ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಮ್ಮಕ್ಕಳೊಂದಿಗೆ ಆಡಿ ನಲಿದ ವಿವಿಧ ಅಭ್ಯರ್ಥಿಗಳು

ಮನೆಯಲ್ಲೇ ವಿಶ್ರಾಂತಿ; ಕಾರ್ಯಕರ್ತರೊಂದಿಗೆ ಸಭೆ, ಮತದಾರರಿಗೆ ಧನ್ಯವಾದ ಸಲ್ಲಿಕೆ; ದೇವಸ್ಥಾನದಲ್ಲಿ ಪೂಜೆ; ಮದುವೆ ಸಮಾರಂಭಗಳಲ್ಲಿ ಭಾಗಿ
Last Updated 14 ಮೇ 2018, 11:26 IST
ಅಕ್ಷರ ಗಾತ್ರ

ಗದಗ: ಮಾತಿನ ಅಬ್ಬರವಿಲ್ಲ. ಆರೋಪ, ಪ್ರತ್ಯಾರೋಪಗಳಿಲ್ಲ. ಜಯ ಘೋಷಗಳಿಲ್ಲ. ಮನೆಮನೆಗೆ ಓಡಾಟ, ಕಾರ್ಯಕರ್ತರ ಕೂಗಾಟ ಎಲ್ಲದಕ್ಕೂ ಭಾನುವಾರ ತಾತ್ಕಾಲಿಕ ವಿರಾಮ...

ಕಳೆದ ಮೂರು ವಾರಗಳಿಂದ ನೆತ್ತಿ ಸುಡುವ ಕೆಂಡದಂತಹ ಬಿಸಿಲನ್ನೂ ಲೆಕ್ಕಿಸದೆ ಚುನಾವಣಾ ಕಣದಲ್ಲಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ದ ಅಭ್ಯರ್ಥಿಗಳು, ಕಾರ್ಯಕರ್ತರು ಭಾನುವಾರ ರಾಜಕೀಯ ಬದಿಗಿರಿಸಿ, ಸಂಪೂರ್ಣ ವಿಶ್ರಾಂತಿ ಪಡೆದರು. ಒತ್ತಡ ಕಡಿಮೆ ಮಾಡಿಕೊಂಡರು.

ಗದಗ ಮತಕ್ಷೇತ್ರ: ಗದಗ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರು ಭಾನುವಾರ ಬೆಳಿಗ್ಗೆ ಎಂದಿನಂತೆ ಕಾಟನ್‌ ಸೇಲ್‌ ಸೊಸೈಟಿಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ಸಭೆ ನಡೆಸಿದರು.

ಚುನಾವಣೆ ಹಿನ್ನೆಲೆ ಮೆಲುಕು ಹಾಕಿದರು. ಹೃದಯಾಘಾತದಿಂದ ಶುಕ್ರವಾರ ರಾತ್ರಿ ಮೃತರಾದ ಕನ್ನಡದ ಶ್ರೇಷ್ಠ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ, ರೋಣದ ಅಬ್ಬಿಗೇರಿಯಲ್ಲಿರುವ ನಿವಾಸಕ್ಕೆ ತೆರಳಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಭಾನುವಾರ ವಿರಾಮ ಪಡೆದಿಲ್ಲವೇ ಎಂದು ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ಸಂಪೂರ್ಣ ವಿರಾಮ ಅಂತೇನಿಲ್ಲ. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಿಡುವಿಲ್ಲದೆ ದುಡಿದಿದ್ದ ಕಾರ್ಯಕರ್ತರಿಗ ಧನ್ಯವಾದ ಹೇಳಿದೆ. ಹಿರಿಯರ ಜತೆ ಸಮಾಲೋಚನೆ ನಡೆಸಿದೆ.’

‘ಒಂದು ಮದುವೆ, ಒಂದು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಗಿರಡ್ಡಿ ಅವರ ಮನೆಗೆ ಭೇಟಿ ನೀಡಿದಾಗ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಸದಸ್ಯರು ಸೇರಿದ್ದರು. ರಾಜಕೀಯ ಬದಿಗಿರಿಸಿ ಅಲ್ಲಿ ಸ್ವಲ್ಪ ಸಾಹಿತ್ಯದ ಚರ್ಚೆಯೂ ನಡೆಯಿತು’ ಎಂದರು.

ಮೇ 15ರ ಫಲಿತಾಂಶದ ಕುರಿತು ಒತ್ತಡ ಇದೆಯೇ ಎಂದರೆ, ‘ಯಾವುದೇ ಒತ್ತಡ ಇಲ್ಲ. ನನಗೂ ಇಲ್ಲ, ಪಕ್ಷಕ್ಕೂ ಇಲ್ಲ, ಕಾರ್ಯಕರ್ತರಿಗೂ ಇಲ್ಲ. ಮೊದಲು ಹೇಗೆ ಇದ್ದೇವೋ, ಹಾಗೆಯೇ ಇದ್ದೇವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಸಿಲು ಸ್ವಲ್ಪ ಜಾಸ್ತಿ ಇತ್ತು. ಹೀಗಾಗಿ ನಿಂಬೆ ರಸ ಸ್ವಲ್ಪ ಜಾಸ್ತಿ ಕುಡಿಯುತ್ತಿದ್ದೆ. ಈಗ ಸ್ವಲ್ಪ ಕಡಿಮೆ ಕುಡಿಯುತ್ತಿದ್ದೇನೆ’ ಎಂದು ನಕ್ಕರು.

ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಮನೆಯಲ್ಲಿ ಪಕ್ಷದ ಕಾರ್ಯಕರ್ತರು, ಆಪ್ತರ ಜತೆಗೆ ಭಾನುವಾರ ಕಳೆದರು.

ಅಲ್ಲಿಂದ ಮಹೇಂದ್ರಕರ ವೃತ್ತದ ಬಳಿ ದೇವಸ್ಥಾನವೊಂದರಲ್ಲಿ ನಿಗದಿಯಾಗಿದ್ದ ಪೂಜೆಯಲ್ಲಿ ಭಾಗವಹಿಸಿದರು. ಬಳಿಕ ಪಿ.ಬಿ ರಸ್ತೆಯಲ್ಲಿರುವ ಸಂಸದ ಶಿವಕುಮಾರ ಉದಾಸಿ ಅವರ ಕಚೇರಿಗೆ ಬಂದ ಅವರು ಅಲ್ಲಿ ಪಕ್ಷದ ಜಿಲ್ಲಾ ಘಟಕದ ಸದಸ್ಯರ ಜತೆಗೆ ಚರ್ಚೆ ನಡೆಸಿದರು.

‘ಯಾವುದೇ ಒತ್ತಡ ಇಲ್ಲ. ಒತ್ತಡ ಏನಿದ್ದರೂ ನಮ್ಮ ಎದುರಾಳಿಗೆ ಇರಬೇಕು. ಸೋಲು–ಗೆಲುವಿನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ’ ಎಂದರು.

ಶಿರಹಟ್ಟಿ ಕ್ಷೇತ್ರ: ಒಂದು ತಿಂಗಳಿನಿಂದ ಚುನಾವಣೆ ಪ್ರಚಾರದ ಭರಾಟೆ, ಹಳ್ಳಿಗಳ ಸುತ್ತಾಟ, ಕಾರ್ಯಕರ್ತರ ಭೇಟಿ, ಮತದಾರರ ಮನವೊಲಿಕೆಯಲ್ಲಿ ಮಗ್ನರಾಗಿದ್ದ ಶಿರಹಟ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಭಾನುವಾರ ಸಂಪೂರ್ಣ ವಿಶ್ರಾಂತಿ ಪಡೆದರು.

ಅವರ ಕುಟುಂಬದಲ್ಲಿ ಸಂಬಂಧಿಕರು ಸೇರಿದ್ದರು. ರಾಜಕೀಯ ಜಂಜಾಟದಿಂದ ದೂರ ಇದ್ದು, ಮೊಮ್ಮಕ್ಕಳ ಜತೆಗೆ ಆಟ ಆಡಿ ನಲಿದರು. ಬಂಧುಗಳೊಡನೆ ಸೇರಿ ಉಪಾಹಾರ ಸೇವಿಸಿದರು. ನಂತರ ಅವರ ಆಪ್ತರೊಬ್ಬರು ಹುಬ್ಬಳ್ಳಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಲು ತೆರಳಿದರು.

ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಭಾನುವಾರ ಬೆಳಿಗ್ಗೆ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಮತದಾರರನ್ನು ಭೇಟಿಯಾಗಿ ಧನ್ಯವಾದ ಹೇಳಿದರು. ನಂತರ ಮನೆಗೆ ಬಂದ ಕಾರ್ಯಕರ್ತರೊಂದಿಗೆ ಚುನಾವಣೆ ಕುರಿತು ಚರ್ಚೆ ನಡೆಸಿದರು. ಯಾವ, ಯಾವ ಊರಲ್ಲಿ ತಮ್ಮ ಪರವಾಗಿ ಎಷ್ಟು ಮತಗಳು ಬಂದಿರಬಹುದು ಎಂದು ಲೆಕ್ಕಾಚಾರ ಹಾಕಿದರು.

ರೋಣ ಕ್ಷೇತ್ರ: ರೋಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಜಿ.ಎಸ್.ಪಾಟೀಲ ಭಾನುವಾರ ಬೆಳಿಗ್ಗೆ ಖುಷಿಯಾಗಿದ್ದರು.ತಿಂಗಳಿಂದ ಬಿಡುವಿಲ್ಲದೆ ಪ್ರಚಾರದಲ್ಲಿದ್ದ ತೊಡಗಿದ್ದ ಅವರು ಭಾನುವಾರ ಮನೆಯಲ್ಲೇ ಉಳಿದು ಮಗಳು ಹಾಗೂ ಮೊಮ್ಮಕ್ಕಳ ಜತೆ ಕಳೆದರು. ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದರು.

ಪುತ್ರ ಮಿಥುನ್‌, ಪ್ರಶಾಂತ ಪಾಟೀಲ, ಹಾಗೂ ಮಾವನವರ ಪರ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದ ಪಾಟೀಲರ ಸೊಸೆ ಶಶಿಕಲಾ ಅವರು, ಭಾನುವಾರ ಮನೆಗೆ ಬಂದವರಿಗೆ ನಮಸ್ಕರಿಸುತ್ತಾ ಧನ್ಯವಾದ ಸಲ್ಲಿಸುತ್ತಿದ್ದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಇಡೀ ದಿನ ಹೆಂಡತಿ, ಮಕ್ಕಳೊಂದಿಗೆ ಟಿ.ವಿ ನೋಡಿ ವಿಶ್ರಾಂತಿ ಪಡೆದರು. ಎಲ್ಲ ರಾಜಕೀಯ ಜಂಜಾಟಗಳನ್ನು ದೂರವಿಟ್ಟಿದ್ದರು.

ಜೆಡಿಎಸ್ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಅವರು ಕ್ಷೇತ್ರ ವ್ಯಾಪ್ತಿಯ ಜಕ್ಕಲಿ ಹಾಗೂ ಇತರ ಹಳ್ಳಿಗಳಿಗೆ ಭೇಟಿ ನೀಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಮಧ್ಯಾಹ್ನ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಸಾಸಿವೆಹಳ್ಳಿ ಹಾಗೂ ಬಿನ್ನಾಳ ಗ್ರಾಮದಲ್ಲಿರುವ ತಮ್ಮ ಸಂಬಂಧಿಯೊಬ್ಬರ ಮದುವೆ ನಿಶ್ಚಯ ಕಾರ್ಯಕ್ರಮದಲ್ಲಿ ಭಾಗಿಯಾದರು.

ನರಗುಂದ ಕ್ಷೇತ್ರ: ಒಂದು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌.ಯಾವಗಲ್‌ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಭಾನುವಾರ ಸಂಪೂರ್ಣ ವಿಶ್ರಾಂತಿ ಪಡೆದರು.

ಬಿ.ಆರ್‌.ಯಾವಗಲ್‌ ಅವರು ಮಧ್ಯಾಹ್ನದವರೆಗೂ ಮನೆಯಲ್ಲಿದ್ದರು. ನಂತರ ಮತಕ್ಷೇತ್ರದ ಯಾವಗಲ್‌ ಸೇರಿದಂತೆ ವಿವಿಧ ಹಳ್ಳಿಗಳಿಗೆ ತೆರಳಿ, ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.

ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆದರು. ಮನೆಗೆ ಬಂದ ಬೆಂಬಲಿಗರು, ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT