ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಶಾಲೆ ಆಯ್ಕೆ ಅವಧಿ 16ರವರೆಗೆ ವಿಸ್ತರಣೆ

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣದ ಹಕ್ಕು (ಆರ್‌ಟಿಇ)ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದವರು ಶಾಲೆ ಮರುಆಯ್ಕೆಗೆ ಇದ್ದ ಅವಧಿಯನ್ನು ಮೇ 16ರವರೆಗೆ ವಿಸ್ತರಿಸಲಾಗಿದೆ.

ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುವ 1.22 ಲಕ್ಷ ಅರ್ಜಿದಾರರಿಗೆ 2ನೇ ಸುತ್ತಿನ ಲಾಟರಿ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಶಾಲೆ ಆಯ್ಕೆಯನ್ನು ಬದಲಿಸಿಕೊಳ್ಳಲು ಇದೇ 14 ಕೊನೆ ದಿನವಾಗಿತ್ತು. ಇದನ್ನು ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರೇಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ವರ್‌ ತೊಂದರೆಯಿಂದಾಗಿ ಶಾಲೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅನೇಕ ಪೋಷಕರು ದೂರು ನೀಡಿದ ನಂತರ ಇಲಾಖೆ ದಿನಾಂಕ ವಿಸ್ತರಿಸಿದೆ. ಇದರಿಂದ ಎರಡನೇ ಹಂತದ ಲಾಟರಿ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಕೆಲ ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಂತ್ರಿಕ ದೋಷ, ಪರದಾಡಿದ ಪೋಷಕರು: ಮರುಆಯ್ಕೆ ಬಯಸುವ ಪೋಷಕರು ಅರ್ಜಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಯನ್ನು ನೀಡಿದರೆ, ಅವರಿಗೆ ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಬರುತ್ತದೆ. ಒಟಿಪಿ ಪಡೆದ ಪೋಷಕರು ಅರ್ಜಿ ಸಲ್ಲಿಸಲು ನಗರದ ವಿವಿಧ ಕಂಪ್ಯೂಟರ್ ಸೆಂಟರ್‌ಗಳ ಎದುರು ಸಾಲುಗಟ್ಟಿದ್ದರು. ಸರ್ವರ್‌ ಸಮಸ್ಯೆಯಿಂದಾಗಿ ಅನೇಕ ತಾಸುಗಳವರೆಗೆ ಅರ್ಜಿ ಸಲ್ಲಿಕೆಯಾಗಲಿಲ್ಲ. ಇದರಿಂದ ಪೋಷಕರು ಪರದಾಡುವ ಸ್ಥಿತಿ ಉಂಟಾಯಿತು.

‘ಲಾಟರಿ ಪ್ರಕ್ರಿಯೆ ಪ್ರಾರಂಭಿಸುವ ಮೊದಲೇ ಅರ್ಜಿಯಲ್ಲಿ ಬದಲಾವಣೆಗೆ ಅವಕಾಶ ನೀಡಬೇಕಿತ್ತು. ಮೇ 11ರಂದು ಶಾಲೆ ಬದಲಿಸಿಕೊಳ್ಳಲು ಅನುಮತಿ ನೀಡಿದರು.

12ಕ್ಕೆ ಚುನಾವಣೆ ಇದ್ದಿದ್ದರಿಂದ ರಜೆ ಇತ್ತು. ಆ ನಂತರದ ದಿನ ಭಾನುವಾರವಾದ್ದರಿಂದ ಆ ದಿನವೂ ಆಯ್ಕೆಗೆ ಅವಕಾಶ ಸಿಕ್ಕಿಲ್ಲ. ಮೇ 14ಕ್ಕೆ ಕೊನೆ ದಿನವಾಗಿದ್ದರಿಂದ ಎಲ್ಲರೂ ಒಮ್ಮೆಲೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೀಗಾಗಿ ಸರ್ವರ್‌ ಕೈಕೊಟ್ಟಿದೆ. ಯೋಚಿಸಿ ದಿನಾಂಕ ನಿಗದಿ ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಆರ್‌ಟಿಇ ಕಾರ್ಯಕರ್ತ ಯೋಗಾನಂದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT