಲೆಯಾದ್ಯಂತ ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿದೆ. ಮತ ಎಣಿಕೆಗೆ ಕ್ಷಣಗಣನೆ ಪ್ರಾರಂಭವಾದ ಬೆನ್ನಲ್ಲೇ, ಜಿಲ್ಲೆಯ ವಿವಿಧೆಡೆ ಬೆಟ್ಟಿಂಗ್‌ ಭರಾಟೆ ತೀವ್ರಗೊಂಡಿದೆ.ಈ ಬಾರಿ ಜಿಲ್ಲೆಯಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಇದೆ. ಇದೇ ಅಂಶದ ಆಧಾರದಲ್ಲಿ ಬೆಟ್ಟಿಂಗ್‌ ನಡೆಯುತ್ತಿದೆ.

ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ ಪಾಟೀಲ ಮತ್ತು ಬಿಜೆಪಿಯ ಅನಿಲ್‌ ಮೆಣಸಿನಕಾಯಿ ನಡುವೆ ಸ್ಪರ್ಧೆ ಇದ್ದು, ಈ ಕ್ಷೇತ್ರ ರಾಜ್ಯ ಮಟ್ಟದಲ್ಲಿ ಗಮನಾರ್ಹ ಎಂಬ ಕಾರಣಕ್ಕೆ ಬೆಟ್ಟಿಂಗ್‌ ನಡೆಯುತ್ತಿದೆ. ರೋಣ, ನರಗುಂದ ಕ್ಷೇತ್ರದಲ್ಲೂ ಬೆಟ್ಟಿಂಗ್‌ ಆರಂಭವಾಗಿದೆ. ಕ್ಷೇತ್ರ, ಅಭ್ಯರ್ಥಿ, ಪಡೆಯುವ ಮತಗಳ ಆಧಾರದ ಮೇಲೆ ಬೆಟ್ಟಿಂಗ್‌ ಮೊತ್ತ ನಿಗದಿಯಾಗಿದೆ. ನಾಲ್ಕೂ ಕ್ಷೇತ್ರಗಳಲ್ಲಿರುವ ಮುಖ್ಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ಬೆಟ್ಟಿಂಗ್ ಕಟ್ಟಲಾಗುತ್ತದೆ.

ಮತದಾನ ಮುಗಿದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅಭ್ಯರ್ಥಿಗಳು, ಕಾರ್ಯಕರ್ತರು, ಮುಖಂಡರು ತಮ್ಮದೇ ಗೆಲುವಿನ ಲೆಕ್ಕಾಚಾರದಲ್ಲಿ ಇದ್ದಾರೆ. ಕೆಲವು ಬೆಂಬಲಿಗರು ಮತದಾನಕ್ಕೂ ಪೂರ್ವದಲ್ಲೇ ಬೆಟ್ಟಿಂಗ್ ಕಣಕ್ಕೆ ಇಳಿದಿದ್ದಾರೆ.

ಹಳ್ಳಿಗಳಲ್ಲಿ ಪಂಚಾಯ್ತಿ ಕಟ್ಟೆ, ದೇವಸ್ಥಾನದ ಆವರಣ, ಚಹಾ ಅಂಗಡಿ, ಸಭೆ ಸಮಾರಂಭಗಳಲ್ಲಿ ಚುನಾವಣಾ ಫಲಿತಾಂಶದ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್‌, ಬಿಜೆಪಿ ಪಕ್ಷಗಳಲ್ಲಿ ಯಾರು ಗೆಲ್ಲುತ್ತಾರೆ, ಎಷ್ಟು ಅಂತರದಿಂದ ಗೆಲ್ಲುತ್ತಾರೆ ಎನ್ನುವುದು ಬೆಟ್ಟಿಂಗ್ ವಿಷಯವಾಗಿದೆ. ರೋಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರುವುದರಿಂದ ಅಲ್ಲಿ ಜೆಡಿಎಸ್‌ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆಯಬಹುದು ಎನ್ನುವುದರ ಕುರಿತು ಕಾರ್ಯಕರ್ತರಲ್ಲಿ ಲೆಕ್ಕಾಚಾರ ಪ್ರಾರಂಭವಾಗಿದೆ.

ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದರೆ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಜಯ ಸಾಧಿಸುತ್ತಾರೆ ಎಂದು ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ವಾಟ್ಸ್‌ಆ್ಯಪ್‌ ಮತ್ತು ಎಸ್‍ಎಂಎಸ್ ಮೂಲಕ ಬೆಟ್ಟಿಂಗ್ ಸಂಕೇತ ಸಂವಹನ ನಡೆಯುತ್ತಿದೆ.

*

ಜಿಲ್ಲೆಯಲ್ಲಿ ಎಲ್ಲೂ ಚುನಾವಣಾ ಬೆಟ್ಟಿಂಗ್ ಗಮನಕ್ಕೆ ಬಂದಿಲ್ಲ. ಇದು ಕಾನೂನುಬಾಹಿರವಾಗಿದ್ದು ಇಂಥ ಕೃತ್ಯ ನಡೆಸುತ್ತಿರುವ ಗುಂಪುಗಳ ಮೇಲೆ ನಿಗಾ ವಹಿಸುತ್ತೇವೆ

- ಕೆ. ಸಂತೋಷಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry