ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧುವಲ್ಲ, ಪರಿಸರಸ್ನೇಹಿಯಲ್ಲ: ಪರಿಸರವಾದಿಗಳು

ಹೆಬ್ಬೆ ಜಲಪಾತದಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆ
Last Updated 14 ಮೇ 2018, 12:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಹೆಬ್ಬೆ ಜಲಪಾತದಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆ ಪರಿಸರ ರಕ್ಷಣೆಯ ದೃಷ್ಟಿಯಲ್ಲಿ ಸಾಧುವಲ್ಲ. ಅಣೆಕಟ್ಟೆಗಳ ನಾಲೆಯಿಂದ ನೀರನ್ನು ಹರಿಸಬಹುದು ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಡಿ.ವಿ.ಗಿರೀಶ್‌, ವೈಲ್ಡ್‌ ಕ್ಯಾಟ್–‘ಸಿ’ನ ಶ್ರೀದೇವ್ ಹುಲಿಕೆರೆ ಹಾಗೂ ವನ್ಯಜೀವ ಸಂರಕ್ಷನಾ ಕಾರ್ಯಕರ್ತ ಜಿ.ವೀರೇಶ್‌ ಹೇಳಿದ್ದಾರೆ.

ಪ್ರಮುಖ ಮೂರೂ ಪಕ್ಷಗಳ ಪ್ರಣಾಳಿಕೆಗಳಲ್ಲಿ ಜಿಲ್ಲೆಯ ಪರಿಸರ ರಕ್ಷಣೆ ಕಾಳಜಿ ಇಲ್ಲದಿರುವುದು ವಿಷಾದದ ಸಂಗತಿ. ಈ ಜಿಲ್ಲೆಯನ್ನು ದಕ್ಷಿಣ ಭಾರತದ ಬೆನ್ನುಹುರಿ ಎಂದೇ ಭಾವಿಸಲಾಗಿದೆ. ಪಶ್ಚಿಮಘಟ್ಟದ ತಡಿಯಲ್ಲಿರುವ ಕಾಫಿನಾಡಿನಲ್ಲಿ ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ಯಗಚಿ, ವೇದಾವತಿ ನದಿಗಳು, ಬಹಳಷ್ಟು ಹಳ್ಳ, ಜಲಪಾತಗಳು ಹುಟ್ಟುತ್ತವೆ. ಪಶ್ಚಿಮಘಟ್ಟಕ್ಕೆ ಕುಂದು ಮಾಡಿದರೆ ನದಿ, ತೊರೆಗಳು ಕ್ಷೀಣಿಸುತ್ತವೆ ಅವುಗಳು ದುರ್ಬಲವಾದಂತೆ ಜನರ ಬದುಕು ಶಕ್ತಿಹೀನವಾಗುತ್ತದೆ. ಈಗಾಗಲೇ, ಪಶ್ಚಿಮಘಟ್ಟದ ದಟ್ಟ ಹಸಿರು ಹೊದಿಕೆಗೆ ಕೊಂಚ ಕುಂದು ಉಂಟಾಗಿರುವ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದ್ದಾರೆ.

ಮೂರೂ ಪಕ್ಷಗಳವರೂ ಹೆಬ್ಬೆ ಜಲಪಾತದಿಂದ ಕೆರೆಗಳಿಗೆ ನೀರು ಹರಿಸುವ ಆಲೋಚನೆಯಲ್ಲಿ ತೊಡಗಿದ್ದಾರೆ. ಬಯಲುಸೀಮೆ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಅಗತ್ಯವಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯ. ಆದರೆ ಈ ನೀರಿನ ಮೂಲವನ್ನೆ ನಾಶಮಾಡುವ ಯೋಜನೆಗಳನ್ನು ರೂಪಿಸಿದರೆ ಅದೊಂದು ತಾತ್ಕಾಲಿಕ ಪರಿಹಾರವಾಗುವುದೇ ನೀರಿನ ಬವಣೆ ನೀಗಿಸುವುದಿಲ್ಲ. ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಹೇಳಿದ್ದಾರೆ.

ಹೆಬ್ಬೆ ಜಲಪಾತದಿಂದ ನೀರು ಹರಿಸುವ ಯೋಜನೆ ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಸಾಧುವಲ್ಲವೆಂದು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಬಯಲುಸೀಮೆಗೆ ನೀರು ಹರಿಸಲು ಈ ಯೋಜನೆಗಿಂತ ಹಲವು ಮಾರ್ಗಗಳಿವೆ. ಭದ್ರಾ, ಯಗಚಿ, ಹೇಮಾವತಿ ಆಣೆಕಟ್ಟೆಗಳಿಂದ ಹಾಗೂ ಬಯಲುಸೀಮೆಗೆ ಗ್ರಾಮಗಳ ಸಮೀಪದಲ್ಲಿ ಹಾದು ಹೋಗಿರುವ ಆಣೆಕಟ್ಟೆಗಳ ನಾಲೆಯಿಂದ ನೀರನ್ನು ಹರಿಸಬಹುದು ಎಂದು ಸಲಹೆ ನೀಡಿದ್ದಾರೆ.

ಮಳೆ ಉತ್ತಮವಾಗಿ ಬಿದ್ದ ವರ್ಷದಲ್ಲಿ ಕೆರೆಗಳನ್ನು ತುಂಬಿಸಲು ವ್ಯವಸ್ಥೆ ಮಾಡುವುದು, ಮಳೆ ನೀರು ಸಂಗ್ರಹ, ಜಮೀನುಗಳಿಗೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಜನರಿಗೆ ಪ್ರೇರೇಪಣೆ ನೀಡಬೇಕು. ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಹಾಯಧನ ನೀಡಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ನೈಸರ್ಗಿಕವಾಗಿ ಹರಿಯುವ ನದಿ ಅಥವಾ ಜಲಪಾತದ ನೀರನ್ನು ಇಷ್ಟ ಬಂದ ಹಾಗೆ ತಿರುಗಿಸಿಕೊಳ್ಳುವುದಕ್ಕೆ ಆಸ್ಪದ ನೀಡಬಾರದು. ಜಲಮೂಲಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರವಾಸದ ಆಕರ್ಷಣೆ ಹೆಚ್ಚುತ್ತಿದೆ. ಪಶ್ಚಿಮಘಟ್ಟದ ಗಿರಿ-ಗಹ್ವರಗಳನ್ನು ತ್ಯಾಜ್ಯ ಸಂಗ್ರಹಣೆಯ ತಾಕುಗಳಾಗದಂತೆ ಎಚ್ಚರ ವಹಿಸಬೇಕು. ಪರಿಸರ ಸಂರಕ್ಷಣೆ, ಪರಿಸರ ಪ್ರವಾಸೋದ್ಯಮದ ರಾಜಕೀಯ ಮುಖಂಡರ ಮೇಲಿದೆ. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಈ ಜಿಲ್ಲೆಗೆ ಪ್ರವಾಸೋದ್ಯಮ ನೀತಿ ರೂಪಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT