ಸಿ.ಎಸ್. ಶಿವಳ್ಳಿಗೆ ಸತತ ಎರಡನೇ ಗೆಲುವು

7

ಸಿ.ಎಸ್. ಶಿವಳ್ಳಿಗೆ ಸತತ ಎರಡನೇ ಗೆಲುವು

Published:
Updated:
ಸಿ.ಎಸ್. ಶಿವಳ್ಳಿಗೆ ಸತತ ಎರಡನೇ ಗೆಲುವು

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್. ಶಿವಳ್ಳಿ ಸತತ ಎರಡನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ‘ಸತತ ಎರಡು ಬಾರಿ ಯಾರಿಗೂ ನಾವು ಮಣೆ ಹಾಕುವುದಿಲ್ಲ’ ಎಂಬ ರಾಜಕೀಯ ಪ್ರತೀತಿಯನ್ನು ಕುಂದಗೋಳದ ಮತದಾರರು ಸುಳ್ಳಾಗಿಸಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದ ಶಿವಳ್ಳಿ ಅವರಿಗೆ, ಸ್ವಪ್ರತಿಷ್ಠೆ ಮತ್ತು ಪಕ್ಷದೊಳಗಿನ ಆಂತರಿಕ ಭಿನ್ನಮತ ಸವಾಲಾಗಿ ಪರಿಣಮಿಸಿತ್ತು. ಆದರೆ, ತಮ್ಮ ಅವಧಿಯ ಅಭಿವೃದ್ಧಿ ಕಾರ್ಯ ಅವರನ್ನು ಗೆಲುವಿನ ದಡ ಸೇರಿಸಿದೆ.

ಆರಂಭದ ಮತ ಎಣಿಕೆಯಲ್ಲಿ ಶಿವಳ್ಳಿ 22,719 ಹಾಗೂ ಬಿಜೆಪಿಯ ಎಸ್‌.ಐ. ಚಿಕ್ಕನಗೌಡ್ರ 22,539 ಅಂತರದಲ್ಲಿ ಇದ್ದರು. ಶಿವಳ್ಳಿ ಕೇವಲ 180 ಮತಗಳ ಅಂತರದಲ್ಲಿ ಮುಂದಿದ್ದರು. ಪ್ರತಿ ಸುತ್ತಿನ ಎಣಿಕೆಯಲ್ಲೂ ಇಬ್ಬರ ನಡುವಿನ ಅಂತರ ಮೂರಂಕಿ ದಾಟದೆ ಸಾಗಿತ್ತು. ಆದರೆ, ಅಂತಿಮವಾಗಿ ಶಿವಳ್ಳಿ ಚಿಕ್ಕನಗೌಡ್ರ ಅವರನ್ನು ಹಿಂದಿಕ್ಕಿದರು.

ಸ್ಥಳೀಯ ಸಂಸ್ಥೆಗಳ ಚುಣಾವಣೆಗಳಲ್ಲಿ ದಲಿತರನ್ನು ಕಡೆಗಣಿಸಿ, ತಮ್ಮ ಕುರುಬ ಸಮುದಾಯ ಹಾಗೂ ತಮ್ಮ ಆಪ್ತ ವಲಯಕ್ಕೆ ಟಿಕೆಟ್ ಕೊಟ್ಟಿದ್ದಾರೆ ಎಂದು ಪಕ್ಷದ ಕೆಲ ದಲಿತ ಮುಖಂಡರು ಹಾಗೂ ಹಿಂದುಳಿದ ವರ್ಗದ ಕೆಲ ಮುಖಂಡರು ಶಿವಳ್ಳಿ ಅವರಿಂದ ದೂರವಾಗಿ, ಕಡೆ ಗಳಿಗೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಪಕ್ಷದೊಳಗಿದ್ದವರ ಅತೃಪ್ತಿಯನ್ನು ಕಡೆಗೂ ಶಮನಗೊಳಿಸುವಲ್ಲಿ ಶಿವಳ್ಳಿ ಯಶಸ್ವಿಯಾಗಿದ್ದು, ಅವರ ಗೆಲುವಿನ ಹಾದಿಯನ್ನು ಸುಲಭಗೊಳಿಸಿತು.

ಮೋಡಿ ಮಾಡದ ಬಿಜೆಪಿ–ಕೆಜೆಪಿ ದೋಸ್ತಿ:

2013ರ ಚುನಾವಣೆಯಲ್ಲಿ ಬಿಜೆಪಿ ರಾಜದಲ್ಲಿ ಕೆಜೆಪಿಯಾಗಿ ಕವಲೊಡೆದಿತ್ತು. ಆಗ ಕ್ಷೇತ್ರದಲ್ಲಿ ಕೆಜೆಪಿಯಿಂದ ಚಿಕ್ಕನಗೌಡ್ರ ಹಾಗೂ ಬಿಜೆಪಿಯಿಂದ ಎಂ.ಆರ್. ಪಾಟೀಲ ಹುರಿಯಾಳಾಗಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿಯೊಳಗೆ ಕೆಜೆಪಿ ವಿಲೀನವಾಗಿದ್ದರಿಂದ, ತಮ್ಮ ಗೆಲುವಿನ ಹಾದಿ ಬಲು ಸುಲಭ ಎಂದು ಚಿಕ್ಕನಗೌಡ್ರ ಭಾವಿಸಿದ್ದರು. ಆದರೆ, ಅವರು ಅಂದುಕೊಂಡಂತೆ ರಾಜಕೀಯ ಸನ್ನಿವೇಶ ಇರಲಿಲ್ಲ. ಅಲ್ಲದೆ, ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ಆರ್. ಪಾಟೀಲ ಅವರ ಮುನಿಸು ಕೂಡ, ಚಿಕ್ಕನಗೌಡ್ರ ಸೋಲಿಗೆ ಒಂದು ರೀತಿಯಲ್ಲೂ ಕಾರಣವಾಯಿತು ಎನ್ನುತ್ತಾರೆ ಕುಂದಗೋಳದ ಜನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry