ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡಿನಲ್ಲಿ ಅರಳಿದ ಕಮಲ

Last Updated 15 ಮೇ 2018, 5:39 IST
ಅಕ್ಷರ ಗಾತ್ರ

ಮಂಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಭಿನ್ನವಾದ ಫಲಿತಾಂಶ ಬರತೊಡಗಿದ್ದು, ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯ ಗಳಿಸುವ ಸನಿಹದಲ್ಲಿದ್ದರೆ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಡೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ವೈ.ಎಸ್.ವಿ.ದತ್ತ ಸೋಲಿನತ್ತ ಸರಿದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಸಿ.ಟಿ.ರವಿ, ಮೂಡಿಗೆರೆಯಲ್ಲಿ ಎಂ.ಪಿ.ಕುಮಾರಸ್ವಾಮಿ, ಕಡೂರಿನಲ್ಲಿ ಬೆಳ್ಳಿಪ್ರಕಾಶ್ ಹಾಗೂ ತರೀಕೆರೆಯಲ್ಲಿ ಡಿ.ಎಸ್.ಸುರೇಶ್‌ ಗೆಲುವಿನ ಹಂತದಲ್ಲಿದ್ದಾರೆ. ಶೃಂಗೇರಿಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಗೆಲುವು ಸಾಧಿಸುವ ಹಂತದಲ್ಲಿದ್ದಾರೆ.

ಈ ಬಾರಿ ಘಟಾನುಘಟಿಗಳ ಕಣವಾಗಿ ಚಿಕ್ಕಮಗಳೂರು ಬದಲಾಗಿತ್ತು. ಹಿರಿಯ ಕಾಂಗ್ರೆಸ್ ನಾಯಕ ಬಿ.ಎಲ್‌.ಶಂಕರ್‌ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದರು.  ಮೂಡಿಗೆರೆಯಲ್ಲಿ ಪಕ್ಷದ ಹಿರಿಯ ನಾಯಕಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅವರು ಕಣದಲ್ಲಿದ್ದರು. ಇಬ್ಬರೂ ಇದೀಗ ಸೋಲಿನತ್ತ ತೆರಳಿದ್ದಾರೆ. ಶೃಂಗೇರಿಯಲ್ಲಿ ಹಾಲಿ ಶಾಸಕ ಜೀವರಾಜ್‌ ಅವರು ಸೋಲಿನತ್ತ ಸಾಗಿದ್ದಾರೆ.
ಕಳೆದ ಬಾರಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬಿಜೆಪಿಗೆ 2, ಜೆಡಿಎಸ್‌ಗೆ 2 ಹಾಗೂ ಕಾಂಗ್ರೆಸ್‌ಗೆ 1 ಸ್ಥಾನ ಲಭಿಸಿತ್ತು. ಈ ಬಾರಿ ಜೆಡಿಎಸ್‌ ಎರಡೂ ಸ್ಥಾನಗಳನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದು, ಕಾಂಗ್ರೆಸ್‌ 1 ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಲಿದೆ. ಬಿಜೆಪಿಗೆ 2 ಸ್ಥಾನಗಳು ಹೆಚ್ಚುವರಿಯಾಗಿ ಲಭಿಸಿವೆ.

ಮೋದಿ ಅಲೆ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಚಾರ ಪ್ರವಾಸದ ಕೊನೆಯ ಹಂತದಲ್ಲಿ ಚಿಕ್ಕಮಗಳೂರಿಗೆ ಬಂದಿದ್ದರು. ಅವರನ್ನು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಎದುರುಗೊಂಡಿದ್ದರು. ಅದುವೇ ಇದೀಗ ಮತವಾಗಿ ಪರಿವರ್ತನೆಗೊಂಡಿದೆ ಎಂಬ ಅಂಶ ಸಾಬೀತಾಗುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಹ ಚಿಕ್ಕಮಗಳೂರಿಗೆ ಭೇಟಿ ಕೊಟ್ಟಿದ್ದರು. ಆದರೆ ಅವರ ಪ್ರಭಾವ ಜಿಲ್ಲೆಯಲ್ಲಿ ಅಷ್ಟಾಗಿ ಬೀರಿಲ್ಲ ಎಂಬುದು ಸ್ಪಷ್ಟವಾಗಿದೆ. ಜೆಡಿಎಸ್‌ ವರಿಷ್ಠ ದೇವೇಗೌಡರು ಶೃಂಗೇರಿಯಲ್ಲಿ 12 ದಿನಗಳ ಹೋಮ ಮಾಡಿಸಿದ್ದರು. ಪಕ್ಷದ ಸಜ್ಜನ ನಾಯಕರಾದ ವೈ.ಎಸ್‌.ವಿ.ದತ್ತ ಅವರನ್ನು ಮತದಾರರು ಮತ್ತೆ ಕೈಹಿಡಿಯುತ್ತಾರೆ ಎಂಬ ಆಶಯಕ್ಕೆ ಚ್ಯುತಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT