ತಾಯಿ ಎದುರೇ ಮಗಳ ಕತ್ತು ಕೊಯ್ದರು

7

ತಾಯಿ ಎದುರೇ ಮಗಳ ಕತ್ತು ಕೊಯ್ದರು

Published:
Updated:

ಬೆಂಗಳೂರು: ಬಾಣಾವರದಲ್ಲಿ ತಾಯಿ ಎದುರೇ ಸುನಂದಾ (34) ಎಂಬುವರ ಕತ್ತು ಕೊಯ್ದು ಕೊಲೆಗೆ ಯತ್ನಿಸಲಾಗಿದೆ. ಈ ಸಂಬಂಧ ಅವರ ಪತಿ ರವಿ ಪ್ರಕಾಶ್‌ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಯಾದ ಸುನಂದಾರನ್ನು ಕೆಲ ವರ್ಷಗಳ ಹಿಂದೆ ರವಿ ಪ್ರಕಾಶ್‌ಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಪತಿಯು ನಿತ್ಯವೂ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಕಿರುಕುಳದಿಂದ ಬೇಸತ್ತ ಸುನಂದಾ, ತಾಯಿ ಗೌರಮ್ಮ ಅವರ ಮನೆಗೆ ಹೋಗಿ ನೆಲೆಸಿದ್ದರು ಎಂದು  ಪೊಲೀಸರು ತಿಳಿಸಿದರು.

‘ಭಾನುವಾರ ರಾತ್ರಿ ಗೌರಮ್ಮ ಅವರ ಮನೆಗೆ ಹೋಗಿದ್ದ ರವಿ ಪ್ರಕಾಶ್‌, ಪತ್ನಿಯನ್ನು ತನ್ನ ಜತೆ ಕಳುಹಿಸುವಂತೆ ಒತ್ತಾಯಿಸಿದ್ದ. ಆತನೊಂದಿಗೆ ಹೋಗಲು ಸುನಂದಾ ಒಪ್ಪಿರಲಿಲ್ಲ. ಆಗ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಸುನಂದಾರ ಕತ್ತು ಕೊಯ್ದಿದ್ದ. ಜಗಳ ಬಿಡಿಸಲು ಗೌರಮ್ಮ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ’ ಎಂದರು.

‘ಶಬ್ದ ಕೇಳಿ ಸಹಾಯಕ್ಕೆ ಹೋದ ಸ್ಥಳೀಯರು, ಮಹಿಳೆಯನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ತಾಯಿ ನೀಡಿರುವ ಹೇಳಿಕೆ ಆಧರಿಸಿ ರವಿ ಪ್ರಕಾಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆತನನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದರು.

ಸ್ನೇಹಿತರಿಂದ ಆಟೊ ಚಾಲಕನ ಕೊಲೆ: ಬಸವೇಶ್ವರ ನಗರದಲ್ಲಿ ಆಟೊ ಚಾಲಕ ಡಿ. ಗೋಪಾಲ್ (34) ಎಂಬುವರನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ. ಅವರ ಸ್ನೇಹಿತರೇ ಕೃತ್ಯ ಎಸಗಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಗೋಪಾಲನಗರ ನಿವಾಸಿಯಾಗಿದ್ದ ಅವರು, ಸ್ನೇಹಿತರಾದ ವಿನಯ್ ಹಾಗೂ ರವಿ ಜತೆಯಲ್ಲಿ ರಾತ್ರಿ 8 ಗಂಟೆ ಬಾರ್‌ಗೆ ಹೋಗಿದ್ದರು. ಮದ್ಯ ಕುಡಿದ ನಂತರ ಹೊರಬಂದು ಆಟೊದಲ್ಲಿ ಕುಳಿತುಕೊಂಡಿದ್ದರು.  ಅದೇ ವೇಳೆ ಗೋಪಾಲ್‌ ಜತೆ ಜಗಳ ತೆಗೆದಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹೊಡೆದಿದ್ದರು. ಗೋಪಾಲ್‌ ಚೀರಾಟ ಕೇಳಿ ಸ್ಥಳೀಯರು ಆಟೊ ಬಳಿ ಬರುವಷ್ಟರಲ್ಲೇ ಆರೋಪಿಗಳು ಓಡಿಹೋಗಿದ್ದಾರೆ ಎಂದು ಬಸವೇಶ್ವರನಗರ ಪೊಲೀಸರು ತಿಳಿಸಿದರು.

‘ರಕ್ತದ ಮಡುವಿನಲ್ಲಿದ್ದ ಗೋಪಾಲ್‌ರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು’ ಎಂದರು.

‘ಘಟನೆ ಸಂಬಂಧ ವಿನಯ್ ಹಾಗೂ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry