ಇದು ದಣಿವಾರಿಸಿಕೊಳ್ಳುವ ಸಮಯ!

7
ವಿಧಾನಸಭಾ ಚುನಾವಣೆ: ರಾಜಕೀಯ ಒತ್ತಡ ಕಡಿಮೆ ಮಾಡಿಕೊಂಡ ಅಭ್ಯರ್ಥಿಗಳು

ಇದು ದಣಿವಾರಿಸಿಕೊಳ್ಳುವ ಸಮಯ!

Published:
Updated:

ಬಳ್ಳಾರಿ:  ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳಿಗೆ ಈಗ ದಣಿವು ಆರಿಸಿಕೊಳ್ಳುವ ಸಮಯ.ಮತದಾನ ಮುಗಿಯುವವರೆಗೂ ಬಿಸಿಲು, ನೆರಳೆನ್ನದೆ ಸಂಚರಿಸಿದ ಬಹುತೇಕರು ಭಾನುವಾರ ಮನೆಗಳಲ್ಲೇ ಉಳಿದು ಕುಟುಂಬದ ಸದಸ್ಯರೊಂದಿಗೇ ಇದ್ದು ವಿಶ್ರಾಂತಿ ಪಡೆದರು. ದಿನಪತ್ರಿಕೆಗಳಲ್ಲಿ ಮತದಾನದ ವರದಿಗಳನ್ನು ಓದಿದರು. ದೃಶ್ಯ ವಾಹಿನಿಗಳ ಮತದಾನದ ನಂತರದ ವಿಶ್ಲೇಷಣೆಗಳನ್ನು ಕುತೂಹಲದಿಂದ ನೋಡಿದರು. ಕೆಲವರು ಮನೆದೇವರ ಗುಡಿಗಳಿಗೆ ಭೇಟಿ ಕೊಟ್ಟರು. ‘ಇನ್ನು ಇದರ ಸಹವಾಸ ಸಾಕು’ ಎಂದು ಕೆಲವರು ಕ್ಷೇತ್ರ ಬಿಟ್ಟು ತೆರಳಿದರು! –ಮತದಾನದ ಮಾರನೇ ದಿನ ಅಭ್ಯರ್ಥಿಗಳ ದಿನಚರಿ ಹೀಗಿತ್ತು,

ಉಪಾಹಾರ ಬಡಿಸಿದ ಶ್ರೀರಾಮುಲು:

ಬಾದಾಮಿ ಮತ್ತು ಮೊಳಕಾಲ್ಮುರಿನಲ್ಲಿ ಸ್ಪರ್ಧಿಸಿರುವ ಸಂಸದ ಬಿ.ಶ್ರೀರಾಮುಲು ಇಲ್ಲಿನ ಅಹಂಬಾವಿ ಪ್ರದೇಶದ ತಮ್ಮ ಬಂಗಲೆಯಲ್ಲಿ ಎಂದಿನಂತೆ ಪೂಜೆ ಮುಗಿಸಿ, ದಿನಪತ್ರಿಕೆಗಳನ್ನು ಓದಿದರು. ಕಾರ್ಯಕರ್ತರೊಡನೆ ಚರ್ಚಿಸಿದರು. ಹಿತೈಷಿಗಳ ಸಲಹೆ ಮೇರೆಗೆ ಅವರು ಒಂಭತ್ತು ಯುವತಿಯರಿಗೆ ತಾವೇ ಕೈಯಾರೆ ಬೆಳಗಿನ ಉಪಾಹಾರವನ್ನು ಬಡಿಸಿದರು.

ಟಿ.ವಿ.ವೀಕ್ಷಣೆ: ಮನೆಯಿಂದ ಹೊರಕ್ಕೆ ಬಾರದ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇರ ರೆಡ್ಡಿ ಮತ್ತು ಜೆಡಿಎಸ್‌ ಅಭ್ಯರ್ಥಿ ಮೊಹ್ಮದ್ ಇಕ್ಬಾಲ್‌ ಹೊತುರ್‌ ಹಾಗೂ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಪಕ್ಕೀರಪ್ಪ, ದಿನಪತ್ರಿಕೆಗಳನ್ನು ಓದಿದರು. ದೃಶ್ಯವಾಹಿನಿಗಳ ವಿಶ್ಲೇಷಣಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಗುಡಿಗೆ ತೆರಳಿದರು: ಸಂಡೂರಿನ ಕಾಂಗ್ರೆಸ್‌ ಅಭ್ಯರ್ಥಿ ಈ ತುಕಾರಾಂ ಅವರು ಬಿಳಿಕೆರೆಯ ತಮ್ಮ ಮನೆದೇವರ ಗುಡಿಗೆ ಕುಟುಂಬ ಸಮೇತರಾಗಿ ತೆರಳಿದರು. ಎಸ್‌ಯುಸಿಐ ಅಭ್ಯರ್ಥಿ ರಾಮಾಂಜಿನಪ್ಪ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಬಿಜೆಪಿಯ ಡಿ.ರಾಘವೇಂದ್ರ ಕಾರ್ಯಕರ್ತರ ಮನೆ ಗಳಿಗೆ ಭೇಟಿ ಕೊಟ್ಟು ಧನ್ಯವಾದ ಹೇಳಿದರು. ಜೆಡಿಎಸ್‌ನ ವಸಂತ ಕುಮಾರ್‌ ಅವರ ಮೊಬೈಲ್‌ಫೋನ್‌ ಬಂದ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry