ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಹಿನ್ನಡೆ

7

ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಹಿನ್ನಡೆ

Published:
Updated:
ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಹಿನ್ನಡೆ

ಬೆಂಗಳೂರು: ವಿಧಾನಸಭೆ ಮತಎಣಿಕೆ ಪ್ರಗತಿಯಲ್ಲಿದ್ದು, ಸಿದ್ದರಾಮಯ್ಯ ಸಚಿವ ಸಂಪುಟದ ಕೆಲವು ಸಚಿವರು ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸೋತ ಮೊದಲ ಸಚಿವರೆನಿಸಿದರು. ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಸಿದ್ದರಾಮಯ್ಯ ಸ್ವಂತ ಜಿಲ್ಲೆ ಮೈಸೂರಿನ ಚಾಮುಂಡೇಶ್ವರಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದು, ಬಾಗಲಕೋಟೆಯ ಬಾದಾಮಿಯಲ್ಲಿ ಅಲ್ಪ ಮುನ್ನಡೆ ಉಳಿಸಿಕೊಂಡಿದ್ದಾರೆ. ಬಿಜೆಪಿ 106 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 64 ಕ್ಷೇತ್ರಗಳಲ್ಲಿ, ಜೆಡಿಎಸ್‌ 38 ಕ್ಷೇತ್ರಗಳಲ್ಲಿ ಮುಂದಿದೆ.

ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಉಮಾಶ್ರೀ, ಹಾವೇರಿ ಕ್ಷೇತ್ರದಲ್ಲಿ ರುದ್ರಪ್ಪ ಲಮಾಣಿ, ಧಾರವಾಡ ಕಲಘಟಗಿಯಲ್ಲಿ ಸಂತೋಷ್‌ ಲಾಡ್‌, ಟಿ.ನರಸೀಪುರ ಕ್ಷೇತ್ರದಲ್ಲಿ ಎಚ್‌.ಸಿ.ಮಹದೇವಪ್ಪ, ಧಾರವಾಡದಲ್ಲಿ ವಿನಯ ಕುಲಕರ್ಣಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿ. ರಮಾನಾಥ ರೈ, ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಡಾ.ಶರಣಪ್ರಕಾಶ ಪಾಟೀಲ್‌, ತುಮಕೂರು ಜಿಲ್ಲೆಯ ಶಿರಾದಲ್ಲಿ ಟಿ.ಬಿ.ಜಯಚಂದ್ರ ಹಿನ್ನಡೆಯಲ್ಲಿದ್ದಾರೆ. ಮಾಜಿ ಸಚಿವರಾದ ಅಭಯಚಂದ್ರ ಜೈನ್‌ (ಮೂಡುಬಿದಿರೆ), ಕಿಮ್ಮನೆ ರತ್ನಾಕರ (ತೀರ್ಥಹಳ್ಳಿ) ಸೋಲನುಭವಿಸಿದ್ದಾರೆ. ಕೊಪ್ಪಳದಲ್ಲಿ ಬಸವರಾಜ ರಾಯರೆಡ್ಡಿ ಬಿಜೆಪಿಯ ಹಾಲಪ್ಪ ಆಚಾರ್‌ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. 

ಬಿಜೆಪಿಯ ಚಂದ್ರಪ್ಪ, ಹೊಳಲ್ಕೆರೆ ಕ್ಷೇತ್ರದಲ್ಲಿ ಆಂಜನೇಯ ವಿರುದ್ಧ ಸುಲಭ ಗೆಲುವನ್ನು ಸಾಧಿಸಿದರು.

ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್‌  ಜಯಗಳಿಸಿದರೆ, ಮಂಗಳೂರು ಉತ್ತರದಲ್ಲಿ ಬಿಜೆಪಿಯ ಹೊಸಮುಖ ಡಾ.ಭರತ್‌ ಶೆಟ್ಟಿ ಅವರು, ಕಾಂಗ್ರೆಸ್‌ನ ಮೊಹಿಯುದ್ದೀನ್‌ ಬಾವಾ ವಿರುದ್ಧ ಗೆಲುವನ್ನು ಸಾಧಿಸಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮೊದಲ ಬಾರಿ ಕಣಕ್ಕಿಳಿದ ವೇದವ್ಯಾಸ ಭಟ್‌ (ಬಿಜೆಪಿ), ಶಾಸಕ ಜೆ.ಆರ್‌. ಲೋಬೊ ವಿರುದ್ಧ ಗೆಲುವನ್ನು ಸಾಧಿಸಿದರು.

ಬಿಜೆಪಿ ಮುಖಂಡ ಶ್ರೀರಾಮುಲು, ಮೊಳಕಾಲ್ಮುರು ಕ್ಷೇತ್ರದಲ್ಲಿ ಮುಂದಿದ್ದರೆ, ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಿನ್ನಡೆಯಲ್ಲಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ಡಾ.ಪರಮೇಶ್ವರ ಮುಂದಿದ್ದಾರೆ. ಹಾವೇರಿಯಲ್ಲಿ ಬಿಜೆಪಿಯ ನೆಹರೂ ಓಲೇಕಾರ, ಲಮಾಣಿ ವಿರುದ್ಧ ಗೆಲುವಿನ ಹಾದಿಯಲ್ಲಿದ್ದಾರೆ.

ಸೋದರರ ಸಮರ ಕಾಣುತ್ತಿರುವ ಶಿವಮೊಗ್ಗದ ಸೊರಬ ಕ್ಷೇತ್ರದಲ್ಲಿ ಕುಮಾರ್‌ ಬಂಗಾರಪ್ಪ (ಬಿಜೆಪಿ), ಜೆಡಿಎಸ್‌ನ ಮಧು ಬಂಗಾರಪ್ಪ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಮುನ್ನಡೆಯಲ್ಲಿದ್ದರೆ, ಪಕ್ಷದ ಉತ್ತರ ಕ್ಷೇತ್ರದಲ್ಲಿ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಮುನ್ನಡೆಯಲ್ಲಿದ್ದಾರೆ.

ಕೊಳ್ಳೇಗಾದಲ್ಲಿ ಬಿಎಸ್‌ಪಿ ಅಭ್ಯರ್ಥಿ ಎನ್‌.ಮಹೇಶ್‌ ಗೆಲುವು ಕಂಡರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿದ್ದ ಗೀತಾ ಮಹದೇವ ಪ್ರಸಾದ್‌, ಬಿಜೆಪಿಯ ನಿರಂಜನ್‌ ವಿರುದ್ಧ ಹಿನ್ನಡೆಯಲ್ಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ವೈ.ನಂಜೇಗೌಡ ಜಯಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry