ಗ್ರಾಹಕರ ಹೊರೆ ಇಳಿಸಲು ಹಲವು ಹೆಜ್ಜೆ

7

ಗ್ರಾಹಕರ ಹೊರೆ ಇಳಿಸಲು ಹಲವು ಹೆಜ್ಜೆ

Published:
Updated:
ಗ್ರಾಹಕರ ಹೊರೆ ಇಳಿಸಲು ಹಲವು ಹೆಜ್ಜೆ

ಬೆಂಗಳೂರು: ಕೈಗಾರಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪ್ರೋತ್ಸಾಹ ಯೋಜನೆ ಪ್ರಕಟಿಸಿದೆ.

ರಾತ್ರಿ 10ರಿಂದ ಬೆಳಿಗ್ಗೆ 6ರ ಅವಧಿಯಲ್ಲಿ ಕೈಗಾರಿಕೆಗಳು ವಿದ್ಯುತ್‌ ಬಳಸಿದರೆ ಮೂಲದರಕ್ಕಿಂತ ₹2 ಕಡಿಮೆ ಪಾವತಿಸಿದರೆ ಸಾಕು. ಇದು ಏಪ್ರಿಲ್‌ 1ರಿಂದಲೇ ಅನ್ವಯವಾಗಲಿದೆ.

ಸಾಮಾನ್ಯವಾಗಿ ಬೆಳಿಗ್ಗೆ 6ರಿಂದ 10 ಹಾಗೂ ಸಂಜೆ 6ರಿಂದ ರಾತ್ರಿ 10ರ ವರೆಗೆ ವಿದ್ಯುತ್‌ ಬಳಕೆ ಪ್ರಮಾಣ ಅತ್ಯಧಿಕವಾಗಿರುತ್ತದೆ. ಇದನ್ನು ದಟ್ಟಣೆ ಅವಧಿ ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕರೆಂಟ್‌ ಬಳಕೆಗೆ ಟಿಒಡಿ ದರ (ಪ್ರತಿ ಯೂನಿಟ್‌ಗೆ ₹1ರಂತೆ ವಿಧಿಸುವ ದರ) ಮುಂದುವರಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 6ರ ವರೆಗಿನ ವಿದ್ಯುತ್‌ ಬಳಕೆಗೂ ಉತ್ತೇಜನ ನೀಡಲಾಗುತ್ತದೆ. ಈ ಅವಧಿಯಲ್ಲಿ ದರ ₹1 ಕಡಿಮೆ ಇರುತ್ತದೆ.

‘ರಾತ್ರಿ ಹೊತ್ತಿನಲ್ಲಿ ವಿದ್ಯುತ್‌ ಬಳಕೆಗೆ ಉತ್ತೇಜನ ನೀಡಲು ದರ ಪರಿಷ್ಕರಣೆ ಮಾಡಲಾಗಿದೆ. ಆಗ ಗ್ರಿಡ್‌ ನಿರ್ವಹಣೆಗೆ ಅನುಕೂಲವಾಗುತ್ತದೆ. ಗ್ರಾಹಕರು ಸಹ ಕಡಿಮೆ ಇರುತ್ತಾರೆ’ ಎಂದು ಎಂ.ಕೆ. ಶಂಕರಲಿಂಗೇಗೌಡ ಹೇಳಿದರು.

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಪ್ರಮಾಣ ವರ್ಷಕ್ಕೆ ಶೇ 10ರಷ್ಟು ಇರಬೇಕು. ಆದರೆ, ವಿವಿಧ ಕಾರಣಗಳಿಂದ ಆ ಪ್ರಮಾಣದಲ್ಲಿ ಬೆಳವಣಿಗೆ ಆಗುತ್ತಿಲ್ಲ ಎಂದರು.

‘ನಮ್ಮ ಮೆಟ್ರೊ’ಗೆ ಭರಪೂರ ಕೊಡುಗೆ

ವಿದ್ಯುತ್ ದರ ಕಡಿಮೆ ಮಾಡಬೇಕು ಎಂಬ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಬೇಡಿಕೆಗೆ ಆಯೋಗ ಸ್ಪಂದಿಸಿದೆ. ‘ನಮ್ಮ ಮೆಟ್ರೊ’ಗೆ ಪ್ರತಿ ಯೂನಿಟ್‌ಗೆ ₹6 ದರ ನಿಗದಿಪಡಿಸಲಾಗಿತ್ತು. ಈಗ ಅದನ್ನು ₹5ಕ್ಕೆ ಇಳಿಸಲಾಗಿದೆ.

ದರ ಕಡಿಮೆಯಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆಗಾಗ ದರ ಏರಿಸುವ ಪ್ರಮೇಯ ಎದುರಾಗುವುದಿಲ್ಲ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ತಿಳಿಸಿದರು.

ಪಂಪ್‌ಸೆಟ್‌ಗೆ ಹಗಲು ವಿದ್ಯುತ್‌–ನವೆಂಬರ್‌ನಲ್ಲಿ ಜಾರಿ?

ಕೃಷಿ ಪಂಪ್‌ಸೆಟ್‌ಗಳಿಗೆ ನವೆಂಬರ್‌ನಿಂದ ಹಗಲು ಹೊತ್ತಿನಲ್ಲೇ ಆರು ಗಂಟೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ ಎಂದು ಶಂಕರಲಿಂಗೇಗೌಡ ತಿಳಿಸಿದರು.

‘ರಾಜ್ಯದಲ್ಲಿ ವಿದ್ಯುತ್‌ ಪೂರೈಕೆ ಪ್ರಮಾಣ ಹೆಚ್ಚಾಗಿದೆ. ಸದ್ಯ 4,500 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದು ಅಕ್ಟೋಬರ್‌ ವೇಳೆಗೆ 5,000 ಮೆಗಾವಾಟ್‌ಗೆ ಏರಲಿದೆ. ರೈತರ ಪಂಪ್‌ಸೆಟ್‌ಗಳಿಗೆ ಈಗ ಹಗಲು ಹೊತ್ತಿನಲ್ಲಿ ಮೂರು ಗಂಟೆ ಹಾಗೂ ರಾತ್ರಿ ಹೊತ್ತಿನಲ್ಲಿ 3 ಗಂಟೆ ವಿದ್ಯುತ್‌ ಪೂರೈಸುತ್ತೇವೆ’ ಎಂದರು.

‘ರಾಜ್ಯದ ವಿದ್ಯುತ್ ಪೂರೈಕೆಯ ‍ಪ್ರಮಾಣದಲ್ಲಿ ಶೇ 32ರಷ್ಟು ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳ ಸಮೀಕ್ಷೆ ನಡೆಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 1.5 ಲಕ್ಷ ಪಂಪ್‌ಸೆಟ್‌ಗಳು ಕೆಲಸ ಮಾಡುತ್ತಿಲ್ಲ. ಅದೇ ಹೊತ್ತಿಗೆ, 1.5 ಲಕ್ಷ ಅನಧಿಕೃತ ಪಂಪ್‌ಸೆಟ್‌ಗಳು ಇರುವುದು ಗೊತ್ತಾಗಿದೆ’ ಎಂದರು.

ವಿದ್ಯುತ್‌ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಿ: ವಿನಾಯಿತಿ ಪಡೆಯಿರಿ

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಜಮಾನ ಶುರುವಾಗಿದೆ. ರಾಜ್ಯ ಸರ್ಕಾರ ‘ಎಲೆಕ್ಟ್ರಿಕ್‌ ನೀತಿ’ ಪ್ರಕಟಿಸಿದೆ. ಬಿಎಂಟಿಸಿ 150 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ಆದರೆ, ನಗರದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ಗಳು ಕೆಲವೇ ಇವೆ. ಇವುಗಳನ್ನು ಆರಂಭಿಸುವವರಿಗೆ ಪ್ರೋತ್ಸಾಹ ನೀಡುವುದಾಗಿ ಆಯೋಗ ಪ್ರಕಟಿಸಿದೆ. ಈ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದೂ ಪ್ರಕಟಿಸಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ದರ ₹8ರ ವರೆಗೆ ಇದೆ. ಆದರೆ, ಚಾರ್ಜಿಂಗ್ ಸ್ಟೇಷನ್‌ಗಳಿಗೆ ಏಕರೂಪ ದರ ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry