ಶೆಟ್ಟರ್‌ಗೆ ಡಬಲ್‌ ಹ್ಯಾಟ್ರಿಕ್ ಗೆಲುವು

7

ಶೆಟ್ಟರ್‌ಗೆ ಡಬಲ್‌ ಹ್ಯಾಟ್ರಿಕ್ ಗೆಲುವು

Published:
Updated:
ಶೆಟ್ಟರ್‌ಗೆ ಡಬಲ್‌ ಹ್ಯಾಟ್ರಿಕ್ ಗೆಲುವು

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಅವರು ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಸತತ ಆರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

1994ರಿಂದ ಸತತ ಆರು ಚುನಾವಣೆಗಳಲ್ಲಿ ಶೆಟ್ಟರ್ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಹೇಶ ನಾಲವಾಡ ಅವರು ತೀವ್ರ ಸ್ಪರ್ಧೆ ಒಡ್ಡಿದ್ದರಾದರೂ, ಅವರ ಗೆಲುವಿನ ಓಟ ತಡೆಯುವಲ್ಲಿ ಯಶಸ್ವಿಯಾಗಿಲ್ಲ. ನಾಲವಾಡ ಎರಡನೇ ಬಾರಿಗೆ ಶೆಟ್ಟರ್ ವಿರುದ್ಧ ಸೋಲನುಭವಿಸಿದ್ದಾರೆ.

‌‌ಕಾಂಗ್ರೆಸ್‌ಗೆ ಒಳ ಏಟು: ಕಾಂಗ್ರೆಸ್‌ನ ಡಾ.ಮಹೇಶ ನಾಲವಾಡ ಗೆಲುವಿಗೆ ಶತಾಯ ಗತಾಯ ಯತ್ನ ನಡೆಸಿದರಾದರೂ, ಅವರದ್ದೇ ಪಕ್ಷದ ಮುಖಂಡರು ಅವರ ಸೋಲಿಗೆ ಕಾರಣರಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ, ಪಾಲಿಕೆ ಸದಸ್ಯ ಪ್ರಫುಲ್‌ಚಂದ್ರ ರಾಯನಗೌಡರಿಗೆ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಅವರಿಬ್ಬರನ್ನು ಹಿಂದಿಕ್ಕಿ ಟಿಕೆಟ್‌ ಪಡೆಯುವಲ್ಲಿ ಡಾ. ಮಹೇಶ ನಾಲವಾಡ ಯಶಸ್ವಿಯಾಗಿದ್ದರು. ಆದರೆ, ಇಬ್ಬರೂ ಅಸಮಾಧಾನಗೊಂಡು ಪ್ರಚಾರ ಚಟುವಟಿಕೆಯಿಂದ ದೂರ ಉಳಿದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಪ್ರಚಾರ ಸಬೆಗೂ ಇಬ್ಬರೂ ಬಂದಿರಲಿಲ್ಲ. ಪ್ರಫುಲ್‌ಚಂದ್ರ ರಾಯನಗೌಡ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಭೇಟಿಯಾಗಿ ಸಮಾಧಾನ ಪಡಿಸಿದ್ದರು. ಛಬ್ಬಿಯೂ ಕೊನೆಗಳಿಗೆಯಲ್ಲಿ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಂಡಿದ್ದರು.

ಭದ್ರಕೋಟೆ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

1957ರಲ್ಲಿ ನಡೆದ ಮೊದಲ ಚುನಾವಣೆಯಿಂದ ಮೊದಲ ನಾಲ್ಕು ಚುನಾವಣೆಯವರೆಗೂ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ನಂತರ ಮೂರು ಚುನಾವಣೆಯಲ್ಲಿ ಜನತಾ ಪಕ್ಷದ ಪಾಲಾಗಿತ್ತು. 1989ರಲ್ಲಿ ಮತ್ತೇ ಕಾಂಗ್ರೆಸ್‌ ಒಲಿದಿತ್ತು. 1994 ರಿಂದ ಕಳೆದು ಆರು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ಭದ್ರಕೋಟೆಯನ್ನಾಗಿಸಿಕೊಂಡಿದೆ.

ಇಬ್ಬರು ಮುಖ್ಯಮಂತ್ರಿ ನೀಡಿದ ಕ್ಷೇತ್ರ

ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಈ ಕ್ಷೇತ್ರಕ್ಕೆ ಸಲ್ಲುತ್ತದೆ. 1988ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಎಸ್‌.ಆರ್‌. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು. 2012ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಜಗದೀಶ ಶೆಟ್ಟರ್‌ ಆಯ್ಕೆಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry