ಬೆಟ್ಟಿಂಗ್‌ಗೂ ಮುಂದಾಗಿರುವ ಮುಖಂಡರು

7
ಅಭ್ಯರ್ಥಿಗಳ ಸೋಲು– ಗೆಲುವಿನ ಲೆಕ್ಕಾಚಾರ: ಫಲಿತಾಂಶದತ್ತ ಎಲ್ಲರ ಚಿತ್ತ

ಬೆಟ್ಟಿಂಗ್‌ಗೂ ಮುಂದಾಗಿರುವ ಮುಖಂಡರು

Published:
Updated:

ಮೂಡಿಗೆರೆ: ಒಂದೂವರೆ ತಿಂಗಳಿನಿಂದ ಚುನಾವಣೆ ಬಿಸಿಯಲ್ಲಿ ಮುಳುಗಿರುವ ರಾಜಕೀಯ ಮುಖಂಡರು ಚುನಾವಣೆ ಮುಗಿದರೂ ಮತದಾನದ ಲೆಕ್ಕಾಚಾರದಿಂದ ಹೊರ ಬಂದಿಲ್ಲ.

ಮತದಾನ ನಡೆದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದರೂ, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಯಾರು ಗೆಲ್ಲಬಹುದು, ಎಷ್ಟು ಅಂತರದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕೆಲವು ಮುಖಂಡರಂತೂ ತಮ್ಮ ಪಕ್ಷಕ್ಕೇ ಗೆಲುವು ಶತಃಸಿದ್ಧ ಎಂದು ಹೇಳುತ್ತಿದ್ದು, ಬೆಟ್ಟಿಂಗ್‌ ಕಟ್ಟಲೂ ಮುಂದಾಗುತ್ತಿದ್ದಾರೆ.

2013 ರ ವಿಧಾನಸಭಾ ಚುನಾವಣೆಯಲ್ಲಿ ಶೇ 72.17 ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿ ಮತದಾನದ ಪ್ರಮಾಣ ಶೇ 76.79ಕ್ಕೆ ಹೆಚ್ಚಳವಾಗಿರುವುದು ಕೂಡ ಸೋಲು ಗೆಲುವಿನ ಲೆಕ್ಕಾಚಾರವನ್ನು ಕಗ್ಗಂಟಾಗಿಸಿದೆ. ಈ ಬಾರಿ ಹೋಬಳಿಯ ಲೆಕ್ಕಚಾರ ಮಾತ್ರವಲ್ಲದೇ, ಬೂತ್‌ ಮಟ್ಟದಲ್ಲಿ ಎಷ್ಟು ಮತಗಳು ಚಲಾವಣೆಯಾಗಿವೆ, ಹೆಚ್ಚು ಮತಗಳು ಚಲಾವಣೆಯಾದಲ್ಲಿ ಹಾಗೂ ಕಡಿಮೆ ಮತಗಳು ಚಲಾವಣೆಯಾದ ಬೂತ್‌ಗಳಲ್ಲಿ ಯಾವ ವರ್ಗದವರು ಹೆಚ್ಚಿದ್ದಾರೆ. ಆ ಬೂತ್‌ನಲ್ಲಿ ನಿರ್ಣಾಯಕ ಮತದಾರರು ಯಾರು? ಆ ಬೂತ್‌ನಲ್ಲಿ ನಮ್ಮ ಪಕ್ಷಕ್ಕಿರುವ ಮತಗಳೆಷ್ಟು? ಅನ್ಯ ಪಕ್ಷದವರು ಪಡೆಯುವ ಮತಗಳೆಷ್ಟು? ಪಕ್ಷೇತರರಿಗೆ ಸಿಗುವ ಮತಗಳೆಷ್ಟು ಎಂಬ ಲೆಕ್ಕಾಚಾರ ಬಹಿರಂಗವಾಗಿಯೇ ನಡೆಯುತ್ತಿದ್ದು, ಯಾರೇ ಗೆಲುವು ಪಡೆದರೂ ಕನಿಷ್ಟ ಮತಗಳಿಂದ ಚುನಾಯಿತರಾಗುತ್ತಾರೆ ಎಂಬ ಮಾತು ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ.

ಕ್ಷೇತ್ರದಲ್ಲಿ 1.3 ಲಕ್ಷ ಮತಗಳು ಚಲಾವಣೆಯಾಗಿರುವುದರಿಂದ, ಯಾವ ಅಭ್ಯರ್ಥಿಯು 50 ಸಾವಿರ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆಯುತ್ತಾರೋ ಅದೇ ಅಭ್ಯರ್ಥಿ ಗೆಲುವು ಪಡೆಯುತ್ತಾನೆ ಎಂಬ ಲೆಕ್ಕಾಚಾರದ ಮೂಲಕ ಅಭ್ಯರ್ಥಿಗಳ ಗೆಲುವಿಗೆ 50 ಸಾವಿರ ಮತಗಳನ್ನು ನಿಗದಿ ಪಡಿಸಿ ಚರ್ಚಿಸುತ್ತಿರುವ ಮಾತುಗಳು ಕೇಳಿ ಬರುತ್ತಿವೆ.

ಮತದಾನ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳಿಗೆ ದೊಡ್ಡ ವಿರಾಮ ಸಿಕ್ಕಿದ್ದು, ಭಾನುವಾರ ಅಭ್ಯರ್ಥಿಗಳು ಮಾತ್ರವಲ್ಲದೇ, ಬಹುತೇಕ ಮುಖಂಡರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿದ್ದು, ವಿರಾಮಕ್ಕೆ ಶರಣಾಗಿರುವುದು ಕಂಡು ಬಂದಿತು.

ರಾತ್ರಿ ಸುಮಾರು 3 ಗಂಟೆಯ ವೇಳೆಗೆ ಮತಗಟ್ಟೆಗಳನ್ನು ಗಡಿಭದ್ರತಾ ಪಡೆ ಹಾಗೂ ಪೊಲೀಸರ ಸರ್ಪಗಾವಲಿನಲ್ಲಿ ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದ್ದು, ಇದೇ 15 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆಗೆ ಹೋಗಬೇಕಾದ ಪಕ್ಷದ ಪ್ರತಿನಿಧಿಗಳ ಚರ್ಚೆ ಒಂದೆಡೆಯಾದರೆ, ಅಬ್ಬಾ! ಅಂತೂ ಚುನಾವಣೆ ಮುಗಿಯಿತಲ್ಲ ಎಂಬ ನೆಮ್ಮದಿ ಸರ್ಕಾರಿ ನೌಕರರ ಪಾಲಯದಲ್ಲಿ ಕೇಳಿ ಬರುತ್ತಿದೆ.

ರಜೆಯ ನಡುವೆ ಚುನಾವಣಾ ಕಾರ್ಯಕ್ಕೆ ಬಂದಿದ್ದ ನೌಕರರು, ಭಾನುವಾರ ಮತ್ತೆ ನೆಂಟರಿಷ್ಟರ ಮನೆಗೆ ತೆರಳುತ್ತಿದ್ದರಿಂದ ಭಾನುವಾರವಾದರೂ ಪಟ್ಟಣ ಜನಜಂಗುಳಿಯಿಂದ ಕೂಡಿತ್ತು.

ರಿಲ್ಯಾಕ್ಸ್ ಮೂಡಿನಲ್ಲಿ ಅಭ್ಯರ್ಥಿಗಳು

ಕಡೂರು: ಮತದಾನ ಮುಗಿದಿದೆ. ಅಭ್ಯರ್ಥಿಗಳ ಶ್ರಮಕ್ಕೆ ಮಂಗಳವಾರ ಉತ್ತರ ದೊರೆಯಲಿದೆ. ಕಳೆದೆರಡು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿ ತಿರುಗುತ್ತಿದ್ದ ಅಭ್ಯರ್ಥಿಗಳು ಭಾನುವಾರ ಸ್ವಲ್ಪ ರಿಲಾಕ್ಸ್ ಮೂಡಿನಲ್ಲಿದ್ದರು. ಬಿಜೆಪಿಯ ಬೆಳ್ಳಿಪ್ರಕಾಶ್ ಶನಿವಾರವೇ ಬೆಂಗಳೂರಿಗೆ ತೆರಳಿದ್ದಾರೆ.

ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ ಕಡೂರಿನ ಕೋಟೆಯ ತಮ್ಮ ಸಂಬಂಧಿಕರ ಮನೆಯಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಪತ್ನಿ ನಿರ್ಮಲ ಮತ್ತು ಸಂಬಂಧಿಕರ ಜತೆ ಅರಾಮವಾಗಿ ಕಾಲ ಕಳೆದರು. ದೂರವಾಣಿ ಕರೆಗಳಿಗೆ ಆಪ್ತ ಸಹಾಯಕ ಗಿರೀಶ್ ಉತ್ತರಿಸುತ್ತಿದ್ದರೆ ದತ್ತ ನಿರಾಳವಾಗಿದ್ದರು. ಬಹಳ ದಿನಗಳ ನಂತರ ದತ್ತ ಮನೆಯಲ್ಲಿರುವುದು ಅವರ ಕುಟುಂಬದವರಿಗೆ ಸಂತಸವಾಗಿತ್ತು. ಮಧ್ಯೆ ಮಧ್ಯೆ ಬರುತ್ತಿದ್ದ ಕಾರ್ಯಕರ್ತರೊಡನೆ ಮಾತನಾಡುತ್ತಿದ್ದ ದತ್ತ ಅವರು ಮತ್ತೆ ಕುಟುಂಬದವರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಮಾತ್ರ ಭಾನುವಾರವೂ ಬ್ಯೂಸಿಯಾಗಿದ್ದರು. ಎಂದಿನಂತೆ ಮನೆ ತುಂಬ ಕಾರ್ಯಕರ್ತರ ಪಡೆ. ಮತದಾನ ಎಲ್ಲೆಲ್ಲಿ ಏನೇನಾಯ್ತು ಎಂಬ ಲೆಕ್ಕಾಚಾರವನ್ನು ಅವರು ನೀಡುತ್ತಿದ್ದರೆ, ಆನಂದ್ ಸಹನೆಯಿಂದಲೇ ಅವರೊಡನೆ ಮಾತನಾಡುತ್ತ, ಮಧ್ಯೆ ಮಧ್ಯೆ ಕುಟುಂಬ ಸದಸ್ಯರೊಡನೆ ಮಾತನಾಡುತ್ತ, ಟಿವಿ ಸಮೀಕ್ಷೆಗಳನ್ನು ನೋಡುತ್ತ ಕಾಲಕಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry