ಚಿಕ್ಕಬಳ್ಳಾಪುರದಲ್ಲಿ ಮತ ಎಣಿಕೆ

7

ಚಿಕ್ಕಬಳ್ಳಾಪುರದಲ್ಲಿ ಮತ ಎಣಿಕೆ

Published:
Updated:

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡದ ಬಳಿ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿಕೊಂಡಂತೆ ಇರುವ ಶಾ ಶಿಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡಿತು.

ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಮೊದಲಿಗೆ ಅಂಚೆಮತಗಳ ಎಣಿಕೆ ಕಾರ್ಯ ನಡೆದಿದೆ. ಬಳಿಕ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆ ಮೂಲಕ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿರುವ 77 ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ.

ಮತ ಎಣಿಕೆ ಕೇಂದ್ರದಲ್ಲಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದು ಕೊಠಡಿ ಸಜ್ಜುಗೊಳಿಸಿದ್ದು, ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ಕ್ಷೇತ್ರದ ಮತ ಎಣಿಕೆಗಾಗಿ ತಲಾ ಎರಡು ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ. ಚಿಂತಾಮಣಿ ಕ್ಷೇತ್ರದ ಮತ ಎಣಿಕೆ ಕೊಠಡಿಗಳಲ್ಲಿ 20 ಟೇಬಲ್‌ಗಳನ್ನು ಸಜ್ಜುಗೊಳಿಸಿದ್ದು, ಉಳಿದೆಲ್ಲ ಕ್ಷೇತ್ರಗಳ ಕೊಠಡಿಗಳಲ್ಲಿ ತಲಾ 14 ರಂತೆ ಒಟ್ಟು 76 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಗೌರಿಬಿದನೂರು, ಬಾಗೇಪಲ್ಲಿ ಕ್ಷೇತ್ರಗಳ ಮತ ಎಣಿಕೆ ತಲಾ 19 ಸುತ್ತು, ಚಿಕ್ಕಬಳ್ಳಾಪುರ 18, ಶಿಡ್ಲಘಟ್ಟ 17 ಮತ್ತು ಚಿಂತಾಮಣಿ ಕ್ಷೇತ್ರದ ಮತ ಎಣಿಕೆ 14 ಸುತ್ತುಗಳಲ್ಲಿ ನಡೆಯಲಿದೆ. 87 ಸುತ್ತಗಳಲ್ಲಿ ಐದು ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹಣೆಬರಹ ಅವರ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಸ್ಪಷ್ಟವಾಗಿ ತಿಳಿಯಲಿದೆ.

ಚಿಂತಾಮಣಿ ಕ್ಷೇತ್ರದ ಮತ ಎಣಿಕೆ ನಡೆಯುವ ಕೊಠಡಿಯಲ್ಲಿ 20 ಮತ ಎಣಿಕೆ ಸಿಬ್ಬಂದಿ ನಿಯೋಜಿಸಿದ್ದು, ಉಳಿದೆಲ್ಲ ಕ್ಷೇತ್ರಗಳಿಗೆ ತಲಾ 14 ರಂತೆ ಒಟ್ಟು 76 ಎಣಿಕೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಜತೆಗೆ ಇದೇ ಮಾದರಿಯಲ್ಲಿ ತಲಾ 76 ಎಣಿಕೆ ಮೇಲ್ವಿಚಾರಕರು ಮತ್ತು ಎಣಿಕೆ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಪ್ರಯುಕ್ತ ಮೇ 14ರ ಮಧ್ಯರಾತ್ರಿ 12 ರಿಂದ ಮಂಗಳವಾರ ಮಧ್ಯರಾತ್ರಿ 12ರ ವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 6 ರಿಂದ ಮೇ 16ರ ಮಧ್ಯರಾತ್ರಿ 12ರ ವರೆಗೆ ಜಿಲ್ಲೆಯಾದ್ಯಂತ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮೂರು ಹಂತದ ಭದ್ರತೆ

ಮತ ಎಣಿಕೆ ಕೇಂದ್ರದಲ್ಲಿ ಅರೆಸೇನಾ ಪಡೆ, ಸಶಸ್ತ್ರ ಮೀಸಲು ಪಡೆ ಮತ್ತು ಜಿಲ್ಲೆಯ ಪೊಲೀಸರು ಹೀಗೆ ಮೂರು ಹಂತಗಳಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಇಟ್ಟಿರುವ ಕೊಣೆಗೆ ವಿಶೇಷ ಭದ್ರತೆ ಕಲ್ಪಿಸಿ, ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ.

ಸಿಬ್ಬಂದಿಗೆ ವಸ್ತ್ರ ಸಂಹಿತೆ

ಮತ ಎಣಿಕೆ ಕೇಂದ್ರದಲ್ಲಿ ಭದ್ರತಾ ಕೊಠಡಿ ಮತ್ತು ಎಣಿಕೆ ಕೊಠಡಿಗಳ ನಡುವೆ ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿಗೆ ಕ್ಷೇತ್ರವಾರು ವಿವಿಧ ಬಣ್ಣಗಳ ವಸ್ತ್ರ ಸಂಹಿತೆ ನಿಗದಿ ಮಾಡಲಾಗಿದೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಕೆಂಪು, ಚಿಂತಾಮಣಿಗೆ ಕಂದು, ಶಿಡ್ಲಘಟ್ಟಕ್ಕೆ ಕೇಸರಿ, ಚಿಕ್ಕಬಳ್ಳಾಪುರಕ್ಕೆ ಹಳದಿ ಮತ್ತು ಗೌರಿಬಿದನೂರು ಕ್ಷೇತ್ರದ ಇವಿಎಂ ಸಾಗಿಸುವ ಸಿಬ್ಬಂದಿಗೆ ನೀಲಿ ಬಣ್ಣದ ಟೀ -ಶರ್ಟ್‌ಗಳನ್ನು ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry