ಮತ ಎಣಿಕೆ ನಾಳೆ: ಅಭ್ಯರ್ಥಿಗಳಲ್ಲಿ ಕಾತರ

7
ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜು ಎಣಿಕೆ ಕೇಂದ್ರದಲ್ಲಿ ಚೈನಾ ಗಡಿಯ ಯೋಧರ ಕಾವಲು

ಮತ ಎಣಿಕೆ ನಾಳೆ: ಅಭ್ಯರ್ಥಿಗಳಲ್ಲಿ ಕಾತರ

Published:
Updated:

ಬಳ್ಳಾರಿ: ಜಿಲ್ಲೆಯ ಎಲ್ಲ ಒಂಭತ್ತು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿರುವ ನಗರ ಹೊರವಲಯದ ರಾವ್‌ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜು ಈಗ ಚೀನಾ ಗಡಿ ಕಾಯುವ ಯೋಧರ ಕಾವಲಿನಲ್ಲಿದೆ. ಅವರೊಂದಿಗೆ ಜಿಲ್ಲಾ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಭಾನುವಾರ ಪರಿಶೀಲನೆ ನಡೆಸಿದ ಬಳಿಕ ಕಾಲೇಜಿನ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌, ‘ಸಶಸ್ತ್ರ ಸೀಮಾ ಬಲ್‌ನ ಗಡಿ ಭದ್ರತಾ ಪಡೆಯ ಸುಮಾರು 300 ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದರು.

‘ಜಿಲ್ಲೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧರನ್ನು ನಿಯೋಜಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಚೈನಾ ಗಡಿಭಾಗದ ಯೋಧರನ್ನು ನಿಯೋಜಿಸಲಾಯಿತು. ಪ್ರತಿ ಮತ ಎಣಿಕೆ ಕೊಠಡಿಯಲ್ಲೂ ಈ ಯೋಧರು ಭದ್ರತೆ ನಿರ್ವಹಿಸಲಿದ್ದಾರೆ. ಮತಯಂತ್ರಗಳನ್ನು ಇಡಲಾಗಿರುವ ಭದ್ರತಾ ಕೊಠಡಿಗಳಿಗೂ ಅವರದೇ ಕಾವಲಿದೆ. ಅವರೊಂದಿಗೆ, ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದರು.

ವಿಶೇಷ ಸಂಚಾರ:

‘ಮತ ಎಣಿಕೆಯ ದಿನ ಎಣಿಕೆ ಕೇಂದ್ರದಲ್ಲಷ್ಟೇ ಜಿಲ್ಲೆಯ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲೂ ಭದ್ರತೆ ಕಲ್ಪಿಸಬೇಕು ಎಂದು ಆಯೋಗ ಸೂಚಿಸಿರುವುದರಿಂದ, ವಿಶೇಷ ಸಂಚಾರ ಮತ್ತು ಪಹರೆ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲ ಒಂಭತ್ತು ಕ್ಷೇತ್ರಗಳ ಕೇಂದ್ರ ಸ್ಥಾನದಲ್ಲಿ ರಾಜ್ಯ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದರು.

‘ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳದ ಎಲ್ಲ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಹೊರಗಿನ ರಾಜ್ಯಗಳ ಪೊಲೀಸರ ನೆರವನ್ನೂ ಕೋರಲಾಗಿದೆ. ಪ್ರತಿ ಕ್ಷೇತ್ರದ ಎಣಿಕೆ ಕೇಂದ್ರಕ್ಕೆ ಒಬ್ಬ ಡಿವೈಎಸ್ಪಿಯನ್ನು ನಿಯೋಜಿಸಲಾಗುವುದು. ಒಟ್ಟಾರೆ 1600 ಸಿಬ್ಬಂದಿ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದರು. ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಇದ್ದರು.

ಎಣಿಕೆ ಕೇಂದ್ರದಲ್ಲಿ ಕ್ಯಾಮೆರಾ ಅಳವಡಿಕೆ

ಬಳ್ಳಾರಿ: ‘ಪ್ರತಿ ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಎರಡು ಟೇಬಲ್‌ಗಳ ಚಟುವಟಿಕೆಗಳ ದಾಖಲೀಕರಣಕ್ಕೆ ಒಂದು ಸಿಸಿಟಿವಿ ಕ್ಯಾಮೆರಾದಂತೆ ಒಟ್ಟು 63 ಕ್ಯಾಮರಾಗಳನ್ನು ಅಳವಡಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ತಿಳಿಸಿದರು.

‘ಬೆಳಿಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದ್ದು, ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಸಲಾಗುವುದು. ಎಣಿಕೆ ಪ್ರಕ್ರಿಯೆಯ ಕೊನೆಯ ಸುತ್ತಿಗೆ ಮುಂಚೆಯೂ ಒಮ್ಮೆ ಅಂಚೆ ಮತಪತ್ರಗಳ ಎಣಿಕೆ ಮಾಡಲಾಗುವುದು’

ಎಂದರು.

‘14ರಿಂದ 18 ಸುತ್ತು ಮತ ಎಣಿಕೆ ನಡೆಯಬಹುದು. ಮಧ್ಯಾಹ್ನದ ವೇಳೆ ಫಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಖಚಿತವಾಗಿ ಸಮಯವನ್ನು ಹೇಳಲಾಗುವುದಿಲ್ಲ’ ಎಂದರು.

‘ಜಿಲ್ಲೆಯಾದ್ಯಂತ ನಾಳೆ ನಿಷೇಧಾಜ್ಞೆ ಜಾರಿ’

ಬಳ್ಳಾರಿ: ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿರುವ ಮೇ.15ರಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಡಾ.ವಿ.ರಾಮಪ್ರಸಾದ್‌ ತಿಳಿಸಿದರು. ‘ಮತ ಎಣಿಕೆ ಸಂದರ್ಭದಲ್ಲಿ ಮತ್ತು ಫಲಿತಾಂಶ ಘೋಷಣೆ ಬಳಿಕ ವಿಜಯೋತ್ಸವ, ಮೆರವಣಿಗೆ, ಸಭೆ ಮಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 15ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು’ ಎಂದರು.

**

ಮತ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಬಿಗಿ ಭದ್ರತೆ ನಡುವೆ ಮತ ಎಣಿಕೆ ನಡೆಯಲಿದೆ

-  ಡಾ.ವಿ.ರಾಮಪ್ರಸಾದ್‌ ಮನೋಹರ್‌, ಜಿಲ್ಲಾ ಚುನಾವಣಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry