ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರುಗದ್ದೆಯಂತಾದ ಸಂತೆ ಮೈದಾನ

ಬಾಳೆಹೊನ್ನೂರು: ಮೂಲ ಸ್ಥಾನಕ್ಕೆ ಸಂತೆ ವರ್ಗಾಹಿಸಲು ಆಗ್ರಹ
Last Updated 14 ಮೇ 2018, 12:10 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಕಲಾರಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಂತೆ ವ್ಯಾಪಾರದ ವೇಳೆ ಸುರಿದ ಭಾರಿ ಮಳೆಯಿಂದಾಗಿ ಅವ್ಯವಸ್ಥೆ ಉಂಟಾಗಿ, ವ್ಯಾಪಾರಕ್ಕೆ ಬಂದಿದ್ದ ಹಲವು ಗ್ರಾಹಕರು ಕೆಸರಿನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ಘಟನೆ ನಡೆದಿದೆ.

ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾನುವಾರದ ಸಂತೆ ವ್ಯಾಪಾರ ಈ ಹಿಂದೆ ಕೆಳಗಿನ ಪೇಟೆಯ ಬೈಪಾಸ್ ರಸ್ತೆಯಲ್ಲಿ ನಡೆಯುತ್ತಿತ್ತು. ಅಲ್ಲಿನ ರಸ್ತೆಗೆ ಡಾಂಬರು ಹಾಕುವ ಉದ್ದೇಶದಿಂದ ಭಾನವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಲಾರಂಗ ಕ್ರೀಡಾಂಗಣಕ್ಕೆ ವರ್ಗಾಯಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಬೈಪಾಸ್ ರಸ್ತೆಯ ಡಾಂಬರು ಕಾಮಗಾರಿ ಮುಗಿದು ತಿಂಗಳು ಕಳೆದರೂ ಗ್ರಾಮ ಪಂಚಾಯಿತಿ ಕಲಾರಂಗ ಕ್ರೀಡಾಂಣದಿಂದ ಮೂಲ ಸ್ಥಾನಕ್ಕೆ ಸಂತೆಯನ್ನು ವರ್ಗಾಯಿಸುವಲ್ಲಿ ವಿಫಲವಾಗಿದೆ ಎಂದು ಗ್ರಾಹಕರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದಾರೆ. ಮಳೆಯ ಕಾರಣ ಇಡೀ ಕಲಾರಂಗ ಕ್ರೀಡಾಂಗಣ ಕೆಸರು ಗದ್ದೆಯಂತಾಗಿದ್ದು, ಬೀಸಿದ ಬಾರಿ ಗಾಳಿಗೆ ಹಲವು ವ್ಯಾಪಾರಿಗಳು ಅಳವಡಿಸಿದ್ದ ಟೆಂಟ್ ಗಳು ಹಾರಿ ಹೋಗಿದೆ. ಗ್ರಾಮೀಣ ಭಾಗದಿಂದ ಖರೀದಿಗೆ ಬಂದಿದ್ದ ಮೂವರು ಮಹಿಳೆಯರು ಕೆಸರಿನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಸ್ಥಳೀಯರು ಅವರಿಗೆ ಚಿಕಿತ್ಸೆ ನೀಡಿ ಕಳುಹಿಸಿದರು.

ಬಿ.ಕಣಬೂರು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಮತ್ತು ವೈಫಲ್ಯದಿಂದಾಗಿ ಭಾನುವಾರದ ಸಂತೆ ಅವ್ಯವಸ್ಥೆಯಿಂದ ಕೂಡಿದೆ. ಪಟ್ಟಣದ ಸುತ್ತಮುತ್ತಲಿಂದ ಬರುವ ಸಾವಿರಾರು ಗ್ರಾಹಕರು ಮಳೆಯ ವೇಳೆ ಕೆಸರಿನಲ್ಲಿ ನಿಂತು ವ್ಯವಹರಿಸಬೇಕಾಗಿದೆ. ವ್ಯಾಪಾರಿಗಳಿಗೂ ಇದರಿಂದ ನಷ್ಟ ಉಂಟಾಗುತ್ತಿದ್ದು ಪಂಚಾಯಿತಿ ಗ್ರಾಹಕರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಭಾನುವಾರ ಆರು ಜನ ಮಹಿಳೆಯರು ಕೆಸರಿನಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಕಳುಹಿಸಿದ್ದೇವೆ ಎಂದು ಮುಖಂಡ ಜಮೀರ್ ಆಹಮ್ಮದ್ ದೂರಿದ್ದಾರೆ.

ಮಾರುಕಟ್ಟೆ ಬಳಿ ಎಪಿಎಂಸಿ ವತಿಯಿಂದ ಸುಮಾರು ₹ 79 ಲಕ್ಷ ವ್ಯಯಿಸಿ ಸಂತೆ ಕಟ್ಟೆಗಳನ್ನು ನಿರ್ಮಿಸಿದ್ದರೂ ಅವುಗಳನ್ನು ಉಪಯೋಗಿಸದೆ ಪಾಳು ಬಿದ್ದಿದೆ. ಸಂತೆಕಟ್ಟೆಗೆ ತೆರಳಲು ಗ್ರಾಮ ಪಂಚಾಯಿತಿ ಕನಿಷ್ಟ ಮೆಟ್ಟಿಲುಗಳನ್ನೂ ನಿರ್ಮಿಸದೆ ನಿರ್ಲಕ್ಷ್ಯ ತೋರಿದೆ. ಸಂತೆ ಸ್ಥಳಾಂತರಿಸಿದ ಕಾರಣ ಕೆಳಗಿನ ಪೇಟೆಯ ವಹಿವಾಟು ಕುಸಿದಿದ್ದು ತಕ್ಷಣ ಸಂತೆ ಮಾರುಕಟ್ಟೆಯನ್ನು ಮೊದಲಿನ ಜಾಗಕ್ಕೆ ಸ್ಥಳಾಂತರಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ ಶಾಫಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ಸಂತೆ ಮಾರುಕಟ್ಟೆಯಲ್ಲಿ ಭಾನುವಾರ ವ್ಯಾಪಾರಿಗಳಿಂದ ನಿಗದಿತ ಶುಲ್ಕ ವಸೂಲಿ ಮಾಡುವ ಹಕ್ಕನ್ನು ಪಂಚಾಯತಿಯಲ್ಲಿ ಟೆಂಡರ್ ಮೂಲಕ ಪಡೆದಿದ್ದೇನೆ. ವಾರ್ಷಿಕ ಸುಮಾರು ₹ 4.75 ಲಕ್ಷ ಪಾವತಿಸಬೇಕಾಗಿದ್ದು ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ವ್ಯಾಪಾರಿಗಳು ಶುಲ್ಕ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬಿ.ಕಣಬೂರು ಗ್ರಾಮ ಪಂಚಾಯಿತಿ ಕೆಸರಿನಲ್ಲಿ ಸಂತೆ ನಡೆಸುವುದನ್ನು ಕೈಬಿಟ್ಟು ಮೊದಲಿನ ಜಾಗದಲ್ಲೇ ನಡೆಸಬೇಕು. ಇಲ್ಲದಿದ್ದಲ್ಲಿ ಪಂಚಾಯಿತಿ ಎದರು ಪ್ರತಿಭಟನೆ ನಡೆಸಲಾಗುವುದು ಎಂದು ಸಂತೆ ಶುಲ್ಕ ವಸೂಲಿಗಾರ ಅಶ್ರಫ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT