ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಬಿರುಗಾಳಿಗೆ 5 ರಾಜ್ಯಗಳಲ್ಲಿ 80 ಸಾವು

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ, ದೆಹಲಿ ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ, ದೂಳು ಬಿರುಗಾಳಿ ಮತ್ತು ಸಿಡಿಲಿಗೆ 80 ಮಂದಿ ಮೃತಪಟ್ಟಿದ್ದು, 136 ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಾಣ ಹಾನಿ ಸಂಭವಿಸಿದ್ದು, 51 ಮಂದಿ ಮೃತಪಟ್ಟಿದ್ದಾರೆ. 123 ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 14 ಜನ ಮೃತಪಟ್ಟಿದ್ದು, ಆಂಧ್ರಪ್ರದೇಶದಲ್ಲಿ 12, ದೆಹಲಿಯಲ್ಲಿ ಇಬ್ಬರು, ಉತ್ತರಾಖಂಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಕಾಸ್‌ಗಂಜ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಣಾಮ ಬೀರಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. 117 ಮನೆಗಳಿಗೆ ಹಾನಿಯಾಗಿದ್ದು, ಹದಿಮೂರು ಪ್ರಾಣಿಗಳು ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಮರಗಳು ಉರುಳಿಬಿದ್ದು ರಸ್ತೆ ಸಂಚಾರ, ನೀರು ತುಂಬಿದ್ದರಿಂದ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಮಾನ ಹಾರಾಟ ಮತ್ತು ಮೆಟ್ರೊ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಅಸ್ಸಾಂ, ಮೇಘಾಲಯ, ಕೇರಳ, ಅಸ್ಸಾಂ, ಜಾರ್ಖಂಡ್‌ ಮತ್ತಿತರ ರಾಜ್ಯಗಳಲ್ಲೂ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.

1,161 ವಿಪತ್ತು ಪರಿಹಾರ ಬಿಡುಗಡೆ

ಪ್ರವಾಹ, ಭೂಕುಸಿತ, ಬರ ಮತ್ತಿತರ ಪ್ರಾಕೃತಿಕ ವಿಪತ್ತಿಗೆ ಒಳಗಾಗಿದ್ದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ 1,161 ಕೋಟಿ ರೂಪಾಯಿ ವಿಪತ್ತು ಪರಿಹಾರ ಬಿಡುಗಡೆ ಮಾಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಗೃಹ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ಬರದ ಹಿನ್ನೆಲೆಯಲ್ಲಿ ರಾಜಸ್ಥಾನಕ್ಕೆ ₹ 526.14 ಕೋಟಿ, ಪ್ರವಾಹ ಪೀಡಿತ ಅಸ್ಸಾಂ ರಾಜ್ಯಕ್ಕೆ ₹ 480.87 ಕೋಟಿ, ಪ್ರವಾಹ, ಭೂಕುಸಿತ ಸಂಭವಿಸಿದ್ದ ಹಿಮಾಚಲ ಪ್ರದೇಶಕ್ಕೆ ₹ 84.60 ಕೋಟಿ, ಸಿಕ್ಕಿಂಗೆ 67.40 ಕೋಟಿ, ಒಕ್ಕಿ ಚಂಡಮಾರುತದಿಂದಾಗಿ ಲಕ್ಷದ್ವೀಪಕ್ಕೆ ₹ 2.16 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ. 

ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ರಾಧ ಮೋಹನ್‌ ಸಿಂಗ್‌ ಹಾಗೂ ಗೃಹ, ಹಣಕಾಸು ಮತ್ತು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT