ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಚಿತ್ತ ಫಲಿತಾಂಶದತ್ತ

ಸೋಲು–ಗೆಲುವಿನ ಲೆಕ್ಕಾಚಾರದಲ್ಲಿ ಕಾರ್ಯಕರ್ತರು
Last Updated 14 ಮೇ 2018, 12:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಚುನಾವಣೆಯ ಅಬ್ಬರದ ಪ್ರಚಾರ, ಮತದಾನ ಮುಗಿದಿದೆ. ಅಭ್ಯರ್ಥಿಗಳು ತುಸು ವಿರಾಮದಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದಲೇ ಒನಕೆ ಓಬವ್ವ ವೃತ್ತ. ಮಹಿಳಾ ಸೇವಾ ಸಮಾಜದ ರಸ್ತೆ, ಕೋರ್ಟ್ ರಸ್ತೆ, ಟೌನ್ ಕ್ಲಬ್, ಹೊಟೇಲ್ ಸಮೀಪ ಜನ ಗುಂಪು ಗುಂಪಾಗಿ ಸೇರಿ ಮತದಾನದ ಚರ್ಚೆಯಲ್ಲಿಯೇ ಮುಳುಗಿ ತಮ್ಮ ತಮ್ಮ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕ ಹಾಕುತ್ತಿದ್ದಾರೆ.

ಹೋಟೆಲ್‌ಗಳ ಟೇಬಲ್ ಮೇಲೆ ಅಭ್ಯರ್ಥಿಗಳ ಸೋಲು–ಗೆಲುವಿನದ್ದೇ ಮಾತು. ‘ಅಲ್ಲಿ ಅಷ್ಟು ಕೊಟ್ರಂತೆ.. ಅವರೇ ಗೆಲ್ತಾರಂತೆ. ಈ ಕಡೆ ಇಷ್ಟು ಕೊಟ್ರಂತೆ.. ಇವರೇ ಗೆಲ್ತಾರಂತೆ.. ಎಂಬ ಚರ್ಚೆ. ‘ಹೋಗ್ಲಿ ಬಿಡ್ರಪ್ಪ.. ಯಾರು ಗೆದ್ರೆ ಏನಂತೆ ? ನಾವು ಕೆಲಸಮ ಮಾಡೋದು ತಪ್ಪುತ್ತಾ..’ ಅಂತ ಹೇಳುತ್ತಾ ಚರ್ಚೆಗಳಿಗೆ ತೆರೆ ಎಳೆದು ಹೊರಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

‘ಬಿಜೆಪಿ–ಜೆಡಿಎಸ್ ನೇರ ಹೋರಾಟ’ ಎಂದು ಕೆಲವರು ಮಾತನಾಡಿಕೊಂಡರೆ, ಇನ್ನು ಕೆಲವರು ’ತ್ರಿಕೋನ ಸ್ಪರ್ಧೆ ಇದೆಯಮ್ಮಾ' ಎನ್ನುತ್ತಿದ್ದರು.

'ನಿಮಗೆ ಗೊತ್ತಿಲ್ಲ ಸುಮ್ನಿರಿ.. ಜೆಡಿಎಸ್ಸೇ ಗೆಲ್ಲೋದು..' ಅಂತ ಒಕಾಲತ್ತು ವಹಿಸುತ್ತಿದ್ದರು. ಇಷ್ಟೆಲ್ಲ ಹೇಳಿದ ಮೇಲೆ, ‘ಯಾವ ಅಭ್ಯರ್ಥಿಗಳ ಗೆಲುವೂ ಸುಲಭವಾಗಿಲ್ಲ’ ಎನ್ನುವ ಒಗ್ಗರಣೆ ಮಾತು. ಜತೆಗೆ, ‘15ಕ್ಕೆ ಎಲ್ಲ ಗೊತ್ತಾಗುತ್ತಲ್ಲ ಬಿಡಿ’ ಎಂದು ಹೇಳಿ ಚರ್ಚೆಗೆ ತೆರೆ ಎಳೆಯುತ್ತಿದ್ದರು.

ಚರ್ಚೆಯ ನಡುವೆ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದು, ಅಮಿತ್ ಶಾ ಮೂರು ಸಾರಿ ಬಂದಿದ್ದು, ರಾಹುಲ್ ಗಾಂಧಿ, ಎಚ್.ಡಿ.ಕುಮಾರಸ್ವಾಮಿ, ದೇವೇಗೌಡರು ಬಂದಿದ್ದು, ಬಿಎಸ್‌ಪಿಯ ಮಾಯಾವತಿ ಬಂದು ಹೋದ ನೆನಪುಗಳು ತೇಲಿ ಹೋಗುತ್ತಿದ್ದವು. 'ಎಷ್ಟೆಲ್ಲ ರಾಷ್ಟ್ರೀಯ ನಾಯಕರು ನಮ್ಮ ಜಿಲ್ಲೆಗೆ ಬಂದು ಹೋದ್ರಲ್ಲಾ’ ಎಂದು ಅವಲೋಕಿಸುತ್ತಾ ಅಚ್ಚರಿಪಡುತ್ತಿದ್ದರು.

ಸಾಮಾನ್ಯವಾಗಿ ಭಾನುವಾರದ ಚಿತ್ರದುರ್ಗದ ರಸ್ತೆಗಳು ತಣ್ಣಗಿರುತ್ತವೆ. ಆದರೆ ಚುನಾವಣೆ ಮುಗಿದ ನಂತರದ ಭಾನುವಾರ ಜನಜಂಗುಳಿಯಿಂದ ಕೂಡಿತ್ತು.

ಶನಿವಾರ ಚುನಾವಣೆಗಾಗಿ ಎಲ್ಲ ಬಂದ್ ಆಗಿದ್ದವು. ಹಾಗಾಗಿ ಇವತ್ತು ವಾಸವಿಮಹಲ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಟನ್ ಮತ್ತು ಚಿಕನ್ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇತ್ತು. ರಜೆ ದಿನವಾದರೂ ಜನರು ಲವಲವಿಕೆಯಿಂದ ಓಡಾಡುತ್ತಿದ್ದರು.

ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ತಮ್ಮ ದಿನ ನಿತ್ಯದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಎಂದಿನಂತೆ ನೂರಾರು ಮಂದಿ ಕಾರ್ಯಕರ್ತರು ಅವರ ಮನೆಯಲ್ಲಿ ಸೇರಿದ್ದರು. ಅದರ ನಡುವೆಯೇ ಒಂದೆರಡು ಮದುವೆ ಕಾರ್ಯಕ್ರಮಗಳಿಗೆ ಹೋಗಿ ಬಂದರು. ಪುನಃ ಕಾರ್ಯಕರ್ತರೊಟ್ಟಿಗೆ ಮಾತನಾಡಿದರು. ಬೇರೆ ಅಭ್ಯರ್ಥಿಗಳ ಮಾಹಿತಿ
ಲಭ್ಯವಾಗಲಿಲ್ಲ.

ಒಟ್ಟಾರೆ, ಚುನಾವಣೆ ನಂತರದ ದಿನ ಅಭ್ಯರ್ಥಿಗಳು ವಿರಾಮದ ಮೂಡ್‌ನಲ್ಲಿದ್ದಂತೆ ಕಂಡರೆ, ಕಾರ್ಯಕರ್ತರು, ಸಾರ್ವಜನಿಕರು, ಪಕ್ಷದ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಚಾರ ಹಾಕುತ್ತಾ, ಫಲಿತಾಂಶದತ್ತ ಚಿತ್ತವನ್ನಿಟ್ಟಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT