ದಣಿವು ಮರೆತು.., ಆಪ್ತರಲಿ ಬೆರೆತು...

7
ಚುನಾವಣಾ ಕಣದ ಪ್ರಮುಖರ ದಿನಚರಿಯ ಇಣುಕು ನೋಟ

ದಣಿವು ಮರೆತು.., ಆಪ್ತರಲಿ ಬೆರೆತು...

Published:
Updated:
ದಣಿವು ಮರೆತು.., ಆಪ್ತರಲಿ ಬೆರೆತು...

ಚಿಕ್ಕಬಳ್ಳಾಪುರ: ದಣಿವರಿಯದೆ ತಿರುಗಿದ ಆ ದೇಹಗಳಿಗೆ ಬಾನ ಮುಸುಕು ಸರಿದು ದಿನಕರನ ದರ್ಶನವಾದರೂ ನಿದ್ರಾ ದೇವಿಯ ಆಲಿಂಗನ ಬಿಡಿಸಿ

ಕೊಂಡು ಮೇಲೇಳಲಾಗದ ಸುಸ್ತು. ಕಿಟಕಿಯ ತಂಗಾಳಿಗೆ ಮುಖವೊಡ್ಡಿ ಮಲಗಿದವರಿಗೆ ದಿಂಬು ಬಿಟ್ಟು ಏಳಲಾಗದ ಆಯಾಸ. ಜೊಂಪು ನಿದ್ದೆಯಲಿ ಅದ್ದಿ ತೆಗೆದಂತಹ ಅರೆ ಬೀರಿದ ಕಣ್ಣಿಗೆ ಪ್ರಖರ ಬೆಳಕು ಗೋಚರಿಸಿದರೂ ಎದ್ದು ಸಿದ್ಧವಾಗಲು ಒಲ್ಲದ ಮನಸು.

ವಿಧಾನಸಭೆ ಚುನಾವಣೆಗಾಗಿ ಒಂದು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಡೆಬಿಡದೆ ಕ್ಷೇತ್ರದ ಸುತ್ತಾಡಿ ಬಳಲಿದ ಸ್ಪರ್ಧಾ ಕಣದ ಪ್ರಮುಖ ಬಹುತೇಕ ಹುರಿಯಾಳುಗಳ ಮನೆಯಲ್ಲಿ ಭಾನುವಾರ ದಕ್ಕಿದ ಚಿತ್ರಣವಿದು.

ಸಾಮಾನ್ಯ ದಿನಗಳಲ್ಲಿ ತಮ್ಮದೇ ಆದ ಜೀವನಶೈಲಿ ರೂಢಿಸಿಕೊಂಡವರು ಚುನಾವಣೆ ಎಂಬ ‘ಸಂತೆ’ ಆರಂಭವಾ ಗುತ್ತಿದ್ದಂತೆ ಅದನ್ನೆಲ್ಲ ಬದಿಗೊತ್ತಿ, ಮನೆ, ಮಠ, ಮಕ್ಕಳನ್ನು ಮರೆತವರ ರೀತಿ ತಿರು, ತಿರುಗಿ ಬಳಲಿದರೂ ಆಪ್ತರೆದುರು ತೋರಿ ಸಿಕೊಳ್ಳದೆ ನಗುಮೊಗದ ಮುಖ ವಾಡ ತೊಟ್ಟು ಓಡಾಡಿದ್ದೇ ಹೆಚ್ಚು.

ಚುನಾವಣಾ ಕಣದಲ್ಲಿ ‘ಪ್ರತಿಷ್ಠೆ’ಯನ್ನು ಪಣಕ್ಕಿಟ್ಟು ಮತದಾರ ಪ್ರಭುವಿನ ಮನವೊಲಿಕೆಗೆ ಹಳ್ಳಿ, ಪಟ್ಟಣ, ನಗರದ ಗಲ್ಲಿಗಲ್ಲಿಗಳಲ್ಲಿ ತಂಡ ಕಟ್ಟಿಕೊಂಡು ಬಿರು ಬಿಸಿಲಿನಲ್ಲಿ ಅಲೆದಾಡಿ ಬಸವಳಿದವರು, ಇದೀಗ ತಲೆಭಾರ ಇಳಿಸಿಕೊಂಡು ವಿರಾಮ ಪಡೆದು ವಿಶ್ರಮಿಸಿಕೊಳುತ್ತಿದ್ದಾರೆ. ಅವರಲ್ಲಿಯೇ ಕೆಲವರು ಆಪ್ತರೊಂದಿಗೆ ಸೋಲು, ಗೆಲುವಿನ ಲೆಕ್ಕಾಚಾರ ತಾಳೆ ಹಾಕುತ್ತಿದ್ದಾರೆ.

ಅನೇಕರು ಮನೆಯಿಂದ ಆಚೆಗೆ ಬರದೆ ವಿಶ್ರಾಂತಿಗೆ ಮೊರೆ ಹೋದರೆ ಅನೇಕರು ಆಯಾಸದ ನಡುವೆಯೂ ತಮ್ಮ ನಿತ್ಯಕರ್ಮಗಳನ್ನು ಪೂರೈಸಿ ತಮ್ಮ ವೃತ್ತಿ, ಪ್ರವೃತ್ತಿಯತ್ತ ಸಹ ದೃಷ್ಟಿ ನೆಟ್ಟರು. ಭಾನುವಾರ ಪ್ರಮುಖ ಅಭ್ಯರ್ಥಿಗಳ ಪೈಕಿ ಯಾರ ದಿನಚರಿ ಹೇಗಿತ್ತು? ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು..

ಮಕ್ಕಳೊಂದಿಗೆ ಆಡಿದ ಸುಧಾಕರ್: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ಕೆ.ಸುಧಾಕರ್ ಅವರು ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಯಲ್ಲಿ ಮಧ್ಯಾಹ್ನದ ವರೆಗೆ ತಮ್ಮ ಮೂರು ಮಕ್ಕಳೊಂದಿಗೆ ಬೆರೆತು ಚುನಾವಣಾ ಆಯಾಸ ಕಳೆದುಕೊಂಡರು.

ಚುನಾವಣೆ ಪ್ರಚಾರಕ್ಕಾಗಿ ಸಿಕ್ಕಾಪಟ್ಟೆ ತಿರುಗಾಡಿ ಸುಸ್ತುಗೊಂಡಿದ್ದ ಅವರು ನಿತ್ಯಕ್ಕಿಂತ ತುಸು ತಡವಾಗಿ ಎದ್ದು, ನೋವು ಬಂದ ಮೈಗೆ ಎಣ್ಣೆ ಮಸಾಜ್ ಮಾಡಿಸಿಕೊಂಡು ಸುಡು ಸುಡು ನೀರಿನಲ್ಲಿ ಮಿಂದು ದಣಿದ ಮೈಮನಗಳನ್ನು ಹಗುರ ಮಾಡಿಕೊಂಡರು. ಬಳಿಕ ಮಕ್ಕಳೊಂದಿಗೆ ಬೆರೆತು, ಹರಟುತ್ತ ಅವರ ಮಾತಿಗೆ ಕಿವಿಯಾಗಿ, ಅಪ್ಪನ ಮಮತೆ ತೋರಿದರು. ಅದರ ನಡುವೆಯೇ ಸ್ವಲ್ಪ ಹೊತ್ತು ಓದಿಗೆ ಪುಸ್ತಕವೊಂದನ್ನು ಕೈಗೆತ್ತಿಕೊಂಡಿದ್ದರು.

ಸಾಮಾನ್ಯ ದಿನಗಳಲ್ಲಿ ಸುಧಾಕರ್ ಅವರು ಪ್ರತಿ ದಿನ ಬೆಳಿಗ್ಗೆ 5ಕ್ಕೆ ಎದ್ದು ಮನೆಯಲ್ಲಿಯೇ ಇರುವ ಜೀಮ್‌ನಲ್ಲಿ ಕೆಲ ಹೊತ್ತು ಬೆವರಿಳಿಸಿ, ಸ್ವಲ್ಪ ಹೊತ್ತು ಯೋಗ, ಪ್ರಾಣಾಯಾಮ ಮಾಡುತ್ತಾರೆ. ಬಳಿಕ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿ, ಸ್ನಾನ ಮುಗಿಸಿ ಬಳಿಕ ಪೂಜೆಯಲ್ಲಿ ತೊಡಗುತ್ತಾರೆ.

ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಅನುಯಾಯಿಯಾದ ಶಾಸಕರು ಅವರಿಂದ ದೀಕ್ಷೆ ಪಡೆದು, ಗುರುಗಳು ಬೋಧಿಸಿದ ಮಂತ್ರವನ್ನು ನಿತ್ಯವೂ ತಪ್ಪದೆ ಪಠಿಸುತ್ತಾರೆ.

ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 5ಕ್ಕೆ ಏಳುವ ಸುಧಾಕರ್ ಅವರು ರಾತ್ರಿ 11ರ ವರೆಗೂ ಎಡೆಬಿಡದೆ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಸದಾ ಚಟುವಟಿಕೆಯಿಂದ ಇರುವುದಾಗಿ ಹೇಳುತ್ತಾರೆ.

ನಿತ್ಯ ಮನೆ ಬಾಗಿಲಿಗೆ ಬರುವ ಜನರ ಕಷ್ಟಸುಖಗಳ ವಿಚಾರಣೆ, ಕ್ಷೇತ್ರದ ಕೆಲಸಗಳು, ಸಭೆ, ಕ್ಷೇತ್ರ ವೀಕ್ಷಣೆ, ವಿಧಾನಸೌಧದಲ್ಲಿರುವ ವಿವಿಧ ಇಲಾಖೆಗಳ ಕಚೇರಿಗೆ ಭೇಟಿ, ಕಾಲೇಜು, ಟ್ರಸ್ಟ್, ಉದ್ಯಮ, ಅಧಿವೇಶನ, ವಿಶೇಷ ಸಭೆ.. ಹೀಗೆ ದಿನವೀಡಿ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಆದರೆ ಅವರ ಮನೆಯಲ್ಲಿ ಈ ಭಾನುವಾರ ಎಂದಿನಂತಿರದೆ ತುಸು ಭಿನ್ನವಾಗಿತ್ತು. ಸುಮಾರು ತಿಂಗಳಿಂದ ತಲೆಯಲ್ಲಿ ಮನೆ ಮಾಡಿದ್ದ ಒತ್ತಡ ತುಸು ದೂರವಾಗಿ ಮನೆಯಲ್ಲಿ ಸಂತಸ ಮೂಡಿಸಿತ್ತು. ಪುತ್ರಿ ಸ್ವಾನಿ, ಪುತ್ರರಾದ ಸಮನ್ಯು, ಪ್ರದ್ಯುನ್ ಅವರೊಂದಿಗೆ ಸುಧಾಕರ್ ಅವರು ಸೈಕ್ಲಿಂಗ್ ಮಾಡಿ ಮಕ್ಕಳ ರಜೆ ಮೋಜಿನ ಖುಷಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದರು.

‘ಸುಮಾರು ಎರಡು ತಿಂಗಳಿಂದ ಚುನಾವಣೆಗಾಗಿ ತಿರುಗಾಡಿ ಬಹಳ ಸುಸ್ತಾಗಿ ಹೋಗಿತ್ತು. ನನ್ನ ಮಕ್ಕಳನ್ನು ಸರಿಯಾಗಿ ನೋಡದೇ ಸುಮಾರು ಒಂದು ತಿಂಗಳೇ ಕಳೆದಿತ್ತು. ಹೀಗಾಗಿ ಇವತ್ತು ಮಧ್ಯಾಹ್ನದ ವರೆಗೆ ಅವರಿಗಾಗಿ ಸಮಯ ಮೀಸಲಿಡುವೆ. ಬಳಿಕ ಮುಖ್ಯಮಂತ್ರಿ ಅವರ ಗೃಹ ನಿವಾಸಕ್ಕೆ ತೆರಳಿ ರಾಜಕೀಯ ವಿದ್ಯಮಾನ ಚರ್ಚಿಸುತ್ತೇನೆ’ ಎಂದು ಸುಧಾಕರ್ ತಿಳಿಸಿದರು.

ದಣಿವು ಮರೆತು.., ಆಪ್ತರಲಿ ಬೆರೆತು...

ಚಿಕ್ಕಬಳ್ಳಾಪುರ:
 ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರು ಭಾನುವಾರ ಆಯಾಸದ ಕಾರಣಕ್ಕೆ ನಿತ್ಯಕ್ಕಿಂತ ಸುಮಾರು ಒಂದೂವರೆ ಗಂಟೆ ತಡವಾಗಿ ಎದ್ದರೂ ವಿಶ್ರಾಂತಿ ಪಡೆಯಲು ಇಚ್ಛಿಸಲಿಲ್ಲ. ಬದಲು, ಎಂದಿನಂತೆ ಸಿದ್ಧರಾಗಿ ಕುಪ್ಪಳಿಯ ತಮ್ಮ ಮನೆಯಿಂದ ನಗರದ ಬಿ.ಬಿ.ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ಬಂದು ಕುಳಿತಿದ್ದರು.

ಮತದಾನದ ದಿನ ಅವರ ಆರೋಗ್ಯ ಕೆಟ್ಟಿದೆ ಎಂದು ಕ್ಷೇತ್ರದಲ್ಲಿ ಹಬ್ಬಿದ ವದಂತಿಗೆ ಗಾಬರಿಗೊಂಡಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರ ದುಗುಡ ದೂರ ಮಾಡುವ ಸಲುವಾಗಿ ಗೌಡರು ಬಳಲಿಕೆ ಮರೆತು ಕಚೇರಿಗೆ ಬಂದಿದ್ದರು.

ಸಾಮಾನ್ಯವಾಗಿ ಬೆಳಿಗ್ಗೆ 5.30ಕ್ಕೆ ಎದ್ದು ಮುಖ ತೊಳೆದು ಒಂದು ಕಪ್ ಗ್ರಿನ್ ಟೀ ಕುಡಿದು, ತೋಟದಲ್ಲಿಯೇ ವಾಯು ವಿಹಾರ ನಡೆಸುವ ಗೌಡರು, ಬಳಿಕ ಸ್ನಾನ, ಪೂಜೆ ಮುಗಿಸಿ ನಗರದ ಹೊರವಲಯದ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ವೀರಾಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ.

ಭಾನುವಾರ ಅವರ ದಿನಚರಿ ಎಂದಿನಂತಿರಲಿಲ್ಲ. ನಿತ್ಯ 5.30ಕ್ಕೆ ಏಳುವವರು ಚುನಾವಣೆ ಒತ್ತಡದಲ್ಲಿ ರಾತ್ರಿ ತಡವಾಗಿ ಮಲಗಿದ ಕಾರಣ ಬೆಳಿಗ್ಗೆ 7ಕ್ಕೆ ಎದ್ದರು. ನಿತ್ಯ ಕರ್ಮ ಮುಗಿಸುವ ಜತೆಗೆ ಹರ್ಷೋದಯ ಕಲ್ಯಾಣ ಮಂಟಪದಲ್ಲಿದ್ದ ಆತ್ಮೀಯರೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದರು.

ಬಳಿಕ ಬಿ.ಬಿ.ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ಬಂದು ಕುಳಿತರು. ಅಲ್ಲಿಂದ ಅವರ ಮತ್ತು ಪಕ್ಷದ ಕಾರ್ಯಕರ್ತರು, ಮುಖಂಡರ ನಡುವೆ ಉಭಯಕುಶಲೋಪರಿ ಮಧ್ಯಾಹ್ನದವರೆಗೆ ಮುಂದುವರಿದತ್ತು. ಸಂಜೆ ವೇಳೆಗೆ ಮನೆಗೆ ಮರಳಿ ವಿಶ್ರಾಂತಿ ಪಡೆದರು.

ಗಾಯದಿಂದ ಬಳಲಿದ ನವೀನ್ ಕಿರಣ್

ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿದ ಮುಖಂಡ ಕೆ.ವಿ.ನವೀನ್ ಕಿರಣ್ ಅವರು ತೀವ್ರ ಬಳಲಿಕೆ ಮತ್ತು ಆರೋಗ್ಯ ಸಮಸ್ಯೆಯಿಂದ ಭಾನುವಾರ ಮನೆಯಿಂದಾಚೆ ಹೆಜ್ಜೆ ಇಡಲಿಲ್ಲ.

ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿರುವ ನವೀನ್ ಕಿರಣ್ ಅವರು ಕೃತಕ ಕಾಲು ಅಳವಡಿಸಿಕೊಂಡಿದ್ದಾರೆ. ಸಾಮಾನ್ಯರಂತೆ ನಡೆದಾಡಲು ತುಸು ಕಷ್ಟಪಡುವ ನವೀನ್ ಅವರು, ಕಳೆದ ಕೆಲ ತಿಂಗಳಿಂದ ಚುನಾವಣೆ ಕಾರಣಕ್ಕಾಗಿಯೇ ದಣಿವರಿಯದೆ ಎರಡು ಬಾರಿ ಇಡೀ ಕ್ಷೇತ್ರ ಸುತ್ತು ಹಾಕಿದ್ದಾರೆ.

ಇತ್ತೀಚೆಗೆ ಪ್ರಚಾರ ಕಾರ್ಯದ ಗದ್ದಲದ ನಡುವೆ ಅವರು ಬಹಳ ದಿನಗಳಿಂದ ಬಳಸುತ್ತಿದ್ದ ಕೃತಕ ಕಾಲಿಗೆ ಹಾನಿಯಾದ ಕಾರಣ ಅವರು ಹೊಸ ಕಾಲು ಅಳವಡಿಸಿಕೊಂಡಿದ್ದರು. ಅಂದಿನಿಂದ ಹೆಚ್ಚು ನಡೆದಾಡಿಗಾಗಲೆಲ್ಲ ಹೊಸ ಕೃತಕ ಕಾಲು ಮುರಿದ ಕಾಲಿಗೆ ಉಜ್ಜಿ, ಚಿಕ್ಕದಾಗಿ ರಕ್ತಸ್ರಾವ ಕಾಣಿಸಿಕೊಂಡು ಗಾಯವಾಗುತ್ತ ಬಂದಿತ್ತು.

ಚುನಾವಣೆಯ ಬಿಡುವಿಲ್ಲದ ಓಡಾಟದಲ್ಲಿ ಅಷ್ಟಾಗಿ ಕಾಲಿನ ಗಾಯದತ್ತ ಗಮನ ಹರಿಸದ ನವೀನ್ ಅವರು ಮತದಾನ ಮುಗಿಸಿ ತಡರಾತ್ರಿ ಮನೆ ಸೇರಿದ್ದರು. ನಿತ್ಯ ಬೆಳಿಗ್ಗೆ ಬೆಳಿಗ್ಗೆ 5ಕ್ಕೆ ಎದ್ದು ನಿತ್ಯಕರ್ಮಗಳಿಗೆ ಅಣಿಗೊಳ್ಳುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ತುಂಬಾ ಹೊತ್ತಾದರೂ ಮಲಗುವ ಕೊಣೆಯಿಂದ ಆಚೆಗೆ ಬಂದಿರಲಿಲ್ಲ. ಆಯಾಸದ ಜತೆಗೆ ಕಾಲಿನ ನೋವು ಕಾಣಿಸಿಕೊಂಡ ಕಾರಣ ಅವರು ದಿನವೀಡಿ ಮನೆಯಲ್ಲೇ ಕಾಲಕಳೆದರು ಎಂದು ಅವರ ಆಪ್ತರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry