ಧೈರ್ಯ

7

ಧೈರ್ಯ

Published:
Updated:

ಮಾನವನಿಗೆ ಹುಟ್ಟಿನಿಂದ ಬಳುವಳಿಯಾಗಿ ದೈವದತ್ತವಾಗಿ ಲಭಿಸಿದ ಸ್ವಾಭಾವಿಕ ಮೌಲ್ಯಗಳಲ್ಲಿ ಧೈರ್ಯ ಒಂದು. ಇದನ್ನು ಆಂಗ್ಲ ಭಾಷೆಯಲ್ಲಿ ಫಾರ್ಟಿಟ್ಯೂಡ್ ಎನ್ನುವುದು ಹೆಚ್ಚು ಸಮಂಜಸ. ನಾವು ಸಾಮಾನ್ಯ ಆಡುಭಾಷೆಯಲ್ಲಿ ಉಪಯೋಗಿಸುವ ಧೈರ್ಯ ಎಂಬ ಪದದ ಅರ್ಥಕ್ಕಿಂತ ಇದು ಮೇಲಿನ ಸ್ತರದ್ದು. ಇದನ್ನು ದೃಢವಾದ ಧೈರ್ಯವೆನ್ನಹುದೇನೋ? ಇದು ಹುಚ್ಚು ಧೈರ್ಯವಲ್ಲ, ಹಿಂದು ಮುಂದಿನ ಯೋಚನೆಯಿಲ್ಲದೆ ಬರುವ ಧೈರ್ಯವಲ್ಲ. ಇದು ತರ್ಕಬದ್ಧವಾದ ಧೈರ್ಯ. ದೃಢವಾದ ಧೈರ್ಯವು ನಮಗೆ ಜೀವನವನ್ನು ಎದುರಿಸಲು ಸಹಕಾರಿಯಾಗುತ್ತದೆ. ಯಾವುದೇ ಸನ್ನಿವೇಶದಲ್ಲಿ ಎದೆಗುಂದದೆ ಇರಲು ಸಾಧ್ಯವಾಗುತ್ತದೆ. ಹಲವು ಸಲ ಜೀವನದ ಮೌಲ್ಯಗಳಿಗಾಗಿ ಅತೀವ ಅಪಾಯಕರ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ದೃಢವಾದ ಧೈರ್ಯವೆಂಬ ಸದ್ಗುಣ ನಮ್ಮ ನೆರವಿಗೆ ಬರುತ್ತದೆ. ಸಾಧನೆಯ ಗುರಿಯು ಶ್ರೇಷ್ಠವಾಗಿರಲು ಅದನ್ನು ಸಾಧಿಸುವ ದಾರಿಯು ಅಪಾಯಕಾರಿಯಾಗಿದ್ದರೂ ಆ ದಾರಿಯನ್ನು ಧೈರ್ಯದಿಂದ ನಡೆಯಲು ಸಾಧ್ಯವಾಗುತ್ತದೆ.

ಎರಡನೇ ಮಹಾಯುದ್ದದ ಕಾಲದಲ್ಲಿ ಹಿಟ್ಲರ್‌ನ ಕಾನ್‌ಸಂಟ್ರೇಶನ್ ಕ್ಯಾಂಪ್‌ನಲ್ಲಿ ಲಕ್ಷಾಂತರ ಯೆಹೂದಿಗಳು ಬಂದಿಯಾಗಿದ್ದರು. ಆ ಕ್ಯಾಂಪಿನಲ್ಲಿ ಪ್ರತಿನಿತ್ಯ ಕೈದಿಗಳನ್ನು ವಿವಿಧ ರೀತಿಗಳಲ್ಲಿ ಕೊಲ್ಲಲಾಗುತ್ತಿತ್ತು. ಒಂದು ದಿನ ಆ ಕ್ಯಾಂಪ್‌ನಿಂದ ತಪ್ಪಿಸಿಕೊಂಡ ಒಬ್ಬ ಕೈದಿಯ ಬದಲಾಗಿ ಹತ್ತು ಜನರನ್ನು ಉಪವಾಸ ಕೆಡವಿ ಕೊಲ್ಲಲು ಆರಿಸಲಾಯಿತು. ಅವರಲ್ಲೊಬ್ಬ ತನ್ನ ಅವಸಾನ ಸನ್ನಿಹಿತವಾಯಿತೆಂದು ತಾನು ಇನ್ನೆಂದು ತನ್ನ ಹೆಂಡತಿ ಮಕ್ಕಳನ್ನು ಕಾಣಲಾರೆನೆಂದು ಜೋರಾಗಿ ಅಳಲಾರಂಭಿಸಿದ. ಇದನ್ನು ನೋಡಿದ ಪೋಲಂಡಿನ ಪಾದ್ರಿ ಮಾಕ್ಸ್‌ಮಿಲಿಯನ್ ಕೊಲ್ಬೆ ಎಂಬ ಇನ್ನೊಬ್ಬ ಕೈದಿ ಅವನನ್ನು ಸಮಾಧಾನಗೊಳಿಸಿ, ಅವನ ಸ್ಥಾನದಲ್ಲಿ ತಾನು ಸಾಯುವುದಾಗಿ ಅಧಿಕಾರಿಗಳಲ್ಲಿ ಕೇಳಿಕೊಂಡಾಗ ಅವರು ಸಮ್ಮತಿ ಸೂಚಿಸಿದರು. ಫಾದರ್ ಕೊಲ್ಬೆ ಆ ಅಪರಿಚಿತ ಕುಟುಂಬಸ್ಥನಿಗಾಗಿ ಪ್ರಾಣತ್ಯಾಗ ಮಾಡಿದರು. ಇದನ್ನು ಆರಿಸಲು ಅವರಿಗೆ ಸಹಾಯ ಮಾಡಿದ್ದು ಧೈರ್ಯವೆಂಬ ಸದ್ಗುಣ. ಕುಟುಂಬಸ್ಥನ ಕುಟುಂಬಕ್ಕೆ ಅವನ ಅಗತ್ಯ ಬಹಳವಿರುವುದರಿಂದ ಅವನ ಪ್ರಾಣವನ್ನು ರಕ್ಷಿಸುವುದು ಫಾದರ್ ಕೊಲ್ಬೆಯ ಕರ್ತವ್ಯವಾಗಿತ್ತು.

1981 ರಲ್ಲಿ ಫಾದರ್ ಮ್ಯಾಕ್ಸ್‌ಮಿಲಿಯನ್ ಕೊಲ್ಬೆಯನ್ನು ಪೋಪ್ ದ್ವಿತೀಯ ಜಾನ್ ಪಾಲರು ಮರಣೋತ್ತರ ಗೌರವ ನೀಡಿ ಸಂತ ಪದವಿಗೆ ಏರಿಸಿದಾಗ, ಆ ಕುಟುಂಬಸ್ಥ ಆ ಪೂಜ್ಯ ಕಾರ್ಯಕ್ರಮದಲ್ಲಿ ಹಾಜರಿದ್ದ. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ ಎಂಬ ಯೇಸುಸ್ವಾಮಿಯ ಮಾತುಗಳು ಫಾದರ್ ಕೊಲ್ಬೆಗೆ ಪ್ರೇರಣೆಯಾಗಿ ಧೈರ್ಯದಿಂದ ತನ್ನ ಪ್ರಾಣತ್ಯಾಗ ಮಾಡಲು ಸಾಧ್ಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry