ಶುಕ್ರವಾರ, ಫೆಬ್ರವರಿ 26, 2021
31 °C
ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ: ವೇದವ್ಯಾಸ ಆರೋಪ

ಪಾಲಿಕೆ ಮಾಜಿ ಸದಸ್ಯನ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಲಿಕೆ ಮಾಜಿ ಸದಸ್ಯನ ಮೇಲೆ ಹಲ್ಲೆ

ಬೆಂಗಳೂರು: ವಿ.ವಿ.ಪುರದ ಸಜ್ಜನ್‌ ರಾವ್ ವೃತ್ತ ಬಳಿ ಪಾಲಿಕೆಯ ಮಾಜಿ ಸದಸ್ಯ ವೇದವ್ಯಾಸ ಭಟ್ ಅವರ ‌ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಮಾವಳ್ಳಿ ನಿವಾಸಿಯಾದ ಅವರು, ಪತ್ರಿಕಾ ವಿತರಕರೂ ಆಗಿದ್ದರು. ಸೋಮವಾರ ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಪತ್ರಿಕೆಗಳನ್ನು ವಿತರಣೆ ಮಾಡಲು ಹೊರಟಿದ್ದ ವೇಳೆಯಲ್ಲೇ ಈ ಘಟನೆ ನಡೆದಿದೆ. ಗಾಯಗೊಂಡಿರುವ ಅವರನ್ನು ಸ್ಥಳೀಯ ಅಭಯ್ ಆಸ್ಪತ್ರೆಗೆ ದಾಖಲಿಸಲಾಗಿದೆ.

’ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರ ಪೈಕಿ ಇಬ್ಬರು ದುಷ್ಕರ್ಮಿಗಳು, ವೇದವ್ಯಾಸ ಜತೆ ಜಗಳ ತೆಗೆದಿದ್ದರು. ಅದನ್ನು ಪ್ರಶ್ನಿಸುತ್ತಿದ್ದಂತೆ ಮೂಗಿಗೆ ಗುದ್ದಿದ್ದರು. ಸ್ಥಳದಲ್ಲೇ ಅವರು ಕುಸಿದು ಬಿದ್ದರು. ಅವರ ಕಿರುಚಾಟ ಕೇಳಿದ ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿಗಳು ಓಡಿಹೋದರು’ ಎಂದು ವಿ.ವಿ.ಪುರ ಪೊಲೀಸರು ತಿಳಿಸಿದರು.

‘ನಿತ್ಯವೂ ಬೆಳಿಗ್ಗೆ ಹೋಟೆಲ್‌ ರಸ್ತೆ ಮೂಲಕವೇ ವೇದವ್ಯಾಸ ಹೋಗುತ್ತಿದ್ದರು. ಅದನ್ನು ತಿಳಿದುಕೊಂಡೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ಯಾರೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅಪರಿಚಿತರೆಂದೇ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದರು.

‘ಘಟನೆಯಲ್ಲಿ ವೇದವ್ಯಾಸ ಅವರ ಮೂಗಿಗೆ ತೀವ್ರ ಪೆಟ್ಟು ಬಿದ್ದಿದೆ. ಉಸಿರಾಡಲು ತೊಂದರೆ ಪಡುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ’ ಎಂದರು.

ರಾಜಕೀಯ ದ್ವೇಷದಿಂದ ಹಲ್ಲೆ: ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ವೇದವ್ಯಾಸ, ‘ರಾಜಕೀಯ ದ್ವೇಷದಿಂದ ಈ ಘಟನೆ ನಡೆದಿದೆ’ ಎಂದು ದೂರಿದ್ದಾರೆ.

‘ನನ್ನ ಜತೆ ಜಗಳ ತೆಗೆದಿದ್ದ ವೇಳೆ ದುಷ್ಕರ್ಮಿಯೊಬ್ಬ, ‘ನಿನಗೆ ಏಕೆ ಬೇಕು ರಾಜಕೀಯ. ಸುಮ್ಮನೇ ಪೇಪರ್ ಮಾರುತ್ತ ಜೀವನ ನಡೆಸು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ’ ಎಂದಿದ್ದ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೆ. ಅದನ್ನು ಸಹಿಸದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ. ದೇವರಾಜ್‌ ಹಾಗೂ ಆತನ ಬೆಂಬಲಿಗರೇ ಈ ದುಷ್ಕರ್ಮಿಗಳನ್ನು ನನ್ನ ಕಡೆ ಕಳುಹಿಸಿ ಹಲ್ಲೆ ಮಾಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಭ್ಯರ್ಥಿ ದೇವರಾಜ್, ‘ಚುನಾವಣೆ ವೇಳೆ ಮಾತ್ರ ನಾವು ಬೇರೆ ಬೇರೆ ಪಕ್ಷ. ಬಳಿಕ ಎಲ್ಲರೂ ಸ್ನೇಹಿತರೇ. ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಹಲ್ಲೆ ನಡೆಸಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗುತ್ತದೆ’ ಎಂದರು.

ಪಾಲಿಕೆ ಸದಸ್ಯೆಯ ಸಹೋದರ

ಹಲ್ಲೆಗೀಡಾಗಿರುವ ವೇದವ್ಯಾಸ, ವಿ.ವಿ.ಪುರ ವಾರ್ಡ್‌ನ ಹಾಲಿ ಪಾಲಿಕೆ ಸದಸ್ಯೆ ವಾಣಿ ವಿ. ರಾವ್‌ ಸಹೋದರ.

ಘಟನೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ವಾಣಿ, ‘ನಾವಿಬ್ಬರು ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದೇವೆ. ಅದೇ ಕಾರಣಕ್ಕೆ ಎದುರಾಳಿ ಕಡೆಯವರು ಈ ಕೃತ್ಯ ಮಾಡಿಸಿದ್ದಾರೆ’ ಎಂದರು.

‘ಮತ ಚಲಾವಣೆ ದಿನವೂ ನನಗೆ ಬೆದರಿಕೆ ಹಾಕಿದ್ದರು. ಆ ಬಗ್ಗೆ

ತಲೆಕೆಡಿಸಿಕೊಂಡಿರಲಿಲ್ಲ. ಈಗ ನಡೆದಿರುವ ಘಟನೆ ಗಂಭೀರವಾದದ್ದು. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.