ಮಂಗಳವಾರ, ಮಾರ್ಚ್ 9, 2021
18 °C

ಸಕ್ಕರೆ ಮೇಲೆ ಸೆಸ್‌: ಅಭಿಪ್ರಾಯ ಪಡೆಯಲಿರುವ ಸಚಿವರ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ಸಕ್ಕರೆ ಮೇಲೆ ಸೆಸ್‌: ಅಭಿಪ್ರಾಯ ಪಡೆಯಲಿರುವ ಸಚಿವರ ಸಮಿತಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ಸಕ್ಕರೆ ಮೇಲೆ ಸೆಸ್‌ ವಿಧಿಸುವ ಕುರಿತು ರಚಿಸಲಾಗಿರುವ ರಾಜ್ಯಗಳ ಹಣಕಾಸು ಸಚಿವರ ಸಮಿತಿಯು, ಈ ಬಗ್ಗೆ ಕಾನೂನು ಮತ್ತು ಆಹಾರ ಸಚಿವಾಲಯದ ಸಲಹೆ ಕೇಳಲಿದೆ.

ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿನ ಸಮಿತಿಯು ಸೋಮವಾರ ಇಲ್ಲಿ ಮೊದಲ ಬಾರಿಗೆ ಸಭೆ ಸೇರಿ ಚರ್ಚೆ ನಡೆಸಿತು. ಸೆಸ್‌ ವಿಧಿಸಲು ಜಿಎಸ್‌ಟಿ ಮಂಡಳಿಗೆ ಅಧಿಕಾರ ಇರುವುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ.  ಜಿಎಸ್‌ಟಿ ಮೇಲೆ ಸೆಸ್‌ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇರುವುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಸೆಸ್‌ ಮೂಲಕ ಸಂಗ್ರಹವಾಗುವ ಮೊತ್ತವನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಹಾರ ಸಚಿವಾಲಯಕ್ಕೂ  ಮನವಿ ಮಾಡಿಕೊಳ್ಳಲು ಸಭೆ ನಿರ್ಧರಿಸಿದೆ.

ಈ ತಿಂಗಳಾಂತ್ಯಕ್ಕೆ ಈ ಎರಡೂ ಸಚಿವಾಲಯಗಳು ತಮ್ಮ ಅಭಿಪ್ರಾಯ ನೀಡಲು ಸೂಚಿಸಲಾಗಿದೆ. ಸಮಿತಿಯ ಮುಂದಿನ ಸಭೆ ಜೂನ್‌ 3ರಂದು ಮುಂಬೈನಲ್ಲಿ ನಡೆಯಲಿದೆ. ಸೆಸ್‌ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದಾದರೆ, ಜಿಎಸ್‌ಟಿ ಮಂಡಳಿಯು ಅದನ್ನು ಜಾರಿಗೆ ತರಲಿದೆ.

ಕಬ್ಬು ಬೆಳೆಗಾರರಿಗೆ ಹಣಕಾಸು ನೆರವು ನೀಡಲು ಸೆಸ್‌ ವಿಧಿಸುವುದನ್ನು ಜಾರಿಗೆ ತರಬೇಕು ಎಂದು ಆಹಾರ ಸಚಿವಾಲಯ ಸಲಹೆ ಮುಂದಿಟ್ಟಿದೆ. ಇದರ ಕಾರ್ಯಸಾಧ್ಯತೆ ಪರಿಶೀಲಿಸಲು ಜಿಎಸ್‌ಟಿ ಮಂಡಳಿಯು ಐದು ಮಂದಿ ಸಚಿವರ ಸಮಿತಿ ರಚಿಸಿದೆ.

ಜಿಎಸ್‌ಟಿ ಕಾಯ್ದೆಯಡಿ, ಸದ್ಯಕ್ಕೆ ವಿಲಾಸಿ ಸರಕು ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಿದ ಉತ್ಪನ್ನಗಳ ಮೇಲೆ ಸೆಸ್‌ ವಿಧಿಸಲಾಗುತ್ತಿದೆ.

ಗರಿಷ್ಠ ಮಟ್ಟದ ತೆರಿಗೆ ದರವಾದ ಶೇ 28ರ ಮೇಲೆ ಈ ಸೆಸ್‌ ಜಾರಿಯಲ್ಲಿ ಇದೆ. ಇದರಿಂದ ಸಂಗ್ರಹವಾದ ಮೊತ್ತವನ್ನು, ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗಿರುವ ನಷ್ಟ ಭರ್ತಿ ಮಾಡಿಕೊಡಲು ಬಳಸಲಾಗುತ್ತಿದೆ.

ಸಕ್ಕರೆಯ ಪ್ರತಿ ಕೆಜಿ ದರದ ಮೇಲೆ ₹ 3 ಗಳ ಸೆಸ್‌ ವಿಧಿಸಲು ಆಹಾರ ಸಚಿವಾಲಯ ‍ಪ್ರಸ್ತಾವ ಮುಂದಿಟ್ಟಿದೆ. ಇದರಿಂದ ₹ 6,700  ಕೋಟಿಗಳಷ್ಟು ವರಮಾನ ಬರುವ ನಿರೀಕ್ಷೆ ಇದೆ. ಇಥೆನಾಲ್‌ ಮೇಲಿನ ಜಿಎಸ್‌ಟಿ ದರವನ್ನು ಸದ್ಯದ ಶೇ 18 ರಿಂದ ಶೇ 12ಕ್ಕೆ ಇಳಿಸಲೂ ಆಹಾರ ಸಚಿವಾಲಯ ಪ್ರಸ್ತಾವ ಮುಂದಿಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.