ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿಯಲ್ಲಿ ಹುರಿಯಾಳುಗಳು

ಮತದಾನದ ನಂತರ ಚಾಮರಾಜನಗರ ಕ್ಷೇತ್ರ ಬಿಟ್ಟು ಹೋದ ಎಲ್ಲ ಪ್ರಮುಖ ಅಭ್ಯರ್ಥಿಗಳು
Last Updated 14 ಮೇ 2018, 12:05 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದೊಂದು ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಎಲ್ಲ ಪ್ರಮುಖ ಅಭ್ಯರ್ಥಿಗಳು ಮತದಾನವಾದ ಕೂಡಲೇ ಕ್ಷೇತ್ರ ಬಿಟ್ಟು ಹೋಗಿದ್ದಾರೆ.

ಹೌದು, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಕೊಳ್ಳೇಗಾಲ ಕ್ಷೇತ್ರದಲ್ಲಿ ವಾಸವಿದ್ದರೆ, ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮೈಸೂರಿನಲ್ಲಿ ವಾಸವಿದ್ದಾರೆ. ಇನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಇದ್ದಾರೆ. ಇವೆರೆಲ್ಲರೂ ಶನಿವಾರ ಮತದಾನ ಮುಗಿಯುತ್ತಲೇ ತಮ್ಮ ತಮ್ಮ ನಿವಾಸದತ್ತ ಮುಖ ಮಾಡಿದ್ದಾರೆ.

ತೋಟಗಳಲ್ಲಿ ವಿಹಾರ

ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿರುವ ತಮ್ಮ ತೋಟದಲ್ಲಿ ವಿಹರಿಸಿದರು. ಅಡಿಕೆ, ತೆಂಗು, ಬಾಳೆಯ ತೋಟಗಳಲ್ಲಿ ಸುತ್ತಾಡಿ, ಎಳನೀರು ಕುಡಿದು ವಿಶ್ರಾಂತಿ ಪಡೆದರು. ನಂತರ, ಗ್ರಾಮದಲ್ಲಿನ ತಮ್ಮನಿವಾಸಕ್ಕೆ ತೆರಳಿದ ಅವರು, ಅಲ್ಲಿಗೆ ಬಂದ ಮುಖಂಡರ ಜತೆ ಸೋಲು–ಗೆಲುವಿನ ಲೆಕ್ಕಾಚಾರ ಮಾಡತೊಡಗಿದರು.

ಯಾವ ಯಾವ ಮತಗಟ್ಟೆಯಲ್ಲಿ ನಮ್ಮ ಪರ ಮತ ಬಂದಿರಬಹುದು, ಯಾವ ಮತಗಟ್ಟೆಯಲ್ಲಿ ಬಿಜೆಪಿಗೆ ಮತ ಹೋಗಿರಬಹುದು, ಗೆಲುವಿನ ಅಂತರ ಏನಿರಬಹುದು ಎಂಬ ಚರ್ಚೆಯಲ್ಲಿ ಅವರು ತೊಡಗಿದ್ದರು.

ಮದುವೆ ಕಾರ್ಯಕ್ರಮಗಳಲ್ಲಿ ಭಾಗಿ

ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮೈಸೂರಿನ ತಮ್ಮ ನಿವಾಸಕ್ಕೆ ಶನಿವಾರ ರಾತ್ರಿ 11ಕ್ಕೆ ಮುಟ್ಟಿದರು. ಬೆಳಿಗ್ಗೆ ತಡವಾಗಿ ಎದ್ದ ಅವರು ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್

ಮತದಾನ ಮುಗಿಯುತ್ತಲೇ ಮೈಸೂರಿಗೆ ತೆರಳಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ರಾತ್ರಿ ಅಲ್ಲಿಯೇ ತಂಗಿದ್ದರು. ಭಾನುವಾರ ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದ ಅವರು ಎಂದಿನಂತೆ ಯೋಗಾಭ್ಯಾಸದಲ್ಲಿ ನಿರತರಾದರು. ನಂತರ, ಬೆಂಗಳೂರಿನ ತಮ್ಮನಿವಾಸಕ್ಕೆ ತೆರಳಿ ಅಲ್ಲಿ ವಿಶ್ರಾಂತಿ ಪಡೆದರು. ತಮ್ಮಆಪ್ತರೊಬ್ಬರ ಯೋಗಕ್ಷೇಮ ವಿಚಾರಿಸಲು ಮಲ್ಲಿಗೆ ಆಸ್ಪತ್ರೆಗೆ ಹೋಗಿ ಬಂದರು.

ಮತದಾರರ ಭೇಟಿಯಲ್ಲಿ ಮಗ್ನರಾದ– ಎನ್.ಮಹೇಶ್

ಕೊಳ್ಳೇಗಾಲ: ಕೊಳ್ಳೇಗಾಲದ ಬಿಎಸ್‌ಪಿ–ಜೆಡಿಎಸ್ ಅಭ್ಯರ್ಥಿ ಎನ್.ಮಹೇಶ್ ಮತದಾನ ಮುಗಿದ ಬಳಿಕ ಮತದಾರರನ್ನು ಭೇಟಿ ಮಾಡಿ ಮಾತುಕತೆಯಲ್ಲಿ ತೊಡಗಿದರು. ‘ಈ ಬಾರಿ ಜನರಿಂದ ನನಗೆ ಬಾರಿ ಬೆಂಬಲ ಸಿಕ್ಕಿದೆ ನಾನು ಗೆಲುವುದು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ‘ಚುನಾವಣೆ ಮುಗಿದು ವಿಶ್ರಾಂತಿ ಪಡೆಯದೆ ನಾನು ಬೆಂಬಲಿಗರೊಂದಿಗೆ ಭೀಮನಗರ, ಹೊಸ ಅಣ್ಣಗಳ್ಳಿ, ಬೆಂಡರಹಳ್ಳಿ ಹಾಗೂ ಇತರೆಡೆಗೆ ಹೋಗಿ ವೀಕ್ಷಣೆ ಮಾಡುತ್ತೇನೆ. ಕಳೆದ 3 ಚುನಾವಣೆಗಳಲ್ಲಿ ಸೋತಿದ್ದು ಈ ಬಾರಿ ನನ್ನನ್ನು ಕ್ಷೇತ್ರದ ಜನರು ಶಾಸಕರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ನಾನು ಚುನಾವಣೆಯಲ್ಲಿ ಗೆದ್ದರೂ ಅಥವಾ ಸೋತರೂ ಕ್ಷೇತ್ರದ ಜನರನ್ನು ಕೈ ಬಿಡುವುದಿಲ್ಲ. ನಾನು ಜನರ ಮಧ್ಯದಿಂದ ಬಂದವನು. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನಾನು ಯಾವಾಗಲೂ ಜನರ ಮಧ್ಯ ಇರಲು ಇಚ್ಛಿಸುತ್ತೇನೆ’ ಎಂದರು. ಸಮಾಲೋಚನೆಯಲ್ಲಿ ತೊಡಗಿದ ಎ.ಆರ್.ಕೃಷ್ಣಮೂರ್ತಿ

ಮತದಾನ ಮುಗಿದ ಬಳಿಕ ಕೊಳ್ಳೇಗಾಲ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ, ವಿಶ್ರಾಂತಿ ಪಡೆದರು. ನಂತರ, ಕಾರ್ಯಕರ್ತರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ನಿವಾಸದಲ್ಲಿ ಕಾರ್ಯಕರ್ತರ ಜೊತೆಯ ಮಾತುಕತೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು ಒಂದು ಮತದಿಂದ ಸೋಲು ಕಂಡವನು. ನನಗೆ ಅಂತರದ ಮತಗಳು ಮುಖ್ಯವಲ್ಲ. ನಾಳೆ ಚುನಾವಣೆಯಲ್ಲಿ ಸಿಗುವ ಗೆಲುವು ಮುಖ್ಯ’ ಎಂದು ತಿಳಿಸಿದರು. ಬಿಜೆಪಿ ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ ಬೆಂಗಳೂರಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT