ಗುರುವಾರ , ಮಾರ್ಚ್ 4, 2021
30 °C

ಹೇಮಾಯಾನ, ಚಿತ್ರಗಾನ

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಹೇಮಾಯಾನ, ಚಿತ್ರಗಾನ

ಆರಂಭದ ದಿನಗಳು...

ನಾನು ಎಂ.ಟೆಕ್‌ ಮುಗಿಸಿದ ಬಳಿಕ ಐ.ಟಿ ಕ್ಷೇತ್ರ ಸೇರಿದೆ. ನನಗೆ ಕೆಲಸದ ನಿಮಿತ್ತ ಬೇರೆ ಬೇರೆ ದೇಶ ಸುತ್ತುವ ಅವಕಾಶ ಸಿಕ್ಕಿತು. ಆಗ ನನ್ನಲ್ಲಿ ಅನಲಾಗ್‌ ಕ್ಯಾಮೆರಾ ಇತ್ತು. ಎಲ್ಲಿ ಹೋದರೂ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಿದ್ದೆ. ಅಲ್ಲಿನ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡಿದಾಗ ಸುಂದರ ದೃಶ್ಯಗಳನ್ನು ಕಂಡಾಗ ಸುಮ್ಮನೆ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದೆ. ಆ ಪೋಟೊಗಳ ಪ್ರಿಂಟ್‌ ತೆಗೆದಾಗ ಫೋಟೊಗಳೂ ವಿಭಿನ್ನವಾಗಿವೆ, ನೈಜವಾಗಿವೆ ಎಂದು ಅಭಿಪ್ರಾಯ ಬರುತ್ತಿತ್ತು. ಅಲ್ಲಿಂದ ಫೋಟೊಗ್ರಫಿಯನ್ನು ಹವ್ಯಾಸವನ್ನಾಗಿ ಆರಂಭಿಸಿದೆ. ಎರಡು – ಮೂರು ವರ್ಷಗಳಲ್ಲಿ ಕ್ಯಾಮೆರಾ ಬೆಸ್ಟ್‌ ಫ್ರೆಂಡ್‌ ಆಗೋಯ್ತು.

ನಿಮ್ಮ ಫೋಟೊಗ್ರಫಿ ಬಗ್ಗೆ

ಟ್ರಾವೆಲ್‌ನಿಂದ ನನಗೆ ಫೋಟೊಗ್ರಫಿ ಗೀಳು ಬೆಳೆದಿದ್ದು. ಟ್ರಾವೆಲ್‌ ಪೋಟೊಗ್ರಫಿ  ಸೇರಿ ಕಮರ್ಷಿಯಲ್‌, ಪ್ರಾಡಕ್ಟ್‌, ಸ್ಟ್ರೀಟ್‌, ಫುಡ್‌ , ವೈಲ್ಡ್‌ ಲೈಫ್‌, ಲ್ಯಾಂಡ್‌ ಸ್ಕೇಪ್‌, ಹೆರಿಟೇಜ್‌, ಆರ್ಕಿಟೆಕ್ಟ್‌, ಆಸ್ಟ್ರೋ, ನೇಚರ್‌, ಪೀಪಲ್‌ ಫೋಟೊಗ್ರಫಿ ಎಲ್ಲಾ ನನ್ನ ಆಸಕ್ತಿಗಳು. ಇತ್ತೀಚೆಗೆ ನಾನು ಫೈನ್‌ ಆರ್ಟ್ಸ್‌ ಫೋಟೊಗ್ರಫಿಯನ್ನು ಆರಂಭಿಸಿದ್ದೇನೆ. 2002ರಲ್ಲಿ ನನ್ನಲ್ಲಿ ಅನಲಾಗ್‌ ಕ್ಯಾಮೆರಾ ಇತ್ತು. ಅದರಲ್ಲೇ ನಾನು ಚಿತ್ರಗಳನ್ನು ತೆಗೆಯಲು ಆರಂಭಿಸಿದೆ. ಅದಾದ ಬಳಿಕ ಡಿಎಸ್‌ಎಲ್‌ಆರ್‌ ಕ್ಯಾಮೆರಾ ಬಂತು. ಅನುಭವದಿಂದ ಕಲಿತಿದ್ದೇ ಜಾಸ್ತಿ. ಬೆಂಗಳೂರು ಸ್ಕೂಲ್ ಆಫ್‌ ಛಾಯಗ್ರಾಹಣದಲ್ಲಿ ‘ಬೇಸಿಕ್ಸ್‌ ಆಫ್‌ ಫೋಟೊಗ್ರಫಿ’ ಬಗ್ಗೆ ಕೋರ್ಸ್‌ ಮಾಡಿದ್ದೆ. ಐಹೊಳೆ, ಹಂಪಿ, ಅಮೆರಿಕ, ಲಂಡನ್‌, ಚೀನಾ ಮೊದಲಾದ ಸ್ಥಳಕ್ಕೆ ಹೋದಾಗ ಅನುಭವಗಳಿಂದಲೇ ಕಲಿಯುತ್ತಾ ಹೋದೆ.

ನಿಮ್ಮ ವೈಲ್ಡ್‌ಲೈಫ್‌ ಫೋಟೊಗ್ರಫಿ ಬಗ್ಗೆ ಹೇಳಿ

ಮೂರು ವರ್ಷದ ಹಿಂದೆ ಆಫ್ರಿಕಾದ ಕೀನ್ಯಾದಲ್ಲಿ ಬೇರೆ ಬೇರೆ ಅರಣ್ಯಕ್ಕೆ ಹೋಗಿ ಅಲ್ಲಿನ ಪ್ರಾಣಿಪ್ರಪಂಚದ ಚಿತ್ರಗಳನ್ನು ಸೆರೆಹಿಡಿದಿದ್ದೆ. ಅರಣ್ಯಕ್ಕೆ ಹೋದಾಗ ತಾಳ್ಮೆ ಬೇಕು. ಆಫ್ರಿಕಾದ ಕಾಡುಗಳು ದಟ್ಟವಾಗಿವೆ. ಅಲ್ಲಿ ತೆಗೆದ ಚಿತ್ರಗಳು ಹಾಗೂ ಲೇಖನ ‘ಆಫ್ರಿಕಾ ಜಿಯೋಗ್ರಫಿ’ಯಲ್ಲಿ ಪ್ರಕಟವಾಗಿದೆ.

ಕಾಫಿ ಟೇಬಲ್‌ ಬುಕ್‌ ಬಗ್ಗೆ ಹೇಳಿ

10 ವರ್ಷಗಳ ಹಿಂದೆ ಕರ್ನಾಟಕದ ಬಗ್ಗೆ ಕಾಫಿ ಟೇಬಲ್‌ ಬುಕ್‌ ಯಾಕೆ ಮಾಡಬಾರದು ಎಂದು ಹೊಳೆಯಿತು. ಆಗ ನಾನು ಐದು ಜನ ಫೋಟೊಗ್ರಾಫರ್‌ ಸೇರಿಕೊಂಡು  ಕರ್ನಾಟಕ ಪೂರ್ತಿ ಸುತ್ತಾಡಿದೆವು. ಉತ್ತರ, ದಕ್ಷಿಣ, ಕರಾವಳಿ ಹೀಗೆ ಒಬ್ಬರು ಒಂದೊಂದು ಕಡೆ ತಿರುಗಾಡಿ ಕರ್ನಾಟಕದ ಸಂಸ್ಕೃತಿ, ಶ್ರೀಮಂತಿಕೆಯನ್ನು ತೋರಿಸುವ ಫೋಟೊಗಳನ್ನು ಸಂಗ್ರಹಿಸಿದೆವು.  2006ನಿಂದ 2009ರವರೆಗೆ ಆರು ಜನ ಕೆಲಸ ಮಾಡಿದೆವು. ಆದರೆ ದುರದೃಷ್ಟವಶಾತ್‌ ಇದನ್ನು ಕೃತಿಯನ್ನಾಗಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಚಿತ್ರಕಲಾ ಪರಿಷತ್‌ನಲ್ಲಿ ‘ಪ್ರತಿಬಿಂಬ–ರಿಫ್ಲೆಕ್ಷನ್‌ ಆಫ್‌ ಕರ್ನಾಟಕ’ ಎಂದು ಛಾಯಾಗ್ರಹಣ ಪ್ರದರ್ಶನ ನಡೆಸಿದೆವು.

ಈ ಕ್ಷೇತ್ರದಲ್ಲಿ ಮಹಿಳೆಯರ ಸವಾಲುಗಳು

ಸುರಕ್ಷೆ. ಗ್ರಾಮೀಣ ನಿರ್ಜನ ಪ್ರದೇಶಗಳಲ್ಲಿ ಮಹಿಳೆಯರಲ್ಲಿ ಒಬ್ಬೊಬ್ಬರೇ ಹೋಗುವುದು ಕಷ್ಟ. ಗುಂಪಿನಲ್ಲಿ ಅಥವಾ ಯಾರಾದರೊಬ್ಬರು ಜೊತೆಗಿರಲೇಬೇಕಾಗುತ್ತದೆ. ಕೆಲವೊಂದು ಪ್ರಾಜೆಕ್ಟ್‌ಗಳನ್ನು ಇದೇ ಕಾರಣಕ್ಕೆ ಕೈಬಿಟ್ಟಿದ್ದಿದೆ. ನನಗೆ ಯಾವುದು ಸುರಕ್ಷಿತ ಸ್ಥಳ ಎಂಬುದನ್ನು ಮೊದಲು ಗಮನಿಸುತ್ತೇನೆ. ಕ್ಯಾಮೆರಾ ಕೈಯಲ್ಲಿ ಹಿಡಿದುಕೊಂಡಿದ್ದಾರೆ ಎಂದರೆ ವಿಚಿತ್ರವಾಗಿ ನೋಡುತ್ತಾರೆ. ಅವರಿಗೆ ನಮ್ಮ ಸ್ಥಿತಿಯನ್ನು ಅರ್ಥ ಮಾಡಿಸಬೇಕು. ಅಂತಹ ವೇಳೆ ಗುಂಪಿನಲ್ಲಿ ಒಬ್ಬ ಸಾಮಾನ್ಯಳಾಗಿ ಇದ್ದು ಸುತ್ತ ಗಮನಿಸಿ, ಫೋಟೊ ತೆಗೆಯುತ್ತೇನೆ. ಇದಲ್ಲದೇ ಇಲ್ಲಿ ಪ್ರಯಾಣ ತುಂಬಾ ಮಾಡಬೇಕು. ಮನೆ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು.

ನಿಮ್ಮ ಸಂಸ್ಥೆ ವೈಡರ್‌ ಆ್ಯಂಗಲ್ಸ್‌ ಬಗ್ಗೆ ಹೇಳಿ

2009ರಲ್ಲಿ ಐ.ಟಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಫೋಟೊಗ್ರಫಿ ಕಾರ್ಯಾಗಾರಗಳನ್ನು ಆರಂಭಿಸಿದೆ. ಬೇಸಿಕ್ಸ್‌ನಿಂದ ಹಿಡಿದು ಬೇರೆ ಬೇರೆ ರೀತಿಯ ಫೋಟೊಗ್ರಫಿ, ಫೋಟೊಶಾಫ್‌ ಬಗ್ಗೆ ಹೇಳಿಕೊಡಲಾರಂಭಿಸಿದೆ. 2013ನಲ್ಲಿ ವೈಡರ್‌ ಆಂಗಲ್ಸ್‌ ಸಂಸ್ಥೆ ಆರಂಭಿಸಿದೆ. ಇದರಲ್ಲಿ ವರ್ಕ್ ಶಾಪ್, ಫೋಟೊವಾಕ್‌ ಹಾಗೂ ಫೋಟೊ ಜರ್ನಿ ನಡೆಸಲಾಗುತ್ತದೆ. ಇಲ್ಲಿ ಈಗ 400ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇಲ್ಲಿ 9ವರ್ಷದಿಂದ 60ವರ್ಷದವರಿಗೆ ಆಸಕ್ತರಿಗೆ ಫೋಟೊಗ್ರಫಿ ಹೇಳಿಕೊಡಲಾಗುತ್ತದೆ.

‘ಎಕ್ಸ್‌ಪೀರಿಯೆನ್ಸ್‌ ಇಂಡಿಯಾ’ ಫೋಟೊ ವಾಕ್‌ ಏನು?

ನಾನು ಹಾಗೂ ನನ್ನ ವಿದ್ಯಾರ್ಥಿಗಳ ಗುಂಪು ದೇಶದ ಪ್ರಸಿದ್ಧ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಅಲ್ಲಿನ ಸೌಂದರ್ಯ, ಇತಿಹಾಸವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು. ಒಂದೇ ಸ್ಥಳದಲ್ಲಿ ಎರಡು ಮೂರು ದಿನ ಉಳಿದುಕೊಂಡು ಫೋಟೊಗಳ ಮೂಲಕ ಅಲ್ಲಿನ ಇತಿಹಾಸವನ್ನು ಸೆರೆ ಹಿಡಿಯುತ್ತೇವೆ. ಇಲ್ಲಿಯವರೆಗೂ ಕರ್ನಾಟಕದ ಪ್ರಮುಖ ಸ್ಥಳಗಳು, ರಾಜಸ್ತಾನ, ದೆಹಲಿ, ಲಡಾಕ್‌ ಸೇರಿದಂತೆ 9 ರಾಜ್ಯಗಳಲ್ಲಿ  ಈ ರೀತಿ ಫೋಟೊ ಶೂಟ್‌ ಮಾಡಿದ್ದೇವೆ. ಭವಿಷ್ಯದಲ್ಲಿ ಈ ಚಿತ್ರಗಳನ್ನು ಪ್ರದರ್ಶನ ಮಾಡುವ ಯೋಚನೆ ಇದೆ. ಇದಲ್ಲದೇ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಅರ್ಧ ದಿನ ಫೋಟೊ ಕಾರ್ಯಾಗಾರ ಮಾಡಿ, ಯಾವುದಾದರೂ ಸ್ಥಳಕ್ಕೆ ಕರೆದುಕೊಂಡು ಹೋಗಿ ಅರ್ಕಿಟೆಕ್ಟ್‌ ಪೋಟೊಗ್ರಫಿ, ಸ್ಟ್ರೀಟ್‌ ಫೋಟೊಗ್ರಫಿ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಕಲಿಕೆ ನಡೆಸುತ್ತೇನೆ.

ಮೆಚ್ಚಿನ ಚಿತ್ರ

ಕಳೆದ ವರ್ಷ ಲಡಾಕ್‌ಗೆ ಹೋಗಿದ್ದಾಗ ಅಲ್ಲೇ ಒಂದು ಕಾಫಿ ಅಂಗಡಿಯಲ್ಲಿ ಆಕಾಶ ದಿಟ್ಟಿಸುತ್ತಿದ್ದೆ. ನಾನು ನೋಡುತ್ತಿದ್ದಂತೆ  ಬೆಟ್ಟದ ಸಾಲಿನಲ್ಲಿ ಬಣ್ಣಗಳ ಓಕುಳಿ ಮೂಡುತ್ತಾ ಹೋಯಿತು. ಆಕಾಶದ ತುಂಬ ಬಣ್ಣ ಚೆಲ್ಲಿದೆಯೇನೋ ಎಂಬಂತೆ ಕಾಮನಬಿಲ್ಲು ಮೂಡಿತ್ತು. ನನ್ನ ಜೀವನದಲ್ಲಿ ನೋಡಿದ ಅದ್ಭುತ ದೃಶ್ಯ ಅದು. ದುರಂತ ಅಂದ್ರೆ ಅವತ್ತು ಕ್ಯಾಮೆರಾ ತೆಗೆದುಕೊಂಡು ಹೋಗಿರಲಿಲ್ಲ. ಮೊಬೈಲ್‌ನಲ್ಲೇ ಆ ದೃಶ್ಯವನ್ನು ಸೆರೆ ಹಿಡಿದೆ. ಸುಮಾರು 20 ನಿಮಿಷ ಕಾಮನಬಿಲ್ಲು ಚಿತ್ತಾರ ಬೆಟ್ಟದ ತುಂಬ ಇತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.