ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಫ್‌4ಎಫ್‌’ಗೆ ಬೆಂಗಳೂರು ಪೋರ

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಫುಟ್‌ಬಾಲ್ ಕುರಿತು ಚಿಣ್ಣರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫಿಫಾವು ಪ್ರತಿವರ್ಷ ಆಯೋಜಿಸುವ ಅಂತರರಾಷ್ಟ್ರೀಯ ಫುಟ್‌ಬಾಲ್ ಸೌಹಾರ್ದ ಕಾರ್ಯಕ್ರಮಕ್ಕೆ (ಎಫ್‌4ಎಫ್) ಈ ಬಾರಿ ಬೆಂಗಳೂರಿನ 12 ವರ್ಷದ ಪೋರ ಸೂರ್ಯ ವರಿಕುಟಿ ಆಯ್ಕೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾನೆ.

ಜೂನ್ 8ರಿಂದ ಜೂನ್ 15ರ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಫಿಪಾ ಸಹಭಾಗಿತ್ವ ಹೊಂದಿರುವ 211 ದೇಶಗಳ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳು ಹಾಗೂ ಯುವಕರಲ್ಲಿ ಫುಟ್‌ಬಾಲ್‌ನ ಬಗ್ಗೆ ಒಲವು ಮೂಡಿಸುವುದು, ಆರೋಗ್ಯಕರ ಜೀವನ ಶೈಲಿ, ಸಹಿಷ್ಣುತೆ ಬಗ್ಗೆ ಜಾಗೃತಿ, ರಾಷ್ಟ್ರೀಯತೆ ಹಾಗೂ ವೈವಿಧ್ಯಮಯ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಈ ಕಾರ್ಯಕ್ರಮದ ಮೂಲಕ ತಿಳಿವಳಿಕೆ ನೀಡಲಾಗುತ್ತದೆ. ಸಂವಾದ ಹಾಗೂ ಚರ್ಚಾ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳಲ್ಲಿ ಸೂರ್ಯ ಭಾಗವಹಿಸಲಿದ್ದಾನೆ.

ಈ ಕಾರ್ಯಕ್ರಮಕ್ಕೆ ಮಕ್ಕಳನ್ನೇ ಆಯ್ಕೆ ಮಾಡಬೇಕು ಎಂಬುದು ಫಿಪಾದ ನಿಯಮ. ಅದರಂತೆ, 2005ರ ಜೂನ್ 15ರ ನಂತರ ಹುಟ್ಟಿದ ಮಕ್ಕಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮ ವಿಭಾಗದಿಂದ ಯುವ ಪತ್ರಕರ್ತ ಪುಣೆಯ ರುದ್ರೇಶ್ ಗೌಡನೂರ್ ಸಹ ಸೂರ್ಯನ ಜತೆ ಆಯ್ಕೆಯಾಗಿದ್ದಾನೆ.

ಸೂರ್ಯ, ವೈಟ್‌ಫೀಲ್ಡ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿ. ಅಮೆರಿಕದಲ್ಲಿದ್ದಾಗ 6ನೇ ವಯಸ್ಸಿನಲ್ಲಿಯೇ ಮನರಂಜನೆಗಾಗಿ ಫುಟ್‌ಬಾಲ್ ಆಡುತ್ತಿದ್ದ ಸೂರ್ಯ ಕ್ರಮೇಣ ಫುಟ್‌ಬಾಲ್‌ನಲ್ಲಿಯೇ ತನ್ನನ್ನು ಗುರುತಿಸಿಕೊಳ್ಳಬೇಕು ಎಂಬ ಮಹದಾಸೆಯನ್ನು ಗಟ್ಟಿಗೊಳಿಸಿಕೊಂಡಿದ್ದಾನೆ. ಸದ್ಯ ತನ್ನ ಕುಟುಂಬಸ್ಥರ ಜತೆಗೆ ಬೆಂಗಳೂರಿನಲ್ಲಿಯೇ ವಾಸವಿದ್ದಾನೆ.

ಫುಟ್‌ಬಾಲ್ ನನ್ನ ಪ್ಯಾಶನ್ ಎನ್ನುವ ಸೂರ್ಯನಿಗೆ ಮೆಸ್ಸಿ ನೆಚ್ಚಿನ ಆಟಗಾರ. ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ಸೌಹಾರ್ದಯುತ ಫುಟ್‌ಬಾಲ್ ಪಂದ್ಯದ ವೇಳೆ ಮೆಸ್ಸಿ ಅವರನ್ನು ಭೇಟಿಯಾಗಿ ಅವರೊಡನೆ ಆಡುವ ಆಸೆ ಹೊಂದಿದ್ದಾನೆ.

‘ಭವಿಷ್ಯದಲ್ಲಿ ನಾನೂ ವೃತ್ತಿಪರ ಫುಟ್‌ಬಾಲ್ ಆಟಗಾರನಾಗುತ್ತೇನೆ. ಆ ಮೂಲಕ ದೇಶಕ್ಕೆ ನನ್ನದೇ ಆದ ಕೊಡುಗೆ ನೀಡುವೆ. ಅದಕ್ಕೆ ಈಗಿನಿಂದಲೇ ತಯಾರಿ ನಡೆಸಿದ್ದೇನೆ. ಎಫ್‌4ಎಫ್ ಕಾರ್ಯಕ್ರಮವೂ ನನ್ನಾಸೆಗೆ ಪೂರಕವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾನೆ.

‘5ನೇ ವಯಸ್ಸಿನಲ್ಲಿದ್ದಾಗ ಫುಟ್‌ಬಾಲ್‌ನತ್ತ ಆಕರ್ಷಿತನಾದೆ. ಆಗಲೇ ನಾನು ಸ್ಟ್ಯಾಮ್‌ರಫೋರ್ಡ್‌ ಯೂತ್ ಫುಟ್‌ಬಾಲ್ ಲೀಗ್‌ನಲ್ಲಿ ಸ್ಪರ್ಧಿಸಿ ಬಹುಮಾನ ಜಯಿಸಿದ್ದೆ. ಆ ಬಳಿಕ ಫುಟ್‌ಬಾಲ್‌ನಲ್ಲಿ ಹೆಚ್ಚಾಗಿ ತೊಡಗಿಕೊಂಡೆ. ಸದ್ಯ ನಗರದ ರೂಟ್ಸ್‌ ಫುಟ್‌ಬಾಲ್‌ ಸ್ಕೂಲ್‌ನಲ್ಲಿ (ಆರ್‌ಎಫ್‌ಎಸ್) ಫುಟ್‌ಬಾಲ್ ತರಬೇತಿ ಪಡೆಯುತ್ತಿದ್ದು, ಅದೇ ತಂಡದ ಜತೆಗೆ ನಾನು ಅನೇಕ ಟೂರ್ನಿಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದೇನೆ. ನಾನು ಡಿಫೆಂಡರ್‌ ಆಗಿ ಆಡುತ್ತಿದ್ದೇನೆ. ದೇಶದ ಎಂಟು ಫುಟ್‌ಬಾಲ್ ವಲಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ರಾಜ್ಯದ ಆರ್‌ಎಫ್‌ಎಸ್‌ ತಂಡವೇ ನಮ್ಮ ವಯೋಮಾನದ ವಿಭಾಗದಲ್ಲಿ ಚಾಂಪಿಯನ್‌. ದೇಶದ ಬಲಿಷ್ಠ ಐದು ತಂಡಗಳ ಪೈಕಿ ನಮ್ಮ ತಂಡವೂ ಒಂದು.’ ಎನ್ನುತ್ತಾನೆ.

ಎಫ್‌4ಎಫ್‌ಗೆ ಆಯ್ಕೆಯಾಗುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಆಯ್ಕೆಯಾಗಿದ್ದು ತುಂಬಾ ಖುಷಿ ಕೊಟ್ಟಿದೆ. 211 ದೇಶಗಳ ಪ್ರತಿಭಾನ್ವಿತರನ್ನು ರಷ್ಯಾದ ಮಾಸ್ಕೋದಲ್ಲಿ ಭೇಟಿಯಾಗಿ ಅವರ ಜೊತೆ ಆಟವಾಡಲು ಕಾತುರನಾಗಿದ್ದಾನೆ. ನನ್ನ ಪ್ರತಿಭೆ ಗುರುತಿಸಿ, ಆಯ್ಕೆಗೆ ನೆರವಾದ ಆರ್‌ಎಫ್‌ಎಸ್‌, ಎಐಎಫ್‌ಎಫ್‌, ಗಜ್‌ಪ್ರೊಮ್ ಮತ್ತು ಫಿಪಾಗೆ ಧನ್ಯವಾದ ಅರ್ಪಿಸಿದ ಸೂರ್ಯ ಮುಂದಿನ ದಿನಗಳಲ್ಲಿ ಫಿಫಾ ವರ್ಲ್ಡ್‌ಕಪ್‌ ಟೂರ್ನಿಯಲ್ಲಿ ಭಾರತವೂ ಭಾಗವಹಿಸಿ ಕಪ್‌ ಎತ್ತಿಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾನೆ.

ಆಯ್ಕೆ ಹೇಗೆ

ಫಿಫಾವು ತನ್ನ ಸಹಭಾಗಿತ್ವ ರಾಷ್ಟ್ರಗಳ ಫುಟ್‌ಬಾಲ್ ಅಸೋಸಿಯೇಷನ್‌ಗಳಿಗೆ ತಮ್ಮ ದೇಶದಿಂದ ಒಬ್ಬ ಆಟಗಾರನನ್ನು ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿ  ಒಪ್ಪಿಸುತ್ತದೆ. ಅದರಂತೆ, ಆಯಾ ದೇಶಗಳ ಫುಟ್‌ಬಾಲ್‌ ಅಸೋಸಿಯೇಷನ್‌ಗಳು ತನ್ನ ದೇಶದಲ್ಲಿ ಫುಟ್‌ಬಾಲ್ ಟೂರ್ನಿ ಆಯೋಜಿಸಿ ಅದರಲ್ಲಿ ಅತ್ಯುತ್ತಮ ಆಟಗಾರನನ್ನು ಆಯ್ಕೆ ಮಾಡುತ್ತದೆ. ಅದೇ ಪ್ರಕ್ರಿಯೆಯಂತೆ ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ ಬೆಂಗಳೂರು ಸೂರ್ಯನನ್ನು ಆಯ್ಕೆ ಮಾಡಿದೆ.

ಒಟ್ಟು 211 ದೇಶಗಳ 211 ಆಟಗಾರರನ್ನು 30 ತಂಡಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ತಂಡದಲ್ಲಿ ಆರು ಆಟಗಾರರು ಇರುತ್ತಾರೆ. ಪ್ರತಿ ತಂಡವು ಒಂದೊಂದು ಪಂದ್ಯವನ್ನು ಆಡಲಿದೆ. ಜೊತೆಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT